ತೀರ್ಥಹಳ್ಳಿ: ಚಿತ್ತಾಕರ್ಷಕ ತೆಪ್ಪೋತ್ಸವಕ್ಕೆ ಸಾಕ್ಷಿಯಾದ ಜನತೆ

7
ಮೂರು ದಿನಗಳ ಸಂಭ್ರಮದ ಎಳ್ಳಮಾವಾಸ್ಯೆ ಜಾತ್ರೆಗೆ ತೆರೆ

ತೀರ್ಥಹಳ್ಳಿ: ಚಿತ್ತಾಕರ್ಷಕ ತೆಪ್ಪೋತ್ಸವಕ್ಕೆ ಸಾಕ್ಷಿಯಾದ ಜನತೆ

Published:
Updated:

ತೀರ್ಥಹಳ್ಳಿ:   ಮಲೆನಾಡಿನ ಹೆಮ್ಮೆಯ ಜಾತ್ರೆಗಳಲ್ಲಿ ಒಂದಾದ ಪುರಾಣ ಪ್ರಸಿದ್ಧ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆ ಪ್ರಯುಕ್ತ ಶುಕ್ರವಾರ ರಾತ್ರಿ ನಡೆದ ತೆಪ್ಪೋತ್ಸವದಲ್ಲಿ ಸಾವಿರಾರು ಮಂದಿ ಪಾಲ್ಗೊಂಡು ಸಂಭ್ರಮಿಸಿದರು. ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡ ರಾಮೇಶ್ವರ ದೇವರ ಉತ್ಸವ ಮೂರ್ತಿಯನ್ನು ವಿಶೇಷ ತೆಪ್ಪದ ಮೂಲಕ ತುಂಗಾ ನದಿಯಲ್ಲಿ ಸಂಚರಿಸುವ ದೃಶ್ಯ ಮನೋಹರವಾಗಿತ್ತು. ನದಿ ದಡದಲ್ಲಿ ಕಿಕ್ಕಿರಿದು ತುಂಬಿದ್ದ ಜನರು ತೆಪ್ಪೋತ್ಸವಕ್ಕೆ ಸಾಕ್ಷಿಯಾದರು.ಪ್ರಸಿದ್ಧ ಕುರುವಳ್ಳಿ ಕಮಾನು ಸೇತುವೆಯನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ತುಂಗೆಯ ನೀರಿನಲ್ಲಿ ಅಲಂಕೃತ ದೀಪಗಳ ಪ್ರತಿಫಲನ ಆಕರ್ಷಕವಾಗಿ ಕಾಣುವ ಮೂಲಕ ನೆರೆದವರಿಗೆ ಮುದ ನೀಡುವಂತಿತ್ತು.   ಚಿತ್ತಾಕರ್ಷಕ ಬಾಣ ಬಿರಿಸಿನ ಸಿಡಿಮದ್ದುಗಳು, ಹೂಗುಚ್ಛಗಳು  ಆಗಸದಲ್ಲಿ ಚಿತ್ತಾರ ಮೂಡಿ ಸಿದವು. ಬಗೆ ಬಗೆಯ ಸಿಡಿಮದ್ದುಗಳ ಪ್ರದರ್ಶನಕ್ಕೆ ನೆರೆದವರು ಚಪ್ಪಾಳೆ ತಟ್ಟುವ ಮೂಲಕ ಹರ್ಷ ವ್ಯಕ್ತಪಡಿಸಿದರು.ತುಂಗಾ ನದಿಯಲ್ಲಿ ತೇಲಿ ಬಿಟ್ಟ ದೀಪಗಳು ನದಿ ನೀರಿನಲ್ಲಿ ತುಳುಕಾಡಿ ತೆಪ್ಪೋತ್ಸವದಲ್ಲಿ ಪಾಲ್ಗೊಂಡವರ ಮನದಲ್ಲಿ ಚಿತ್ತಾರ ಮೂಡಿಸುವಂತಾಗಿತ್ತು. ನದಿ ಸುತ್ತಲು ಅಲಂಕಾರಗೊಂಡ  ದೀಪಗಳಿಂದ ಇಡೀ ವಾತಾವರಣವೇ ಝಗಮಗಿಸುತ್ತಿತ್ತು. ತೆಪ್ಪೋತ್ಸವ ವೀಕ್ಷಿಸಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ  ನದಿ ಸುತ್ತಲಿನ ಪ್ರದೇಶವನ್ನು ಶುಚಿಗೊಳಿಸಲಾಗಿತ್ತು.ನದಿ ದಂಡೆಯ ಮೇಲೆ ವಿದ್ಯುತ್‌ ದೀಪಗಳನ್ನು ಬಳಸಿ ಬೃಹತ್‌ ಗಾತ್ರದ ಈಶ್ವರ ಲಿಂಗ ನಿರ್ಮಿಸಲಾಗಿತ್ತು. ತೆಪ್ಪೋತ್ಸವ ವೀಕ್ಷಣೆಗೆ ತೀರ್ಥಹಳ್ಳಿ ಸೇರಿದಂತೆ ನಾಡಿನ ಅನೇಕ ಕಡೆಗಳಿಂದ ಸಾವಿರಾರು ಮಂದಿ ಬಂದಿದ್ದರು. ಬಿಗಿ ಪೋಲಿಸ್ ಭದ್ರತೆ ಕೈಗೊಳ್ಳಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry