ತೀಸ್ತಾ ನದಿ ನೀರು ಹಂಚಿಕೆ ಒಪ್ಪಂದ ಇಲ್ಲ

7

ತೀಸ್ತಾ ನದಿ ನೀರು ಹಂಚಿಕೆ ಒಪ್ಪಂದ ಇಲ್ಲ

Published:
Updated:
ತೀಸ್ತಾ ನದಿ ನೀರು ಹಂಚಿಕೆ ಒಪ್ಪಂದ ಇಲ್ಲ

ಢಾಕಾ (ಪಿಟಿಐ, ಐಎಎನ್‌ಎಸ್): ಭಾರತ ಮತ್ತು ಬಾಂಗ್ಲಾದೇಶ ನಡುವಿನ ತೀಸ್ತಾ ನದಿ ನೀರು ಹಂಚಿಕೆಗೆ ಸಂಬಂಧಿಸಿದ ಹೊಸ ಒಪ್ಪಂದಕ್ಕೆ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಯಾವುದೇ ಮಾತುಕತೆ ಸಾಧ್ಯತೆಯನ್ನು ಉನ್ನತ ಮೂಲಗಳು ತಳ್ಳಿಹಾಕಿವೆ.`ಎರಡು ದಿನಗಳ ಬಾಂಗ್ಲಾ ಭೇಟಿಗಾಗಿ ಮಂಗಳವಾರ ಇಲ್ಲಿಗೆ ಆಗಮಿಸಿರುವ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ನಿಯೋಗವು ತೀಸ್ತಾ ನದಿ ನೀರು ಹಂಚಿಕೆ ವಿಷಯ ಪ್ರಸ್ತಾಪಿಸದು. ಎಲ್ಲರಿಗೂ ಒಪ್ಪಿಗೆಯಾಗುವ ಪರಿಹಾರೋಪಾಯ ಕಂಡುಕೊಳ್ಳುವ ತನಕ ಈ ಒಪ್ಪಂದಕ್ಕೆ ಸಹಿ ಹಾಕಲಾಗುವುದಿಲ್ಲ~ ಎಂದು ಹಿರಿಯ ಭಾರತೀಯ ಅಧಿಕಾರಿಯೊಬ್ಬರು ತಮ್ಮಂದಿಗೆ ವಿಶೇಷ ವಿಮಾನದಲ್ಲಿ ಬಂದ ಪತ್ರಕರ್ತರಿಗೆ ತಿಳಿಸಿದರು.`ಪಶ್ಚಿಮಬಂಗಾಳ ಮತ್ತು ಬಾಂಗ್ಲಾ ಸರ್ಕಾರಗಳ ಜೊತೆ ಮಾತುಕತೆ ನಡೆಸಿ, ಒಮ್ಮತದ ನಿರ್ಧಾರಕ್ಕೆ ಬರಲು ಕೇಂದ್ರ ಸರ್ಕಾರಕ್ಕೆ ಇನ್ನೂ ಕಾಲಾವಕಾಶ ಬೇಕಾಗಿದೆ. ತೀಸ್ತಾ ನದಿಯಲ್ಲಿ ಎಷ್ಟು ನೀರಿದೆ ಎಂಬುದನ್ನು ಎರಡೂ ದೇಶಗಳು ಈವರೆಗೂ ಜಂಟಿಯಾಗಿ ಸಮೀಕ್ಷೆ ನಡೆಸದ ಕಾರಣ ಈಗಲೇ ಒಪ್ಪಂದಕ್ಕೆ ಬರಲಾಗದು. ನೀರಿನ ಲಭ್ಯತೆಯ ಬಗ್ಗೆ ಉಭಯತ್ರರು ಪ್ರತ್ಯೇಕ ಅಂಕಿ-ಅಂಶಗಳನ್ನು ಹೊಂದಿದ್ದಾರೆ. ಆದರೆ ವಿಶೇಷವಾಗಿ ಅಕ್ಟೋಬರ್‌ನಿಂದ ಏಪ್ರಿಲ್‌ವರೆಗೆ ನೀರಿನ ಹಂಚಿಕೆಯ ಪ್ರಮಾಣವನ್ನು ಪರಿಶೀಲನೆ ನಡೆಸದೆ ಹೇಳಲಾಗದು~ ಎಂದು ಅವರು ಹೇಳಿದರು.ತೀಸ್ತಾ ನದಿ ನೀರು ಹಂಚಿಕೆಯ ಆರಂಭಿಕ ಕರಡುವಿನಲ್ಲಿದ್ದ 25,000 ಕ್ಯೂಸೆಕ್‌ಗಳಿಗೆ ಬದಲಾಗಿ ಅಂತಿಮ ಕರಡುವಿನಲ್ಲಿ 33,000ದಿಂದ 50,000 ಕ್ಯೂಸೆಕ್‌ಗಳವರೆಗೆ ನೀರನ್ನು ಬಾಂಗ್ಲಾಕ್ಕೆ ಬಿಡುಗಡೆ ಮಾಡುವ ಪ್ರಸ್ತಾವಕ್ಕೆ ವಿರೋಧ ಸೂಚಿಸಿ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿಯವರ ಜೊತೆ ಬಾಂಗ್ಲಾಕ್ಕೆ ತೆರಳಲು ನಿರಾಕರಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು.

ಎರಡೂ ದೇಶಗಳ ಮಧ್ಯೆ ಸಂಚಾರ ಮತ್ತು ಸಂಪರ್ಕ ಸೌಲಭ್ಯಗಳ ಮೇಲೆ ಒಪ್ಪಂದ ನಡೆಯುವ ಸಾಧ್ಯತೆ ಬಗ್ಗೆ ಕೇಳಿದ ಪ್ರಶ್ನೆಗೆ, ಇದರಿಂದ ಉಭಯತ್ರರಿಗೆ ಲಾಭವಿದೆ ಎಂದು ಅವರು ಉತ್ತರಿಸಿದರು.ಮಾಧ್ಯಮ ವರದಿ: `ತೀಸ್ತಾ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಈಗ ಯಾವುದೇ ಒಪ್ಪಂದ ಏರ್ಪಡದಿದ್ದಲ್ಲಿ ಸಿಂಗ್ ಅವರ ಬಾಂಗ್ಲಾ ಭೇಟಿಯ ಮೇಲೆ ಕರಿಛಾಯೆ ಮೂಡಲಿದೆ~ ಎಂದು ಇಲ್ಲಿನ `ಡೈಲಿ ಸ್ಟಾರ್~ ಪತ್ರಿಕೆ ವರದಿ ಮಾಡಿದೆ.ಅಭೂತಪೂರ್ವ ಸ್ವಾಗತ: ಈ ಮಧ್ಯೆ, ದ್ವಿಪಕ್ಷೀಯ ಬಾಂಧವ್ಯವೃದ್ಧಿ ಮಾತುಕತೆಗಾಗಿ ಬಂದಿರುವ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ನಿಯೋಗವನ್ನು ಇಲ್ಲಿನ ಷಾ ಜಲಾಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ಸ್ವಾಗತಿಸಲಾಯಿತು. ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅತಿಥಿಗಳನ್ನು ಬರಮಾಡಿಕೊಂಡರು.ಪ್ರಧಾನಿ ಸಿಂಗ್ ಅವರೊಡನೆ ಪತ್ನಿ ಗುರುಶರಣ್ ಕೌರ್, ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ, ನಾಲ್ಕು ಗಡಿ ರಾಜ್ಯಗಳ ಮುಖ್ಯಮಂತ್ರಿಗಳಾದ ತರುಣ್ ಗೊಗೋಯ್ (ಅಸ್ಸಾಂ), ಮಾಣಿಕ್ ಸರ್ಕಾರ್ (ತ್ರಿಪುರಾ), ಪುಲಲ್ತನ್‌ಹಾವ್ಲಾ (ಮಿಜೋರಾಂ), ಮುಕುಲ್ ಸಂಗ್ಮಾ (ಮೇಘಾಲಯ) ಹಾಗೂ ಉನ್ನತ ಅಧಿಕಾರಿಗಳಿದ್ದರು.ಹುತಾತ್ಮರಿಗೆ ಗೌರವಾರ್ಪಣೆ:ಪ್ರಧಾನಿ ಸಿಂಗ್ ಮೊದಲಿಗೆ ನಗರದ ಹೊರವಲಯ ಸವಾರ್‌ನಲ್ಲಿರುವ ರಾಷ್ಟ್ರೀಯ ಸ್ಮಾರಕಕ್ಕೆ ತೆರಳಿ, 1971ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ  ಮಡಿದ ವೀರಯೋಧರಿಗೆ ಗೌರವ ಸಲ್ಲಿಸಿದರು.

`ಸ್ವತಂತ್ರ ಮಹಾನ್ ರಾಷ್ಟ್ರವಾದ ಬಾಂಗ್ಲಾದೇಶದ ಹುಟ್ಟಿಕ್ಕಾಗಿ ಹೋರಾಡಿದ ಎಲ್ಲ ವೀರ ಯೋಧರಿಗೂ ಗೌರವ ಸಲ್ಲಿಸುತ್ತೇನೆ~ ಎಂದು ಸ್ಮಾರಕದಲ್ಲಿದ್ದ ಪ್ರವಾಸಿಗರ ಪುಸ್ತಕದಲ್ಲಿ ಸಿಂಗ್ ನಮೂದಿಸಿದರು. ಇದೇ ಸಂದರ್ಭದಲ್ಲಿ ಅವರು ಸ್ಮಾರಕದ ಆವರಣದಲ್ಲಿ ಸಸಿಯೊಂದನ್ನು ನೆಟ್ಟರು. ಇದಕ್ಕೂ ಮುನ್ನ ಸಿಂಗ್ ಅವರನ್ನು ಬಾಂಗ್ಲಾದ ಸಚಿವರು ಮತ್ತು ಸೇನಾಧಿಕಾರಿಗಳು ಸ್ಮಾರಕಕ್ಕೆ ಸ್ವಾಗತಿಸಿದರು. ಸಂಜೆ ಪ್ರಧಾನಿ ಶೇಖ್ ಹಸೀನಾ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ವಿವಿಧ ಅಂಶಗಳಿಗೆ ಸಂಬಂಧಿಸಿದಂತೆ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದರು.ಬಾಂಗ್ಲಾ ಅಸಮಾಧಾನ

ತೀಸ್ತಾ ನದಿ ನೀರು ಹಂಚಿಕೆ ಒಪ್ಪಂದಕ್ಕೆ ಸಂಬಂಧಿಸಿದ ಮಾತುಕತೆ ಪ್ರಸಕ್ತ ಸಾಧ್ಯವಿಲ್ಲದಿರುವುದರ ಬಗ್ಗೆ ಬಾಂಗ್ಲಾದೇಶ ಸರ್ಕಾರ ತನ್ನ ಅಸಮಾಧಾನ ವ್ಯಕ್ತ ಪಡಿಸಿದೆ.ಬಾಂಗ್ಲಾದೇಶದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಮಿಜರುಲ್ ಕಯಾಸ್ ಅವರು ಮಂಗಳವಾರ ಬೆಳಿಗ್ಗೆ ಇಲ್ಲಿರುವ ಭಾರತದ ರಾಯಭಾರಿ ರಾಜೀವ್ ಮಿತ್ತರ್ ಅವರನ್ನು ತಮ್ಮ ಕಚೇರಿಗೆ ಕರೆಸಿಕೊಂಡು ಈ ಬಗ್ಗೆ ವಿವರಗಳನ್ನು ಕೇಳಿದ್ದಾರೆ. ಆಗ ಮಿತ್ತರ್ `ಈ ಒಪ್ಪಂದಕ್ಕೆ ಸಂಬಂಧಿಸಿದಂತೆ ಇನ್ನಷ್ಟೇ ನವದೆಹಲಿಯಲ್ಲಿ ಆಂತರಿಕ ಮಟ್ಟದ ಮಾತುಕತೆ ನಡೆಯಬೇಕಿದೆ~ ಎಂದು ತಿಳಿಸಿದರೆನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry