ಭಾನುವಾರ, ಏಪ್ರಿಲ್ 11, 2021
23 °C

ತಿರುವು ನೀಡುವ ಪಿಚ್ ಬೇಕು: ದೋನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಮದಾಬಾದ್: `ಇಂತಹ ಪಿಚ್‌ಗಳನ್ನು ಯಾವ ಉದ್ದೇಶ ಇಟ್ಟುಕೊಂಡು ರೂಪಿಸುತ್ತಾರೋ ಏನೋ? ಮೊಟೇರಾ ಪಿಚ್ ಬೌಲರ್‌ಗಳಿಗೆ ಕೊಂಚವೂ ನೆರವಾಗಲಿಲ್ಲ. ಮತ್ತೆ ಈ ರೀತಿಯ ಪಿಚ್ ನೋಡಲು ಇಷ್ಟಪಡುವುದಿಲ್ಲ~-ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಗೆದ್ದರೂ ಭಾರತ ತಂಡದ ನಾಯಕ ದೋನಿ ಮೊಗದಲ್ಲಿ ಅಸಮಾಧಾನವಿತ್ತು. ಪಂದ್ಯದ ಬಳಿಕ ಮಾತನಾಡಿದ ಅವರು ಪ್ರಮುಖವಾಗಿ ಈ ಕ್ರೀಡಾಂಗಣದ ಪಿಚ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಕ್ಯೂರೇಟರ್‌ಗಳನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.ಆದರೆ ಇಂತಹ ಪಿಚ್‌ನಲ್ಲೂ ವಿಕೆಟ್ ಪಡೆದ ತಮ್ಮ ಬೌಲರ್‌ಗಳನ್ನು ಅವರು ಹೊಗಳಿದರು. `ಈ ಪಿಚ್ ತಿರುವು ನೀಡುವುದಿಲ್ಲ, ಬೌನ್ಸ್ ಕೂಡ ಆಗುವುದಿಲ್ಲ. ಅಂತಹದ್ದರಲ್ಲೂ ನಮ್ಮ ಬೌಲರ್‌ಗಳು ಎದುರಾಳಿಯನ್ನು ಎರಡು ಬಾರಿ ಆಲೌಟ್ ಮಾಡಿದರು. ಎದುರಾಳಿ ಮೇಲೆ ಫಾಲೋಆನ್ ಹೇರಿದ್ದರಿಂದ ನಮ್ಮ ಬೌಲರ್‌ಗಳು ಎರಡೂವರೆ ದಿನ ಬೌಲ್ ಮಾಡಬೇಕಾಯಿತು. ಸಾಕಷ್ಟು ತಾಳ್ಮೆಯಿಂದ ಆ ಕೆಲಸ ನಿಭಾಯಿಸಿದರು. ಓಜಾ 78 ಹಾಗೂ ಅಶ್ವಿನ್ 70 ಓವರ್ ಹಾಕಿದರು~ ಎಂದರು.`ಮುಂದಿನ ಪಂದ್ಯಗಳಿಗಾದರೂ ತಿರುವು ನೀಡುವ ಪಿಚ್ ಲಭಿಸುವ ನಿರೀಕ್ಷೆಯಲ್ಲಿ ನಾನಿದ್ದೇನೆ. ಆರಂಭದಿಂದಲೇ ತಿರುವು ಲಭಿಸಬೇಕು. ಮೂರನೇ ದಿನದಲ್ಲಿ ಪಂದ್ಯ ಮುಗಿದರೂ ಪರವಾಗಿಲ್ಲ. ಆದರೆ ಗೆಲ್ಲಲು ಉಭಯ ತಂಡಗಳಿಗೆ ಸಮಾನ ಅವಕಾಶವಿರುತ್ತದೆ. ಆಗ ಟಾಸ್‌ಗೆ ಮಹತ್ವ ಇರುವುದಿಲ್ಲ. ಇಲ್ಲದಿದ್ದರೆ ಟಾಸ್ ಮೇಲೆ ಹೆಚ್ಚು ಅವಲಂಬಿತವಾಗಿರಬೇಕಾಗುತ್ತದೆ~ ಎಂದು ದೋನಿ ಹೇಳಿದರು.`ನನಗೆ ಖುಷಿ ನೀಡಿದ್ದು ಇಂತಹ ಪಿಚ್‌ನಲ್ಲೂ ನಮ್ಮ ವೇಗದ ಬೌಲರ್‌ಗಳು ವಿಕೆಟ್ ಪಡೆದಿದ್ದು. ಜಹೀರ್ ಹಾಗೂ ಉಮೇಶ್ ಒಟ್ಟು 6 ವಿಕೆಟ್ ಗಳಿಸಿದರು. ಅವರ ಕೊಡುಗೆಯೂ ಅಪಾರ~ ಎಂದು ನುಡಿದರು.ಸ್ಟುವರ್ಟ್ ಬ್ರಾಡ್ ಅನುಚಿತವಾಗಿ ವರ್ತಿಸಿದ್ದರ ಬಗ್ಗೆ ಪ್ರತಿಕ್ರಿಯಿಸಿದ ದೋನಿ, `ನಾನು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ~ ಎಂದರು. ಯಾದವ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದ ಬ್ರಾಡ್ ಪಿಚ್‌ನಲ್ಲಿ ವಿಚಿತ್ರವಾಗಿ ವರ್ತಿಸಿದರು. ಚೆಂಡು ಪಿಚ್ ಆಗುವ ಪ್ರದೇಶವನ್ನು ಅವರು ಸಿಟ್ಟಿನಿಂದ ಕಾಲಿನಿಂದ ಒದ್ದರು. ಇದನ್ನು ಪ್ರಗ್ಯಾನ್ ಓಜಾ ಅಂಪೈರ್‌ಗಳ ಗಮನಕ್ಕೆ ತಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.