ತೀರ್ಥೋದ್ಭವ; ತಲಕಾವೇರಿಯತ್ತ ಭಕ್ತ ಸಮೂಹ

7

ತೀರ್ಥೋದ್ಭವ; ತಲಕಾವೇರಿಯತ್ತ ಭಕ್ತ ಸಮೂಹ

Published:
Updated:

ಮಡಿಕೇರಿ: ಕಾವೇರಿ ತೀರ್ಥೋದ್ಭವವನ್ನು ವೀಕ್ಷಿಸಲು ಕೊಡಗು ಸೇರಿದಂತೆ ವಿವಿಧ ಸ್ಥಳಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ತಲಕಾವೇರಿಯತ್ತ ಧಾವಿಸಿದ್ದಾರೆ.ಭಗಂಡೇಶ್ವರ- ತಲಕಾವೇರಿ ದೇವಸ್ಥಾನ ಸಮಿತಿಯು ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದು, ತೀರ್ಥೋದ್ಭವ ಹಾಗೂ ಅನ್ನದಾನದಲ್ಲಿ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತೆ ಕೈಗೊಂಡಿದೆ. ಮಂಗಳವಾರ ವಿಧಾನ ಸಭಾಧ್ಯಕ್ಷರಾದ ಕೆ.ಜಿ.ಬೋಪಯ್ಯ ಅವರು ಭಾಗಮಂಡಲ-ತಲಕಾವೇರಿಗೆ ತೆರಳಿ ತುಲಾಸಂಕ್ರಮಣ ಜಾತ್ರೆಯ ಪೂರ್ವ ಸಿದ್ಧತೆ ಬಗ್ಗೆ ಪರಿಶೀಲನೆ ಮಾಡಿದರು.ವಾಹನಗಳ ಸುಗಮ ಸಂಚಾರಕ್ಕೆ ವಿದ್ಯುತ್ ಸಂಪರ್ಕ, ತಲಕಾವೇರಿ ಕುಂಡಿಕೆ ಬಳಿ ಹೂವಿನ ಮತ್ತು ದೀಪಾಲಂಕಾರ, ಅನ್ನದಾನಕ್ಕೆ ಸಿದ್ಧತೆ, ಶುದ್ಧ ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಮತ್ತಿತರ ಸಿದ್ಧತೆ ಬಗ್ಗೆ ಕೆ.ಜಿ.ಬೋಪಯ್ಯ ಅವರು ದೇವಸ್ಥಾನ ಸಮಿತಿ ಅಧ್ಯಕ್ಷರಾದ ಮನು ಮುತ್ತಪ್ಪ ಹಾಗೂ ಉಪ ವಿಭಾಗಾಧಿಕಾರಿ ಜಿ.ಪ್ರಭು ಅವರಿಂದ ಮಾಹಿತಿ ಪಡೆದರು.ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಜರುಗುವ ತೀರ್ಥೋದ್ಭವದಿಂದ ನಾಡಿನ ಜನರಲ್ಲಿ ಶಾಂತಿ-ನೆಮ್ಮದಿ ತರುವಂತಾಗಲಿ, ರಾಷ್ಟ್ರಕ್ಕೆ ಒಳ್ಳೆಯ ಸಂದೇಶ ನೀಡುವಂತಾಗಲಿ ಎಂದು ಬೋಪಯ್ಯ ಹಾರೈಸಿದರು.ತುಲಾಸಂಕ್ರಮಣ ಜಾತ್ರೆಗೆ ಸೂಕ್ತ ಬಂದೋಬಸ್ತ್ ಕಲ್ಪಿಸಲು ಮೂವರು ಉಪ ಪೊಲೀಸ್ ವರಿಷ್ಠಾಧಿಕಾರಿಗಳು, 10 ಉಪ ಪೊಲೀಸ್ ನಿರೀಕ್ಷಕರು, 11 ಪೊಲೀಸ್ ಸಬ್ ಇನ್‌ಸ್ಪೆಕ್ಟರ್, 40 ಸಹಾಯಕ ಪೊಲೀಸ್ ಇನ್‌ಸ್ಪೆಕ್ಟರ್, 420 ಪೊಲೀಸರು ಹಾಗೂ 370 ಗೃಹ ರಕ್ಷಕದಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಅಣ್ಣಿಗೇರಿ  ಮಾಹಿತಿ ನೀಡಿದರು.ತೀರ್ಥೋದ್ಭವ ಸಂದರ್ಭದಲ್ಲಿ ಭಕ್ತಾಧಿಗಳ ಸಂಖ್ಯೆ ಹೆಚ್ಚು ಇರುವುದರಿಂದ ನೂಕುನುಗ್ಗಲು ಅಧಿಕವಾಗುವುದನ್ನು ತಪ್ಪಿಸಲು ಅಗತ್ಯ ಬ್ಯಾರಿಕೇಡ್ ನಿರ್ಮಾಣ ಮತ್ತು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡುವುದು. ಹಾಗೆಯೇ ಸ್ವಯಂ ಸೇವಕರು ಕುಂಡಿಕೆ ಸುತ್ತಮುತ್ತ ಭಕ್ತಾದಿಗಳನ್ನು ನಿಯಂತ್ರಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.ಮುಖ್ಯ ಅರ್ಚಕ ನಾರಾಯಣಾಚಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶಾಂತೆಯಂಡ ರವಿ ಕುಶಾಲಪ್ಪ, ಉಪ ವಿಭಾಗಾಧಿಕಾರಿ ಜಿ.ಪ್ರಭು, ತಹಶೀಲ್ದಾರ್ ವಾಸುದೇವಾಚಾರ್ಯ, ಕೋಡಿ ಮೋಟಯ್ಯ, ತಳೂರು ಕಿಶೋರ್ ಕುಮಾರ್, ಬೆಪ್ಪುರನ ಮೇದಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry