ತಿರುಪತಿ ತಿಮ್ಮಪ್ಪನಿಗೆ ಮೂರು ಕೆ.ಜಿ. ಚಿನ್ನ: ಮಲ್ಯ ಸಮರ್ಪಣೆ

7

ತಿರುಪತಿ ತಿಮ್ಮಪ್ಪನಿಗೆ ಮೂರು ಕೆ.ಜಿ. ಚಿನ್ನ: ಮಲ್ಯ ಸಮರ್ಪಣೆ

Published:
Updated:

ತಿರುಪತಿ (ಪಿಟಿಐ): ಬಿಕ್ಕಟ್ಟಿನಿಂದ ನಲುಗುತ್ತಿರುವ ಕಿಂಗ್ ಫಿಷರ್ ಏರ್ ಲೈನ್ಸ್ ಪ್ರವರ್ತಕ ಹಾಗೂ ಯುಬಿ ಸಮೂಹ ಸಂಸ್ಥೆಗಳ ಅಧ್ಯಕ್ಷ ವಿಜಯ್ ಮಲ್ಯ ಅವರು ಖ್ಯಾತ ತಿರುಪತಿ ವೆಂಕಟೆಶ್ವರ ದೇಗುಲದಲ್ಲಿ ಮಂಗಳವಾರ ತಮ್ಮ 58ನೇ ಜನ್ಮದಿನದಂದು ಮೂರು ಕಿಲೋಗ್ರಾಂ ತೂಕದ ಚಿನ್ನದ ಗಟ್ಟಿಗಳನ್ನು ವೆಂಕಟೇಶ್ವರನಿಗೆ ಅರ್ಪಿಸಿದರು.ಪೂಜೆಯ ಬಳಿಕ ಚಿನ್ನವನ್ನು ಅರ್ಪಿಸಿದ ಮಲ್ಯ ಅವರು ಗರ್ಭಗುಡಿಯ ದ್ವಾರಗಳ ಅಲಂಕಾರಕ್ಕೆ ಈ ಚಿನ್ನವನ್ನು ಬಳಸುವಂತೆ ದೇವಸ್ಥಾನದ ಅಧಿಕಾರಿಗಳಿಗೆ ಮನವಿ ಮಾಡಿದರು ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಉಪ ಕಾರ್ಯ ನಿರ್ವಾಹಕ ಅಧಿಕಾರಿ (ದೇವಾಲಯ) ಚಿನ್ನಂಗರಿ ರಮಣ ಪಿಟಿಐಗೆ ತಿಳಿಸಿದರು.ತಮ್ಮ ಕುಟುಂಬ ಸದಸ್ಯರ ಜೊತೆಗೆ ಕಳೆದ ರಾತ್ರಿ ಆಗಮಿಸಿದ ಯುನೈಟೆಡ್ ಬ್ರೀವರೀಸ್ ಮುಖ್ಯಸ್ಥ, ತಿರುಮಲ ತಿರುಪತಿ ದೇವಸ್ಥಾನಂ ಅತಿಥಿ ಗೃಹ ವೆಂಕಟ ವಿಜಯಂನಲ್ಲಿ ನಡೆದ ಸರಳ ಸಮಾರಂಭದಲ್ಲಿ ತಮ್ಮ ಹುಟ್ಟು ಹಬ್ಬ ಆಚರಿಸಿದರು. ಈ  ಅತಿಥಿ ಗೃಹವನ್ನು ಮಲ್ಯ ಅವರೇ 15 ವರ್ಷಗಳ ಹಿಂದೆ ದೇವಸ್ಥಾನಕ್ಕೆ ಅರ್ಪಿಸಿದ್ದರು ಎಂದು ಮೂಲಗಳು ಹೇಳಿದವು.ಆಗಸ್ಟ್ ತಿಂಗಳಲ್ಲಿ ಮಲ್ಯ ಅವರು 80 ಲಕ್ಷ ರೂಪಾಯಿ ಮೌಲ್ಯದ ಸುವರ್ಣ ಲೇಪಿತ ದ್ವಾರಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಮರ್ಪಿಸಿದ್ದರು.2005ರಲ್ಲಿ ಕಿಂಗ್ ಪಿಷರ್ ಏರ್ ಲೈನ್ಸ್ ಸಂಸ್ಥೆಯನ್ನು ಮಲ್ಯ ಆರಂಭಿಸಿದ್ದರು. ಭಾರತದ ದೇಶೀ ಮಾರುಕಟ್ಟೆಯಲ್ಲಿ ಅತ್ಯಂತ ದೊಡ್ಡ ಏರ್ ಲೈನ್ಸ್ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿತ್ತು.ಆದರೆ ಈಗ ಕಿಂಗ್ ಫಿಷರ್ ತೀವ್ರ ಬಿಕ್ಕಟ್ಟಿನಲ್ಲಿ ಸಿಲುಕಿದೆ. ವೇತನ ಬಾಕಿ ಪಾವತಿಗಾಗಿ ಆಗ್ರಹಿಸಿ ಪೈಲಟ್ ಗಳು ಮತ್ತು ಎಂಜಿನಿಯರ್ ಗಳು ಮುಷ್ಕರ ಆರಂಭಿಸಿದ್ದನ್ನು ಅನುಸರಿಸಿ ಕಳೆದ ಅಕ್ಟೋಬರ್ 1ರಿಂದ ಸಂಸ್ಥೆ ಮುಗ್ಗರಿಸಿತ್ತು. ಸಂಸ್ಥೆಯ ವಿಮಾನಯಾನ ಪರವಾನಗಿಯನ್ನೂ ರದ್ದು ಪಡಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry