ತಿರುವು ಪಡೆಯುತ್ತಿರುವ ಸಾಮೂಹಿಕ ಅತ್ಯಾಚಾರ ಪ್ರಕರಣ

7

ತಿರುವು ಪಡೆಯುತ್ತಿರುವ ಸಾಮೂಹಿಕ ಅತ್ಯಾಚಾರ ಪ್ರಕರಣ

Published:
Updated:

ಬೆಂಗಳೂರು: ನಗರದ ಜ್ಞಾನಭಾರತಿ ಬಳಿ ನೇಪಾಳ ಮೂಲದ ಕಾನೂನು ವಿದ್ಯಾರ್ಥಿನಿ ಮೇಲೆ ನಡೆದಿದೆ ಎನ್ನಲಾದ ಸಾಮೂಹಿಕ ಅತ್ಯಾಚಾರ ಪ್ರಕರಣ ಸಾಕಷ್ಟು ತಿರುವು ಪಡೆದುಕೊಳ್ಳುತ್ತಿದ್ದು, ವಿದ್ಯಾರ್ಥಿನಿ ಹಾಗೂ ಆಕೆಯ ಸ್ನೇಹಿತನ ಹೇಳಿಕೆಗಳು ತನಿಖಾಧಿಕಾರಿಗಳಲ್ಲಿ ಗೊಂದಲ ಉಂಟು ಮಾಡುತ್ತಿವೆ.`ದೂರು ಕೊಟ್ಟಿರುವ ಯುವತಿ ವಿಚಾರಣೆ ವೇಳೆ ನೀಡಿರುವ ಹೇಳಿಕೆಗಳು ಗೊಂದಲಕಾರಿಯಾಗಿವೆ. ಅಂತೆಯೇ ಆ ಯುವತಿಯ ಸ್ನೇಹಿತನ ಹೇಳಿಕೆಗಳು ಅಸ್ಪಷ್ಟವಾಗಿವೆ. ಘಟನೆ ನಡೆದಿದೆ ಎನ್ನಲಾದ ಸ್ಥಳದಲ್ಲೂ ಅತ್ಯಾಚಾರ ನಡೆದಿದೆ ಎನ್ನುವುದಕ್ಕೆ ಪೂರಕವಾದ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ~ ಎಂದು ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.`ಯುವತಿಗೆ ನಗರದ ವಿಕ್ಟೋರಿಯಾ ಮತ್ತು ವಾಣಿವಿಲಾಸ ಆಸ್ಪತ್ರೆಯಲ್ಲಿ ಎಚ್‌ಐವಿ, ಸ್ಕ್ಯಾನಿಂಗ್ ಹಾಗೂ ಗರ್ಭಧಾರಣೆ ಪರೀಕ್ಷೆ ಮಾಡಿಸಲಾಗಿದೆ. ವೈದ್ಯರು, ಯುವತಿಯೊಂದಿಗೆ ಲೈಂಗಿಕ ಕ್ರಿಯೆ ನಡೆದಿದೆ. ಆದರೆ, ಬಲವಂತವಾಗಿ ಲೈಂಗಿಕ ಕ್ರಿಯೆ ನಡೆದಿರುವ ಸಾಧ್ಯತೆ ಕಡಿಮೆ. ಆಕೆ ಅತ್ಯಾಚಾರದ ವೇಳೆ ಪ್ರತಿರೋಧ ತೋರಿಲ್ಲ ಎಂದು ಪ್ರಾಥಮಿಕ ವರದಿ ನೀಡಿದ್ದಾರೆ~ ಎಂದು ಅವರು ಹೇಳಿದರು.ಆಕೆಯ ದೇಹದ ಮೇಲೆ ಅತ್ಯಾಚಾರ ಘಟನೆಯನ್ನು ಪುಷ್ಟೀಕರಿಸುವ ಯಾವುದೇ ಗಾಯದ ಗುರುತುಗಳಿಲ್ಲ.

ಸ್ನೇಹಿತನ ಕೈ ಮೇಲೆ ಸಣ್ಣ ಗಾಯದ ಗುರುತು ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಯುವತಿಯ ರಕ್ತ ಮಾದರಿ ಮತ್ತು ಯೋನಿ ದ್ರವವನ್ನು ಹೆಚ್ಚಿನ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗಿದೆ. ವೈದ್ಯರು ಹಾಗೂ ಎಫ್‌ಎಸ್‌ಎಲ್ ತಜ್ಞರು ಅಂತಿಮ ವರದಿ ನೀಡಿದ ನಂತರವಷ್ಟೇ ಪ್ರಕರಣದ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಮಾಹಿತಿ ನೀಡಿದರು.ಯುವತಿ, ಘಟನೆ ನಡೆದ ಸ್ವಲ್ಪ ಸಮಯದಲ್ಲೇ ಸಿಬ್ಬಂದಿಯನ್ನು ಸಂಪರ್ಕಿಸಿ ದೂರು ನೀಡಿದ್ದರೆ ಆರೋಪಿಗಳ ಪತ್ತೆಗೆ ಹೆಚ್ಚು ಸಹಾಯವಾಗುತ್ತಿತ್ತು. ಆದರೆ, ಆಕೆ ಘಟನೆಯ ನಂತರ ವಿದ್ಯಾರ್ಥಿನಿಲಯಕ್ಕೆ ತೆರಳಿ ವಿಶ್ರಾಂತಿ ತೆಗೆದುಕೊಂಡಿದ್ದಳು. ಆಕೆಯ ಸ್ನೇಹಿತ ಸಿಬ್ಬಂದಿಯನ್ನು ಸಂಪರ್ಕಿಸಿ ಮಾಹಿತಿ ನೀಡಿದ ಬಳಿಕವಷ್ಟೇ ಪ್ರಕರಣ ಬೆಳಕಿಗೆ ಬಂತು.

 

ಮಾಹಿತಿ ಸಿಕ್ಕಿದ ಕೂಡಲೇ ಸಿಬ್ಬಂದಿ, ಯುವತಿಯ ಪತ್ತೆಗೆ ಹೆಚ್ಚು ಆದ್ಯತೆ ನೀಡಿದರು. ಇದರಿಂದಾಗಿ ಆರೋಪಿಗಳಿಗೆ ಪರಾರಿಯಾಗಲು ಅನುಕೂಲವಾಯಿತು. ಘಟನೆಯ ಬಗ್ಗೆ ಶನಿವಾರ ರಾತ್ರಿ ಹತ್ತು ಗಂಟೆ ಸುಮಾರಿಗೆ ಸುಳಿವು ಸಿಕ್ಕಿದರೂ ಭಾನುವಾರ ಬೆಳಗಿನ ಜಾವ ಮೂರು ಗಂಟೆ ವೇಳೆಗೆ ಯುವತಿ ವಿದ್ಯಾರ್ಥಿನಿಲಯದಲ್ಲಿ ಪತ್ತೆಯಾದಳು ಎಂದು ಅವರು ಹೇಳಿದ್ದಾರೆ.`ಘಟನೆ ನಂತರ ವಿದ್ಯಾರ್ಥಿನಿಲಯದ ಬಳಿ ಬಂದ ತಾನು ಕಾಂಪೌಂಡ್ ಹಾರಿ ಒಳಗೆ ಹೋದೆ ಎಂದು ಯುವತಿ ವಿಚಾರಣೆ ವೇಳೆ ಹೇಳಿದ್ದಾಳೆ. ಸುಮಾರು ಹತ್ತು ಅಡಿಯಷ್ಟು ಎತ್ತರವಿರುವ ಕಾಂಪೌಂಡ್ ಮೇಲೆ ಗಾಜಿನ ಚೂರುಗಳನ್ನು ಹಾಕಲಾಗಿದೆ. ಇಷ್ಟು ಎತ್ತರದ ಕಾಂಪೌಂಡ್ ಅನ್ನು ಹಾರುವುದು ಸುಲಭವಲ್ಲ. ಬೇರೊಬ್ಬರ ನೆರವು ಪಡೆಯದೆ ಕಾಂಪೌಂಡ್ ಹಾರಲು ಸಾಧ್ಯವಿಲ್ಲ. ಇದರಿಂದಾಗಿ ಆಕೆ ಒಬ್ಬಳೇ ಹೇಗೆ ಕಾಂಪೌಂಡ್ ಹಾರಿ ಒಳ ಹೋದಳು ಎಂಬ ಪ್ರಶ್ನೆ ಮೂಡುತ್ತದೆ~ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.ವಿಶೇಷ ತಂಡ: `ಪ್ರಕರಣದ ತನಿಖೆಗೆ ಆರು ಇನ್‌ಸ್ಪೆಕ್ಟರ್‌ಗಳನ್ನು ಒಳಗೊಂಡ ವಿಶೇಷ ತಂಡ ರಚಿಸಲಾಗಿದೆ. ದೂರು ನೀಡಿರುವ ಯುವತಿ ಹಾಗೂ ಆಕೆ ಸ್ನೇಹಿತನನ್ನು ತನಿಖಾಧಿಕಾರಿಗಳು ವಿಚಾರಣೆ ನಡೆಸಿದ್ದಾರೆ~ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್.ಸಿದ್ದರಾಮಪ್ಪ ತಿಳಿಸಿದ್ದಾರೆ.ಜ್ಞಾನಭಾರತಿ ಬಳಿ ಇರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ ಹಾಗೂ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ (ಐಎಸ್‌ಇಸಿ) ನಡುವೆ ಸಾಕಷ್ಟು ಮರಗಿಡಗಳು ಬೆಳೆದಿದ್ದು, ದುಷ್ಕರ್ಮಿಗಳು ಆ ಜಾಗಕ್ಕೆ ಎಳೆದೊಯ್ದು ಅತ್ಯಾಚಾರ ನಡೆಸಿದರು ಎಂದು ಯುವತಿ ಸ್ಥಳ ತೋರಿಸಿದ್ದಾಳೆ. ತನಿಖಾಧಿಕಾರಿಗಳು ಸೋಮವಾರ ಆ ಸ್ಥಳಕ್ಕೆ ಭೇಟಿ ನೀಡಿ ಸುತ್ತಮುತ್ತಲ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ್ದಾರೆ ಎಂದು ಅವರು ವಿವರ ನೀಡಿದರು.ಅನುಕೂಲದ ದುರುಪಯೋಗ: `ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಮಧ್ಯರಾತ್ರಿ 12 ಗಂಟೆಯವರೆಗೂ ಅಧ್ಯಯನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ, ಕೆಲವು ವಿದ್ಯಾರ್ಥಿನಿಯರು ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ~ ಎಂದು ನ್ಯಾಷನಲ್ ಸ್ಕೂಲ್ ಆಫ್ ಲಾ ಯುನಿವರ್ಸಿಟಿಯ ಸಂದರ್ಶಕ ಪ್ರಾಧ್ಯಾಪಕರೊಬ್ಬರು ತಿಳಿಸಿದ್ದಾರೆ.`ತಮ್ಮ ಖಾಸಗಿ ಜೀವನಕ್ಕೆ ಅಗತ್ಯವಾದ ವಾತಾವರಣ ವಿಶ್ವವಿದ್ಯಾಲಯದ ಆವರಣದಲ್ಲಿ ನಿರ್ಮಾಣವಾಗಬೇಕು. ಹೀಗಾಗಿ ವಿಶ್ವವಿದ್ಯಾಲಯದ ಆವರಣದಲ್ಲಿ ಗೆಳೆಯರೊಂದಿಗೆ ಖಾಸಗಿ ಸಮಯ ಕಳೆಯಲು ವಿರಾಮ ಕೊಠಡಿಗಳನ್ನು ನಿರ್ಮಿಸಬೇಕು ಎಂದು ಹೊರ ರಾಜ್ಯದ ವಿದ್ಯಾರ್ಥಿನಿಯೊಬ್ಬಳು ಆರು ತಿಂಗಳ ಹಿಂದೆ ಕುಲಪತಿಗಳಿಗೆ ಪತ್ರ ಬರೆದಿದ್ದಳು~ ಎಂದು ಅವರು ಹೇಳಿದರು.`ವಿದ್ಯಾರ್ಥಿನಿಯರು ಗ್ರಂಥಾಲಯಕ್ಕೆ ಅಧ್ಯಯನಕ್ಕೆ ಹೋಗುವುದಾಗಿ ವಿದ್ಯಾರ್ಥಿನಿಲಯದ ಮೇಲ್ವಿಚಾರಕರಿಗೆ ತಿಳಿಸಿ ತಮ್ಮ ಗೆಳೆಯರೊಂದಿಗೆ ಮೋಜಿನ ಸುತ್ತಾಟಕ್ಕೆ ಹೋಗುತ್ತಾರೆ. ಹೀಗಾಗಿ ಗ್ರಂಥಾಲಯವನ್ನು ಸಂಜೆ 5 ಗಂಟೆಗೇ ಮುಚ್ಚುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಆದರೆ, ಇದರಿಂದ ನಿಜವಾಗಿ ಅಧ್ಯಯನ ನಡೆಸುವ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಹೀಗಾಗಿ ಇದೊಂದು ಸವಾಲಿನ ವಿಚಾರ~ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry