ಸೋಮವಾರ, ಮಾರ್ಚ್ 8, 2021
31 °C
ರಾಜ್ಯ, ಹೊರ ರಾಜ್ಯಗಳಿಂದ ಬಂದ ಭಕ್ತರ ದಂಡು

ತುಂಗಭದ್ರೆ: ಸಂಕ್ರಾಂತಿ ಪುಣ್ಯಸ್ನಾನ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಂಗಭದ್ರೆ: ಸಂಕ್ರಾಂತಿ ಪುಣ್ಯಸ್ನಾನ ಸಂಭ್ರಮ

ಮುನಿರಾಬಾದ್‌: ಮಕರ ಸಂಗ್ರಮಣದ ಅಂಗವಾಗಿ ಸಮೀಪದ ಬಂಡಿಹರ್ಲಾಪುರ ನಗರಗಡ್ಡಿ ಮಠದ ಬಳಿಯ ತುಂಗಭದ್ರಾ ನದಿಯಲ್ಲಿ ನೂರಾರು ಜನ ಪುಣ್ಯಸ್ನಾನ ಕೈಗೊಂಡು ಶ್ರೀಶಾಂತ ಲಿಂಗೇಶ್ವರ ಸ್ವಾಮೀಜಿ ಆಶೀರ್ವಾದ ಪಡೆದರು.ಮಠದ ವತಿಯಿಂದ ನಡೆದ ಉಚಿತ ಅನ್ನದಾಸೋಹದಲ್ಲಿ ಗೋದಿಹುಗ್ಗಿ, ರೊಟ್ಟಿ ಕಾಳಿನಪಲ್ಯ, ಅನ್ನ ಸಾಂಬಾರ ವಿಶೇಷ ಊಟವನ್ನು ಸವಿದರು. ಹರ್ಲಾ ಪುರ, ಶಿವಪುರ, ಹುಲಿಗಿ, ಹಿಟ್ನಾಳ, ಗಂಗಾವತಿ, ಅಗಳಕೇರಾ, ಕೂಕನಪಳ್ಳಿ ಸುತ್ತಲಿನ ಅನೇಕ ಗ್ರಾಮಗಳಿಂದ ನೂರಾರು ಭಕ್ತರು ಬಂದಿದ್ದರು. ಬೆಳಿಗ್ಗೆ ಹತ್ತ ಗಂಟೆಯಿಂದ ನಾಲ್ಕು ಗಂಟೆಯ ವರೆಗೆ ಅನ್ನದಾಸೋಹ ನಡೆದಿದ್ದು ವಿಶೇಷವಾಗಿತ್ತು.ಮಕರ ಸಂಕ್ರಮಣ ಅಂಗವಾಗಿ ಇಲ್ಲಿನ ಹುಲಿಗಿಯ ಹುಲಿಗೆಮ್ಮದೇವಿ ದೇವಸ್ಥಾನದ ಹತ್ತಿರ ಹರಿಯುವ ತುಂಗಭದ್ರಾ ನದಿಯಲ್ಲಿ ಸಾವಿರಾರು ಭಕ್ತರು ಪುಣ್ಯಸ್ನಾನ ಕೈಗೊಂಡು ನಂತರ ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ಶಿವಪುರದ ತುಂಗಭದ್ರಾ ನದಿಯಲ್ಲಿ ಕೂಡ ಪುಣ್ಯಸ್ನಾನ ಮಾಡಿದ ನೂರಾರು ಭಕ್ತರು ಮಾರ್ಕಂಡೇಶ್ವರ ದರ್ಶನ ಪಡೆದರು.ಸುಗ್ಗಿ ಹಬ್ಬ ಸಂಕ್ರಮಣದ ಅಂಗವಾಗಿ ರಾಜ್ಯ, ಹೊರರಾಜ್ಯದ ಹಲವು ಭಾಗಗಳಿಂದ ಆಗಮಿಸಿದ ಭಕ್ತರು ಹರಿಯುವ ನದಿಯಲ್ಲಿ ಎಳ್ಳು, ಎಣ್ಣೆ, ಅರಿಷಿಣ ಪುಡಿ ಮಿಶ್ರಣವನ್ನು ಮೈಗೆ ಹಚ್ಚಿಕೊಂಡು ವೃದ್ಧರು, ಮಕ್ಕಳು, ಮಹಿಳೆಯರು ಸೇರಿ ಅನೇಕರು ಸ್ನಾನ ಮಾಡಿದರು.ಸೂರ್ಯ ತನ್ನ ಪಥ ಬದಲಿಸುವ ವಿದ್ಯಮಾನದ ಈ ಸಂಕ್ರಮಣ ಕಾಲದಲ್ಲಿ ನದಿಯಲ್ಲಿ ಮಿಂದರು. ಪಾಪ ಪರಿಹಾರವಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬುದು ಹಲವರ ನಂಬಿಕೆ. ಕುಟುಂಬ ಸಮೇತ ಬರುವ ಭಕ್ತಾದಿಗಳು ತಮ್ಮ ಸ್ನಾನದ ಜತೆ ವಾಹನಗಳನ್ನು ತೊಳೆದು ಪೂಜಿಸಿದರು.ನಂತರ ನದಿ ದಡದಲ್ಲಿ ತಾವು ತಂದ ರೊಟ್ಟಿ, ಕಾಳಿನಪಲ್ಯ, ಕರ್ಜಿಕಾಯಿ, ಮೊಸರು ಅನ್ನ, ಪುಡಿಚಟ್ನಿ ಸಹಿತ ಊಟ ಸವಿದರು. ಸಾಮಾನ್ಯವಾಗಿ ಗ್ರಾಮೀಣ ಭಾಗದಿಂದ ಹೆಚ್ಚಾಗಿ ಕುಟುಂಬ ಸಮೇತ ಬರುವ ಭಕ್ತರು ಭಕ್ತಿ ಶ್ರದ್ಧೆಯಿಂದ ನದಿಯಲ್ಲಿ ಮಿಂದು ದೇವಿ ದರ್ಶನ ಪಡೆದರು.ಗಂಗಾವತಿ ವರದಿ: ಸಂಕ್ರಮಣದ ದಿನದ ಅಂಗವಾಗಿ ತುಂಗಭದ್ರಾ ನದಿತಟಕ್ಕೆ ಪುಣ್ಯಸ್ನಾನ ಮಾಡಲು ಜನರು ಶುಕ್ರವಾರ ತಂಡೋಪ ತಂಡವಾಗಿ ಬಂದಿದ್ದರು. ತಾಲ್ಲೂಕಿನ ಆನೆಗೊಂದಿ ಚಿಂತಾಮಣಿ, ಕಲ್ಲಿನ ಸೇತುವೆ, ವಿದೇಶಿಗರ ತಾಣ ವಿರೂಪಾಪುರ ಗಡ್ಡೆ, ಋಷಿಮುಖ ಪರ್ವತ, ಸಣಾಪುರದ ಕರಿಯಮ್ಮನಗಡ್ಡೆ, ಸಣಾಪುರದ ಜಲಾಶಯ ಮೊದಲಾದ ಕಡೆಗೆ ಕುಟುಂಬ ಸಮೇತರಾಗಿ ಬಂದು ನದಿಯಲ್ಲಿ ಪುಣ್ಯಸ್ನಾನ ಮಾಡಿದರು.  ಸಮೀಪದಲ್ಲಿರುವ ಪುರಾತನ ಲಕ್ಷ್ಮಿ, ಪಂಪಾಸರೋವರ, ರಂಗನಾಥ, ನವವೃಂದಾವನ ಗಡ್ಡೆ, ಆಂಜನೇಯ ಬೆಟ್ಟಕ್ಕೆ ತೆರಳಿ ದೇವರ ದರ್ಶನ ಮಾಡಿದರು. ಕುಟುಂಬ ಸಮೇತವಾಗಿ ಬಂದ ಕೆಲವರು ನದಿಯಲ್ಲಿ ಸ್ನಾನ, ದೇವರ ದರ್ಶನ ಮುಗಿಸಿ ನದಿಪಾತ್ರದಲ್ಲಿ ಕುಳಿತು ಊಟ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮಹಿಳೆಯರು, ಮಕ್ಕಳು, ವೃದ್ಧರು ಎಂಬ ಭೇದವಿಲ್ಲದೇ ಎಲ್ಲ ವಯೋಮಾನದವರು ಉತ್ಸಾಹದಿಂದ ನದಿಗೆ ಧುಮುಕುತ್ತಿದ್ದ ದೃಶ್ಯ ಕಂಡು ಬಂತು.ಕೊಪ್ಪಳ, ಕುಷ್ಟಗಿ, ಯಲಬುರ್ಗಾ, ಕಾರಟಗಿ, ಸಿದ್ದಾಪುರ, ಸಿಂಧನೂರು, ತಾವರಗೇರ, ಕನಕಗಿರಿ, ಬಸವಪಟ್ಟಣ ಹೀಗೆ ನೆರೆ-ಹೊರೆಯ ತಾಲ್ಲೂಕಿನ ಊರುಗಳಿಂದ ಜನ ಬಂದಿದ್ದರು. ಬೆಳಗ್ಗೆ 8ರಿಂದ ಸಂಜೆ 4 ಗಂಟೆಯವರೆಗೂ ಜನ ಸಂಚಾರ ದಟ್ಟವಾಗಿದ್ದರಿಂದ ಸಂಚಾರ ಸಮಸ್ಯೆ ಇತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.