ತೀರ್ಥಹಳ್ಳಿ: ಕೃಷಿ ಬಜೆಟ್ ಬರೀ ಗಿಮಿಕ್: ಬಂಗಾರಪ್ಪ.

7

ತೀರ್ಥಹಳ್ಳಿ: ಕೃಷಿ ಬಜೆಟ್ ಬರೀ ಗಿಮಿಕ್: ಬಂಗಾರಪ್ಪ.

Published:
Updated:

ತೀರ್ಥಹಳ್ಳಿ: ಜೆಡಿಎಸ್‌ಗೆ ರಾಜ್ಯಾದ್ಯಂತ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಯಡಿಯೂರಪ್ಪ ನೇತೃತ್ವದ ಬಿಜೆಪಿ ಆಡಳಿತದಿಂದ ಜನರು ಸಿಟ್ಟಿಗೆದ್ದಿದ್ದಾರೆ. ಎಷ್ಟು ತುರ್ತಾಗಿ ಈ ಸರ್ಕಾರ ಹೋಗುತ್ತದೆ ಎಂದು ಕಾಯುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಹೇಳಿದರು.

ತೀರ್ಥಹಳ್ಳಿಯಲ್ಲಿ ಗುರುವಾರ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.ಭೂಹಗರಣ, ಸ್ವಜನಪಕ್ಷಪಾತದ ವಿರುದ್ಧ ಕ್ರಮ ಜರುಗಿಸಬೇಕು ಎಂಬುದನ್ನು ಜನ ಕಾಯುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಜೈಲಿಗೆ ಹೋಗುವ ಕಾಲ ಸನ್ನಿಹಿತವಾಗಿದೆ. ಅವರ ಅಕ್ರಮ ದುಡ್ಡು, ಆಸ್ತಿ ಬಯಲಿಗೆ ಬರಲಿದೆ ಎಂದು ಬಂಗಾರಪ್ಪ ನುಡಿದರು.ಬಜೆಟ್ ಕಲ್ಪನೆ ಮುಖ್ಯಮಂತ್ರಿಗೆ ಇಲ್ಲ. ರೈತರಿಗಾಗಿ ಕೃಷಿ ಬಜೆಟ್ ಮಂಡಿಸುತ್ತೇನೆ ಎಂದು ಅವರು ಹೇಳುತ್ತಿರುವುದು ದೊಡ್ಡ ಗಿಮಿಕ್. ಕಾರ್ಮಿಕರಿಗೆ, ಮಹಿಳೆಯರಿಗೆ,ಗುತ್ತಿಗೆದಾರರಿಗೆ, ಹಿಂದುಳಿದವರಿಗೆ ಪ್ರತ್ಯೇಕ ಬಜೆಟ್ ನೀಡಲು ಸಾಧ್ಯವೇ? ಕಾನೂನಿನಲ್ಲಿ ಅದಕ್ಕೆಲ್ಲ ಅವಕಾಶವಿದೆಯೇ ಎಂದು ಪ್ರಶ್ನಿಸಿದ ಬಂಗಾರಪ್ಪ, ಯಡಿಯೂರಪ್ಪ ಒಬ್ಬ ಹಸೀ ಸುಳ್ಳುಗಾರ ಎಂದು ಹೇಳಿದರು.ಇಂದಿರಾಗಾಂಧಿ, ರಾಜೀವ್ ಗಾಂಧಿ ಅವರ ನಾಯಕತ್ವದ ಕಾಂಗ್ರೆಸ್ ಈಗ ಇಲ್ಲ. ಆ ಕಾಂಗ್ರೆಸ್ ಈಗ ಎಲ್ಲಿ ಹೋಯ್ತು? ಈಗ ಕಾಂಗ್ರೆಸ್‌ನಲ್ಲಿ ಇಂದಿರಾಗಾಂಧಿ, ರಾಜೀವ್ ಗಾಂಧಿ ಪೂರ್ವ ಆದರೆ, ಸೋನಿಯಾ ಗಾಂಧಿ ಪಶ್ಚಿಮವಾಗಿದ್ದಾರೆ. ಕಾರ್ಯಕರ್ತರು ಕಾಂಗ್ರೆಸ್ ಬಿಟ್ಟು ಜೆಡಿಎಸ್‌ಗೆ ಬಂದು ಹೋರಾಟ ಮಾಡಬೇಕು ಎಂದರು.

ತೀರ್ಥಹಳ್ಳಿ ತಾಲ್ಲೂಕು ಸಮಾಜವಾದದ ಸಿದ್ಧಾಂತವನ್ನು ರಾಷ್ಟ್ರಕ್ಕೆ ಕೊಟ್ಟ ಜಾಗ. ಮುಂದಿನ ಪೀಳಿಗೆಗೆ ಹೋರಾಟ ತಯಾರು ಮಾಡುವ ನೆಲ. ಕಾಶಿ, ಹಿಮಾಚಲ ಯಾತ್ರೆಗೆ ಯಾಕೆ ಹೋಗ್ತೀರಿ. ಶಾಂತವೇರಿಗೆ ಹೋಗಿ ಗುಡಿಸಲನ್ನು,  ಕುಪ್ಪಳಿಯಲ್ಲಿನ ಕುವೆಂಪು  ನೆಲದ ಕಲ್ಲನ್ನು ಮುಟ್ಟಿ. ತೀರ್ಥಹಳ್ಳಿಯಲ್ಲಿ ನಿಂತು ನೋಡಿ ಎಂದು ಶಾಂತವೇರಿ ಗೋಪಾಲಗೌಡ, ಕುವೆಂಪು, ಜಿ. ಸದಾಶಿವರಾವ್, ಕಡಿದಾಳ್ ಮಂಜಪ್ಪ ಅವರನ್ನು ಸ್ಮರಿಸಿದರು.ವಿಧಾನಸಭೆಯನ್ನು ಪೂಜೆ ಮಾಡುವ ಮೂಲಕ ಗಬ್ಬೆಬ್ಬಿಸಿದ್ದಾರೆ. ನಾನು ಕುಳಿತು ಬಿಟ್ಟ ಸೆಕೆಂಡ್ ಹ್ಯಾಂಡ್ ಕುರ್ಚಿಗೆ ಪೂಜೆ ಪುನಸ್ಕಾರ ನಡೆಸುತ್ತಿದ್ದಾರೆ. ನಾನು ಕುರಿ ಕೋಳಿ ಕೊಯ್ದು, ಭೂತರಾಯ, ಚೌಡಮ್ಮ ಎಂದು ಪೂಜೆ ಮಾಡಿ ಕುಳಿತುಕೊಳ್ಳಬೇಕಿತ್ತೇನು? ಎಂದು ವ್ಯಂಗ್ಯವಾಡಿದರು.ರಾಷ್ಟ್ರಕಂಡ ಪ್ರತಿಭಾವಂತ ರಾಜಕಾರಣಿಗಳ ಜತೆ ಕೆಲಸ ಮಾಡಿದ್ದೇನೆ. ಎಚ್.ಡಿ. ದೇವೇಗೌಡ ಅವರು ಬಹಳ ವರ್ಷದ ಸ್ನೇಹಿತರು. ಅವರು ಪ್ರಧಾನಿ ಆಗಿದ್ದಾಗ ರೈತರು, ಬಡವರ್ಗದ ಜನತೆಗೆ ಉತ್ತಮ ಕೆಲಸ ಮಾಡಿದ್ದಾರೆ ಎಂದ ಬಂಗಾರಪ್ಪ ಅಷ್ಟು ಸುಲಭವಾಗಿ ಶಿಕಾರಿಪುರವನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ.ಅಲ್ಲಿ ಫೆ. 19ರಂದು ಕುಮಾರಸ್ವಾಮಿ ಅವರೊಂದಿಗೆ ಕಾರ್ಯಕರ್ತರ ಸಭೆಯನ್ನು ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಕುಮಾರಸ್ವಾಮಿ ಜತೆಗೂಡಿ ರಾಜ್ಯಾದ್ಯಂತ ಪ್ರವಾಸ ಮಾಡುವುದಾಗಿ ಹೇಳಿದರು.ಜೆಡಿಎಸ್ ಮುಖಂಡ ಆರ್. ಮದನ್ ಮಾತನಾಡಿ, ಜೆಡಿಎಸ್ ಬಗ್ಗೆ ಒಲವಿದ್ದರೂ ಅದನ್ನು ತೋರಿಸಿಕೊಳ್ಳಲು ತಾಲ್ಲೂಕಿನಲ್ಲಿ ಜನರು ಹಿಂದೇಟು ಹಾಕುತ್ತಿದ್ದರು. ಬಿಜೆಪಿ  ಹಿಡಿತದಿಂದ ನಲುಗಿ ಹೋಗಿದ್ದರು. ಇದರಿಂದಾಗಿ ಪಕ್ಷಕ್ಕೆ ಹಿನ್ನಡೆಯಾಗಿತ್ತು. ಈಗ ಪಕ್ಷ ಮತ್ತೆ ಚೇತರಿಸಿಕೊಂಡಿದೆ ಎಂದು ಹೇಳಿದರು.

ನೆಂಪೆ ದೇವರಾಜ್, ಕಡ್ತೂರು ದಿನೇಶ್, ಎಂ.ಜಿ. ಮಣಿ ಹೆಗಡೆ, ಪಕ್ಷದ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಮಾತನಾಡಿದರು.ಅಡ್ಡಗುಡ್ಡೆ ಮಹೇಶ್ ನಾಯ್ಕೆ, ಎಂ.ಆರ್. ಡಾಕಪ್ಪ,  ಈರೇಗೋಡು ಶ್ರಿಧರಮೂರ್ತಿ, ವೆಂಕಟಸ್ವಾಮಿ, ಅಹಮದ್ ಭಾವ, ಟೀಕಪ್ಪಗೌಡ, ಚಂದ್ರಪ್ಪ ಅರಳಸುರಳಿ, ಮಕ್ಕಿಕೊಪ್ಪ ವಿಶ್ವನಾಥ್ ಮುಂತಾದವರು ಜೆಡಿಎಸ್ ಸೇರಿದರು.

ಸಭೆಯ ಅಧ್ಯಕ್ಷತೆಯನ್ನು ಪಕ್ಷದ ತಾಲ್ಲೂಕು ಅಧ್ಯಕ್ಷ ನಾಕುಂಜಿ ಸುಧಾಕರ್ ವಹಿಸಿದ್ದರು.ವೇದಿಕೆಯಲ್ಲಿ ಕಡಿದಾಳ್ ಗೋಪಾಲ್, ಶಿವಣ್ಣ, ಕೋಣಂದೂರು ಅಶೋಕ್, ನಜೀರ್ ಅಹಮದ್, ಗಾಜನೂರು ಗಣೇಶ್, ಜಯಂತಿ ಕೃಷ್ಣಮೂರ್ತಿ, ಡಾಕಮ್ಮ, ಎಸ್.ಟಿ. ದೇವರಾಜ್, ಕೆ.ಎನ್. ರಾಮಕೃಷ್ಣ.  ಮುಂತಾದವರು ಉಪಸ್ಥಿತರಿದ್ದರು.ಸಮಾವೇಶ

ಹೊಸನಗರ: ‘ಮುಖ್ಯಮಂತ್ರಿ ಕುರ್ಚಿ ಆಸೆ ನನಗಿಲ್ಲ. ಭ್ರಷ್ಟ ಬಿಜೆಪಿ ವಿರುದ್ಧ ಏಕಾಂಗಿ ಹೋರಾಟ ನಡೆಸುತ್ತಿರುವ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಈಗ ಪಣ ತೊಟ್ಟಿದ್ದೇನೆ’ ಎಂದು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಘೋಷಿಸಿದರು.ಗುರುವಾರ ಪಟ್ಟಣದ ಗಾಯತ್ರಿ ಮಂದಿರದಲ್ಲಿ ಹೊಸನಗರ ತಾಲ್ಲೂಕು ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಬಹುಕೋಟಿ ಹಗರಣದಲ್ಲಿ ಮುಳುಗಿದೆ. ರಾಜ್ಯದಲ್ಲಿ ಯಡಿಯೂರಪ್ಪ  ಮತ್ತು ಅವರ ಕುಟುಂಬ ಭೂ ಕಬಳಿಕೆಯಲ್ಲಿ ಮಗ್ನವಾಗಿದ್ದು ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಟೀಕಿಸಿದರು.ರಾಜಕೀಯ ಕೆಟ್ಟ ನೀತಿಯಿಂದಾಗಿ ರೈತರು ಹಾಗೂ ಸರ್ಕಾರ ನಿರ್ಧರಿಸಬೇಕಾದ ದಿನ ನಿತ್ಯದ ಅಗತ್ಯ ವಸ್ತುಗಳ ದರವನ್ನು ಉದ್ಯಮಿಗಳು ಹಾಗೂ ಕಪ್ಪು ದಾಸ್ತಾನುದಾರರು ನಿಗದಿ ಮಾಡುವಂತಾಗಿದೆ. ಇದು ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಲು ಕಾರಣವಾಗಿದೆ ಎಂದರು. ಸಭೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಶ್ರೀಕಾಂತ್, ಮುಖಂಡರಾದ ಬಿ.ಜಿ. ನಾಗರಾಜ್, ಕೆ.ಎಂ. ಕೃಷ್ಣಮೂರ್ತಿ, ಎಂ.ವಿ. ಜಯರಾಮ್, ಸುಮತಿ ಪೂಜಾರಿ, ಚಾಬುಸಾಬ್, ಪ.ಪಂ. ಅಧ್ಯಕ್ಷ ಅರುಣ್‌ಕುಮಾರ್, ಸದಸ್ಯ ಎಚ್.ಎನ್. ಶ್ರೀಪತಿರಾವ್ ಮಾತನಾಡಿದರು. ಶಾಂತಮೂರ್ತಿಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry