ತೀರ್ಥಹಳ್ಳಿ: ಚಳಿಗೆ ಜನತೆ ತತ್ತರ

7

ತೀರ್ಥಹಳ್ಳಿ: ಚಳಿಗೆ ಜನತೆ ತತ್ತರ

Published:
Updated:

ತೀರ್ಥಹಳ್ಳಿ: ಮೂರ್ನಾಲ್ಕು ದಿನಗಳಿಂದ ತಾಲೂಕಿನಾದ್ಯಂತ ಚಳಿ ಹೆಚ್ಚಾಗಿದೆ. ಚಳಿಯ ಹೊಡೆತಕ್ಕೆ ವಯೋವೃದ್ಧರು ನಲುಗಿ ಹೋಗಿದ್ದಾರೆ. ರಾತ್ರಿ ಹೊತ್ತು ಹೆಚ್ಚಾಗುವ ಚಳಿ ಬೆಳಿಗ್ಗೆ 10 ಗಂಟೆಯಾದರೂ ಮಾಯವಾಗುತ್ತಿಲ್ಲ. ಅಲ್ಲಲ್ಲಿ ಬೆಳಿಗ್ಗೆ ಬಿಸಿಲಿಗೆ ಮೈಯೊಡ್ಡಿ ಚಳಿ ಕಾಯಿಸಿಕೊಳ್ಳುವ ಜನರ ಗುಂಪು ಸಾಮಾನ್ಯವಾಗಿ ಕಂಡುಬರುತ್ತಿದೆ.ಮಲೆನಾಡಿಗೆ ಚಳಿ ಹೊಸದಲ್ಲದಿದ್ದರೂ ಈ ವರ್ಷದ ಚಳಿ ಬಹಳ ಗಂಭೀರವಾಗಿದೆ. ಅಡಿಕೆ ಕೋಯ್ಲು, ಭತ್ತದ ಒಕ್ಕಲು ಮಾಡಲು ಹಿತವಾದ ಚಳಿ ಬೇಕು ಎಂದು ರೈತರು ಬಯಸುತ್ತಾರೆ. ಈ ಬಗೆಯ ಚಳಿಯಲ್ಲಿ ಕೆಲಸ ಮಾಡಲು ಅನುಕೂಲವಾಗುತ್ತದೆ. ಕೆಲಸ ಆಯಾಸ ತರುವುದಿಲ್ಲ ಎಂಬ ಹಿನ್ನಲೆಯಲ್ಲಿ ಒಕ್ಕಲು ಕೆಲಸವನ್ನು ಚಳಿಗಾಲದಲ್ಲಿಯೇ ಮಾಡಲಾಗುತ್ತದೆ. ಆದರೆ, ಈ ಬಾರಿಯ ಚಳಿ ಹೆಚ್ಚಾಗಿರುವುದರಿಂದ ಅಡಿಕೆ ಹಾಗೂ  ಭತ್ತದ ಒಕ್ಕಲು ಕೆಲಸಕ್ಕೆ ತೊಡಕಾಗಿದೆ.ಚಳಿ ಹೆಚ್ಚಾಗಿರುವುದರಿಂದ ಅಡುಗೆ ಮನೆಯಲ್ಲಿ ಹೊತ್ತಿ ಉರಿವ ಬೆಂಕಿಗೆ ಎಲ್ಲಿಲ್ಲದ ಬೇಡಿಕೆ. ಒಲೆಯ ಸುತ್ತ ಮಕ್ಕಳೂ ಸೇರಿದಂತೆ ವಯೋವೃದ್ಧರು ಸೇರಿ ಚಳಿಕಾಯಿಸಿಕೊಳ್ಳುವ ಮೂಲಕ ಚಳಿಯಿಂದ ಮುಕ್ತಿ ಪಡೆಯಲು ಹವಣಿಸುತ್ತಾರೆ. ಹಾಗಾಗಿ, ಅಡುಗೆ ಒಲೆಯ ಸುತ್ತ ಮನೆ ಮಂದಿಯೆಲ್ಲಾ ಜಮಾಯಿಸಿ ಚಳಿಯಿಂದ ರಕ್ಷಣೆ ಪಡೆಯುವ ದೃಶ್ಯ ಈಗ ಸಾಮಾನ್ಯವಾಗಿ ಮಲೆನಾಡಿನ ಬಹುತೇಕ ಹಳ್ಳಿ ಮನೆಗಳಲ್ಲಿ ಕಂಡು ಬರುತ್ತಿದೆ.ಅಡಿಕೆ ಕೋಯ್ಲು ಈಗ ನಡೆಯುತ್ತಿರುವುದರಿಂದ ಅಡಿಕೆ ಬೇಯಿಸುವ ಒಲೆಯ ಮುಂದೆ ನಾಮುಂದು ತಾಮುಂದು ಎಂದು ಜನರು ಜಮಾಯಿಸುತ್ತಾರೆ. ಬಯಲು ನಾಡಿನಿಂದ ಕೆಲಸ ಅರಸಿ ಬಂದ ಕೂಲಿ ಕಾರ್ಮಿಕರು ಅಲ್ಲಲ್ಲಿ ಬೆಂಕಿ ಹಾಕಿ ತಮ್ಮ ಕುಟುಂಬವನ್ನು ಚಳಿಯಿಂದ ರಕ್ಷಣೆ ಪಡೆಯಲು ಮುಂದಾಗಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ಒಂದೇ ಸಮನೆ ಚಳಿ ಹೆಚ್ಚಾಗಿದ್ದು, ಚಳಿಯ ಪ್ರಮಾಣ ಇದೇ ರೀತಿ ಮುಂದುವರಿದರೆ ಹಾಸಿಗೆ ಹೊದಿಕೆ ಇಲ್ಲದ ಅನೇಕ ಕುಟುಂಬಗಳು ರಾತ್ರಿ ಹೊತ್ತು ಚಳಿಯಿಂದ ರಕ್ಷಣೆ ಪಡೆದುಕೊಳ್ಳಲು ಅಗ್ಗಷ್ಟಿಕೆಯ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.ಚಳಿ ಹೆಚ್ಚಾಗಿರುವುದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಾರಂಭಿಸಿದೆ. ತುಟಿ, ಹಿಮ್ಮಡಿ ಸೇರಿದಂತೆ ದೇಹದ ಕೆಲವು ಭಾಗಗಳು ಒಡೆದು ಹೋಗುವಂತಾಗಿದೆ. ವಯಸ್ಸಾದವರು ಕೈ ಕಾಲು, ಕೀಲು ನೋವಿನಿಂದ ಬಳಲುವಂತಾಗಿದೆ. ಹಿಂದೆಂದೂಕಂಡರಿಯದಂತಹ ಚಳಿ ಈ ವರ್ಷ ಬಂದಿದೆ ಎಂದು ಹಲವು ಹಿರಿಕರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ಚಳಿ ಹೆಚ್ಚಾಗಿದ್ದರೆ ಮಳೆ ಕೂಡಾ ಹೆಚ್ಚಿರುತ್ತದೆ ಎಂಬುದು ಮಲೆನಾಡಿನ ಜನರ ನಂಬಿಕೆ. ಹಾಗಾಗಿ, ಮುಂದಿನ ಮಳೆಗಾಲ ಭೀಕರ ಆಗಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಸಹಜವಾಗಿರಬೇಕಿದ್ದ ಚಳಿಗಾಲ ಈ ವರ್ಷ ಹೆಚ್ಚಾಗಿದ್ದು, ಹಲವು ಜನರ ನಿದ್ದೆಗೆಡಿಸಿದೆ.ದಟ್ಟ ಕಾಡು ಹಾಗೂ ನದಿ ತೀರದಲ್ಲಿ ಚಳಿಯ ಪ್ರಮಾಣ ಹೆಚ್ಚಾಗಿದೆ. ಥಂಡಿ ವಾತಾವರಣದಿಂದಾಗಿ ಜನರಲ್ಲಿ ಲವಲವಿಕೆ ಕಡಿಮೆಯಾಗಿದೆ. ಮಧ್ಯಾಹ್ನದ ಸ್ವಲ್ಪ ಹೊತ್ತು ಹೊರತುಪಡಿಸಿದರೆ ಸಂಜೆ ನಾಲ್ಕು ಗಂಟೆಯ ನಂತರ ಪುನಃ ಚಳಿ ಹೆಚ್ಚಾಗುವುದರಿಂದ ಮನೆ ಬಿಟ್ಟು ಕದಲದಂತಹ ಸ್ಥಿತಿ ನಿರ್ಮಾಣವಾಗಿದೆ. ಆಗುಂಬೆ ಸಮೀಪ ಚಳಿಯ ಪ್ರಮಾಣ ತೀವ್ರವಾಗಿರುವುದರಿಂದ ಜನರು ರಕ್ಷಣೆ ಪಡೆಯಲುಬೆಂಕಿಯ ಮೊರೆ ಹೋಗಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry