ಸೋಮವಾರ, ಏಪ್ರಿಲ್ 19, 2021
24 °C

ತಿಳಿಯದ ಅಂಕ: ವಿದ್ಯಾರ್ಥಿಗಳಿಗೆ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಮೈಸೂರು ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದವರು ಎಸಗಿರುವ ತಪ್ಪಿನಿಂದ ಹೊಳೆನರಸೀಪುರ ಗೃಹವಿಜ್ಞಾನ ಕಾಲೇಜಿನ ಹತ್ತು ವಿದ್ಯಾರ್ಥಿಗಳು ಈಗ ಚಿಂತೆಗೆ ಒಳಗಾಗಿದ್ದಾರೆ. ಇಂಗ್ಲಿಷ್ ಐಚ್ಛಿಕ ವಿಚಾರದಲ್ಲಿ ಇವರಿಗೆ ಲಭಿಸಿರುವ ಅಂಕಗಳೆಷ್ಟು ಎಂಬುದೇ ಗೊತ್ತಾಗದಂತಾಗಿದೆ.ಕಾಲೇಜಿನಲ್ಲಿ ಎರಡನೇ ವರ್ಷದ ಬಿ.ಎ. ಓದುತ್ತಿರುವ ವಿದ್ಯಾರ್ಥಿಗಳಿಗೆ ಕಳೆದ ಬಾರಿ ಪರೀಕ್ಷಾ ಫಲಿತಾಂಶ ಬಂದಾಗ ಅಚ್ಚರಿ ಕಾದಿತ್ತು. ಹತ್ತು ವಿದ್ಯಾರ್ಥಿಗಳು ಇಂಗ್ಲಿಷ್ ಐಚ್ಛಿಕದಲ್ಲಿ ತೇರ್ಗಡೆಯಾಗಿ, ಇಂಗ್ಲಿಷ್ ಭಾಷಾ ವಿಷಯದಲ್ಲಿ ಫೇಲ್ ಆಗಿದ್ದರು. ಇವರಲ್ಲೂ ಕೆಲವರಿಗೆ ಭಾಷಾ ವಿಷಯದಲ್ಲಿ ಒಂದಂಕಿಯ ಅಂಕಗಳು ಬಂದಿದ್ದವು.

ಉಳಿದ ಹತ್ತು ವಿದ್ಯಾರ್ಥಿಗಳು ಭಾಷಾ ವಿಷಯದಲ್ಲಿ ತೇರ್ಗಡೆ ಹೊಂದಿ ಐಚ್ಛಿಕದಲ್ಲಿ ಅನುತ್ತೀರ್ಣರಾಗಿದ್ದರು.ಐಚ್ಛಿಕದಲ್ಲಿ ತೇರ್ಗಡೆ ಹೊಂದಿಯೂ ಭಾಷಾ ವಿಷಯದಲ್ಲಿ ಫೇಲ್ ಆದ ಹತ್ತು ವಿದ್ಯಾರ್ಥಿಗಳು ಫಲಿತಾಂಶದಿಂದ ವಿಚಲಿತರಾಗಿ, ಪ್ರಾಂಶುಪಾಲ ಡಾ. ಎಚ್. ಚನ್ನವೀರಪ್ಪ ಅವರಿಗೆ ವಿಚಾರ ತಿಳಿಸಿದರು. ~ಇಂಗ್ಲಿಷ್ ಐಚ್ಛಿಕದಲ್ಲಿ ತೇರ್ಗಡೆ ಹೊಂದಿರುವ ನಾವು ಭಾಷಾ ವಿಷಯದಲ್ಲಿ ಅನುತ್ತೀರ್ಣರಾಗಲು ಸಾಧ್ಯವಿಲ್ಲ.ಇಷ್ಟು ಕಳಪೆಯಾಗಿ ನಾವು ಪರೀಕ್ಷೆ ಬರೆದಿಲ್ಲ~ ಎಂದು ಅಳಲು ತೋಡಿಕೊಂಡರು. ಪ್ರಾಂಶುಪಾಲರು ಆ ಬಗ್ಗೆ ವಿ.ವಿ. ಮೌಲ್ಯಮಾಪನ ವಿಭಾಗದ ರಿಜಿಸ್ಟ್ರಾರ್‌ಗೆ ಪತ್ರ ಬರೆಯುವಂತೆ ಸಲಹೆ ನೀಡಿದರು. ಅದರಂತೆ ಜುಲೈ  ತಿಂಗಳ 31ರಂದು ವಿದ್ಯಾರ್ಥಿಗಳು ಪತ್ರ ರವಾನಿಸಿದ್ದರು. ಇದಾಗಿ ಕೆಲವು ದಿನಗಳ ಬಳಿಕ ಅ.31ರಂದು  ಕಾಲೇಜಿನ ಪ್ರಾಂಶುಪಾಲರಿಗೆ ವಿ.ವಿ. ರಿಜಿಸ್ಟ್ರಾರ್ ಕಚೇರಿಯಿಂದ ಕರೆ ಬಂದಿತ್ತು. ಕರೆ ಮಾಡಿದ ಸಿಬ್ಬಂದಿ ~ಭಾಷಾ ವಿಷಯದಲ್ಲಿ ಅನುತ್ತೀರ್ಣರಾಗಿರುವ ಹತ್ತು ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ರಿಜಿಸ್ಟ್ರಾರ್ ನೋಡಬೇಕಾಗಿದೆ, ಪ್ರಾಂಶುಪಾಲರೇ ಅವುಗಳೊಂದಿಗೆ ಬಂದು  ರಿಜಿಸ್ಟ್ರಾರ್ ಅವರನ್ನು ಭೇಟಿಯಾಗಬೇಕು~ ಎಂದು ಸೂಚನೆ ನೀಡಿದ್ದರು. ಆದರೆ ಪ್ರಾಂಶುಪಾಲರಿಗೆ ಈ ಬಗ್ಗೆ ಲಿಖಿತ ಸೂಚನೆ ಬಂದಿರಲಿಲ್ಲ.ಪ್ರಾಂಶುಪಾಲರು ನ.3ರಂದು ಹತ್ತು ವಿದ್ಯಾರ್ಥಿಗಳ ಅಂಕಪಟ್ಟಿಗಳೊಡನೆ ರಿಜಿಸ್ಟ್ರಾರ್ ಅವರನ್ನು ಭೇಟಿಮಾಡಿದ್ದರು. ಅಲ್ಲಿ ಪ್ರಾಂಶುಪಾಲರಿಗೂ ಅಚ್ಚರಿ ಕಾದಿತ್ತು. ಅಂಕಪಟ್ಟಿಗಳನ್ನು ವಾಪಸ್ ಪಡೆದ ರಿಜಿಸ್ಟ್ರಾರ್, ~ಈ ಹತ್ತು ವಿದ್ಯಾರ್ಥಿಗಳಲ್ಲಿ ಎಂಟು ಮಂದಿ ಇಂಗ್ಲಿಷ್ ಐಚ್ಛಿಕದಲ್ಲೂ ಫೇಲ್ ಆಗಿದ್ದಾರೆ~ ಎಂದು ತಿಳಿಸಿದ್ದಲ್ಲದೆ, ಹತ್ತು ಅಂಕಪಟ್ಟಿಗಳನ್ನೂ ವಾಪಸ್ ಪಡೆದುಕೊಂಡರು.ರಿಜಿಸ್ಟ್ರಾರ್ ಸಮ್ಮುಖದಲ್ಲೇ ಇದನ್ನು ವಿರೋಧಿಸಿದ ಪ್ರಾಂಶುಪಾಲರು, ಮರು ಮೌಲ್ಯಮಾಪನಕ್ಕಾಗಲಿ, ಮರು ಎಣಿಕೆಗಾಗಲಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸದಿರುವಾಗ ವಿ.ವಿ.ಯೇ ಅಂಕಗಳನ್ನು ಪರಿಷ್ಕರಣೆ ಮಾಡುವುದು ಸರಿಯಲ್ಲ ಎಂದು ವಾದಿಸಿದ್ದರು. ಈ ಮಾತಿಗೆ ಬೆಲೆ ಕೊಡದೆ ಒಂದು ಸ್ವೀಕೃತಿ ಪತ್ರವನ್ನೂ ನೀಡದೆ ಅಂಕ ಪಟ್ಟಿಗಳನ್ನು ತಮ್ಮ ಬಳಿಯಲ್ಲೇ ಇಟ್ಟುಕೊಂಡರು.ಇದಾಗಿ ಕೆಲವು ದಿನಗಳ ಬಳಿಕ ವಿ.ವಿ.ಯಿಂದ ವಿದ್ಯಾರ್ಥಿಗಳಿಗೆ ಹೊಸ ಅಂಕ ಪಟ್ಟಿಗಳನ್ನು ನೀಡಲಾಗಿದೆ. ಒಟ್ಟಾರೆ ಹತ್ತು ವಿದ್ಯಾರ್ಥಿಗಳಲ್ಲಿ ಎಂಟು ಮಂದಿ ಐಚ್ಛಿಕ ವಿಷಯದಲ್ಲೂ ಫೇಲ್ ಆಗಿದ್ದರು. ಇಬ್ಬರು ತೇರ್ಗಡೆ ಹೊಂದಿದ್ದರೂ ಮೊದಲ ಅಂಕಪಟ್ಟಿಯಲ್ಲಿ ಇದ್ದ ಅಂಕಗಳಿಗಿಂತ ಕಡಿಮೆ ಅಂಕ ಬಂದಿದ್ದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.