ತುಂಡು ಭೂಮಿಯಲ್ಲಿ ಹಿಂಡು ತರಕಾರಿ

7

ತುಂಡು ಭೂಮಿಯಲ್ಲಿ ಹಿಂಡು ತರಕಾರಿ

Published:
Updated:
ತುಂಡು ಭೂಮಿಯಲ್ಲಿ ಹಿಂಡು ತರಕಾರಿ

ಗೋಕರ್ಣದ ಮುಖ್ಯ ರಸ್ತೆಯಲ್ಲಿ ಮುಂಜಾನೆ ನಾಲ್ಕರ ವೇಳೆಗೆ ಗದ್ದಲ ಶುರುವಾಗುತ್ತದೆ. ಹಾಲಕ್ಕಿ ಒಕ್ಕಲಿಗ ಮಹಿಳೆಯರು ತರಕಾರಿ ಬುಟ್ಟಿಗಳನ್ನು ತಲೆ ಮೇಲೆ ಹೊತ್ತು ತಂದು ಅವನ್ನು ತೂಕ ಹಾಕಿಸಲು ಸರದಿಯಲ್ಲಿ ನಿಲ್ಲುತ್ತಾರೆ. ತರಕಾರಿ ಖರೀದಿ ಮಾಡುವವರು, ತರಕಾರಿಗಳನ್ನು ಚೀಲಕ್ಕೆ ತುಂಬಿ ಸಾಗಿಸುವವರ ಗಡಿಬಿಡಿಯ ಮಾತುಕತೆಗಳು ಗದ್ದಲದ ವಾತಾವರಣ ಸೃಷ್ಟಿಸುತ್ತವೆ. ಇಲ್ಲಿ ಮಾರಾಟವಾಗುವ ತರಕಾರಿಗಳನ್ನು ಬೆಳೆಯುವುದು  ಗೋಕರ್ಣದ ಸುತ್ತಲಿನ ಭತ್ತದ ಗದ್ದೆಗಳಲ್ಲಿ.ಗೋಕರ್ಣದ ಸುತ್ತಲಿನ ಹಳ್ಳಿಗಳಲ್ಲಿ ಸುತ್ತಾಡಿದರೆ ಹಾಲಕ್ಕಿ ಒಕ್ಕಲಿಗ ಮಹಿಳೆಯರು ತರಕಾರಿ ಗಿಡಗಳಿಗೆ ನೀರು ಹಾಕುವ, ತರಕಾರಿ ಕೊಯ್ಲು ಮಾಡುವ ದೃಶ್ಯಗಳನ್ನು ನೋಡಬಹುದು. ರುದ್ರಪಾದ, ಬ್ಯಾಲಹಿತ್ಲು, ಬಾವಿಕೊಡ್ಲು, ಬೈಲಕೇರಿ, ಬಿಜ್ಜೂರು, ಬಂಕಿಕೊಡ್ಲು, ಕೊಳ್ಳ, ತಾರಾಮಕ್ಕಿ, ಬಂಡಿಕೇರಿ, ತಲಗೇರಿ, ಕಡಮೆ, ಬಿದರಕೇರಿ, ನಾಡಮಸ್ಕೇರಿ, ಹಾರುಮಸ್ಕೇರಿ, ಹನೇಹಳ್ಳಿ, ಹೊಸ್ಕೇರಿ ಮತ್ತಿತರ ಹಳ್ಳಿಗಳ ನೂರಾರು ಎಕರೆ ಗದ್ದೆಯಲ್ಲಿ ಈಗ ತರಕಾರಿ ಬೆಳೆಗಳದ್ದೇ ಕಾರುಬಾರು.ಭತ್ತದ ಕೊಯ್ಲಿನ ನಂತರ ಗದ್ದೆಗಳಲ್ಲಿ ತರಕಾರಿ ಬೆಳೆಗಳ ಬಿತ್ತನೆ ಆರಂಭವಾಗುತ್ತದೆ. ಇಲ್ಲಿನ ಬಹುತೇಕ ರೈತರಿಗೆ ಇರುವುದು ಹತ್ತಿಪ್ಪತ್ತು ಗುಂಟೆಯಷ್ಟು ತುಂಡು ಭೂಮಿ. ‘ಎರಡು ಎಕರೆ ಭೂಮಿ ಇದ್ದವರೇ ದೊಡ್ಡ ರೈತರು. ತುಂಡು ಭೂಮಿಯಲ್ಲೇ ತರಕಾರಿ ಬೆಳೆಯುವ ಕ್ರಮ ಬೆರಗು ಹುಟ್ಟಿಸುತ್ತದೆ. ಬದನೆ, ಮೆಣಸಿನಕಾಯಿ, ಚವಳಿಕಾಯಿ, ಬೆಂಡೆ, ಈರುಳ್ಳಿ, ಮೂಲಂಗಿ, ಗೆಡ್ಡೆ ಕೋಸು, ಪುಂಡಿ, ಹರಿವೆ, ಗೋಳಿ, ಪಾಲಕ್, ಬಸಳೆ, ತೊಂಡೆ, ಹಲಸಂದೆ, ಹಾಗಲ, ಹೀರೆ, ಸೋರೆ, ಮಗೆಕಾಯಿ, ಪಡುವಲ, ಹಾಲುಗುಂಬಳ, ಬೂದುಗುಂಬಳ, ಗೆಣಸು ಹೀಗೆ ಹತ್ತು ಹಲವು ತರಕಾರಿ ಬೆಳೆಯುತ್ತಾರೆ.  ಜೊತೆಗೆ ಮನೆ ಬಳಕೆಗೆ ಒಂದಷ್ಟು ಗಂಜಿ ರಾಗಿ ಬೆಳೆಯುವುದು ಈ ಹಳ್ಳಿಗಳ ರೈತರ ವಿಶೇಷ.ಡಿಸೆಂಬರ್ ತಿಂಗಳು ಬಂತೆಂದರೆ ಬೇಸಿಗೆ ತರಕಾರಿ ಸೀಸನ್ ಆರಂಭ. ಗುದ್ದಲಿಯಿಂದ ಭೂಮಿ ಅಗೆದು ಒಣ ತರಗು, ಸುಡು ಮಣ್ಣು, ಕೊಟ್ಟಿಗೆ ಗೊಬ್ಬರ ಹಾಕುವ ಕೆಲಸಗಳನ್ನು ರೈತ ಮಹಿಳೆಯರೇ ಮಾಡುತ್ತಾರೆ. ಬೆಳೆದ ತರಕಾರಿ ಮಾರಾಟ ಮಾಡುವವರೂ ಅವರೇ. ಎಮ್ಮೆ, ಆಕಳು ಇಲ್ಲದವರು ಹಣ ಕೊಟ್ಟು ಕೊಟ್ಟಿಗೆ ಗೊಬ್ಬರ ಖರೀದಿಸಿ ಬಳಸುತ್ತಾರೆ.ಬೆಳಗಿನ ಮೂರು ಗಂಟೆಗೆ ಎದ್ದು ತರಕಾರಿ ಬೆಳೆಗಳಿಗೆ ನೀರುಣಿಸುತ್ತಾರೆ. ನಂತರ ಹಿಂದಿನ ಸಂಜೆ ಕೊಯ್ದ ತರಕಾರಿಗಳನ್ನು ಬುಟ್ಟಿಗೆ ತುಂಬಿಕೊಂಡು ಗೋಕರ್ಣದತ್ತ ನಡೆಯುತ್ತಾರೆ. ತರಕಾರಿ ಮಾರಿ ಮನೆಗೆ ಬಂದ ಮೇಲೆ ಮತ್ತೆ ಗಿಡಗಳ ಆರೈಕೆ ಮಾಡುತ್ತಾರೆ.ಕರಾವಳಿ ಪ್ರದೇಶದ ಭೂಮಿಯಲ್ಲಿ ಮರಳಿನ ಅಂಶ ಹೆಚ್ಚಾಗಿರುವುದರಿಂದ ನಿತ್ಯ ಕನಿಷ್ಠ 300 ಬಿಂದಿಗೆ ನೀರು ಹಾಕುವುದು ಅನಿವಾರ್ಯ. ಚುರುಕಾಗಿ ಓಡಾಡುತ್ತ ಪ್ರತಿಯೊಂದು ಕೆಲಸ ಮಾಡುತ್ತಾರೆ. ಅವರ ಚಟುವಟಿಕೆ ಅನೇಕರಿಗೆ ಮಾದರಿ.ಬೆಳೆಗಳಿಗೆ ದಾಳಿ ಮಾಡುವ ಕೀಟಗಳನ್ನು ಆಕರ್ಷಿಸಲು ಅಲ್ಲಲ್ಲಿ ಚೆಂಡು ಹೂ ಹಾಗೂ ತುಳಸಿ ಗಿಡಗಳನ್ನು ಬೆಳೆಯುತ್ತಾರೆ. ಏಪ್ರಿಲ್ ಕೊನೆಯ ವೇಳೆಗೆ ತರಕಾರಿ ಋತು ಮುಗಿಯುತ್ತದೆ. ಅಜ್ಜಿಹಕ್ಲು, ಬಿದರಕೇರಿ, ಬಂಡಿಕೇರಿಯಂತಹ ಗುಡ್ಡದ ಮೇಲಿನ ಊರುಗಳಲ್ಲಿ ಮಳೆಗಾಲದಲ್ಲೂ ಕೆಲವರು ತರಕಾರಿ ಬೆಳೆಯುತ್ತಾರೆ. ಆಗ ಪಡುವಲ, ಬೆಂಡೆ, ಹೀರೆ, ಸೋರೆ, ಹಾಗಲಗಳನ್ನು ಬೆಳೆಯುತ್ತಾರೆ. ಮೆಣಸಿನಕಾಯಿ, ಚವಳಿಕಾಯಿ, ತೊಂಡೆಕಾಯಿಗಳನ್ನು ಕಿಲೋ ಲೆಕ್ಕದಲ್ಲಿ ಮಾರಾಟವಾಗುತ್ತವೆ.  ಉಳಿದ ತರಕಾರಿಗಳು ಹೆಡಿಗೆ (ಬುಟ್ಟಿ)ಲೆಕ್ಕದಲ್ಲಿ ಮಾರಾಟವಾಗುತ್ತವೆ. ಗೆಣಸನ್ನು ಕ್ವಿಂಟಲ್‌ಗೆ 650ರೂಗೆ  ಖರೀದಿಸುವ ಮಧ್ಯವರ್ತಿಗಳು ಅದನ್ನು ಮಹಾರಾಷ್ಟ್ರ, ಗೋವಾ,ಗುಜರಾತ್ ಮೊದಲಾದ ರಾಜ್ಯಗಳಿಗೆ ಸಾಗಿಸಿ ಅಲ್ಲಿ ಇನ್ನೂ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಕೆಲವರು ಸಮೀಪದ ಮಾದನಗೇರಿ, ಅಂಕೋಲಾ, ಕಾರವಾರ ಸಂತೆಗಳಿಗೆ ತರಕಾರಿ ಒಯ್ದು ಮಾರಾಟ ಮಾಡಿ ಸ್ವಲ್ಪ ಹೆಚ್ಚು ಹಣ ಗಳಿಸುತ್ತಾರೆ. ಬೇಸಿಗೆಯಲ್ಲಿ ತರಕಾರಿ ಬೆಳೆದು ಮಾರಾಟ ಮಾಡುವುದು ಅನೇಕರಿಗೆ ಆದಾಯದ ಮೂಲವಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry