ತುಂಡ್ ಹೈಕ್ಳ ಸಾವಾಸಾ...

7

ತುಂಡ್ ಹೈಕ್ಳ ಸಾವಾಸಾ...

Published:
Updated:
ತುಂಡ್ ಹೈಕ್ಳ ಸಾವಾಸಾ...

`ವಾಂಗೋ~ ಎಂದರು ನಿರ್ದೇಶಕ ಯೋಗರಾಜ ಭಟ್. ಹೂನಗೆ ತುಳುಕಿಸುತ್ತ ಬಂದವರು ನಟಿ ರಾಧಿಕಾ ಪಂಡಿತ್.`ಭಟ್ಟರು ತಮಿಳು ಮೋಹಿ~ ಎಂದು ಗುಂಪಿನಲ್ಲಿ ಯಾರೋ ಹೇಳಿದರು. ಕಾವೇರಿ ಕಾವು ತಟ್ಟಿದಂತೆ, `ನಾನು ವ್ಯಾನ್ ಗೋ ಅಂದೆನಾ?~ ಎಂದರು `ಅಮಾಯಕ~ ಭಟ್ಟರು! ಅವರ ಕಣ್ಣಿಗೆ ರಾಧಿಕಾ ಸೂರ್ಯಕಾಂತಿ ಅಂತೆಯೇ ಕಂಡಿರಬೇಕು.ಅದು `ಡ್ರಾಮಾ~ ಚಿತ್ರದ ಸುದ್ದಿಗೋಷ್ಠಿ. ಸಿನಿಮಾದ ಭಾಷೆಯಲ್ಲೇ ಹೇಳುವುದಾದರೆ- ತುಂಡ್ ಹೈಕ್ಳ ಕಲರವ. `ಡ್ರಾಮಾ~ದ ಗೋಷ್ಠಿಯನ್ನು ಮೂರು ಅಂಕಗಳಲ್ಲಿ ವಿವರಿಸಬಹುದು. ಮೊದಲನೆಯದು ಗೀತಕಾಂಡ. ಎರಡನೆಯದು ವಿಷಾದ ಕಾಂಡ. ಮೂರನೆಯದು ಸ್ಮರಣೆಕಾಂಡ.ಗೀತಕಾಂಡದ ಹಾಡುಗಳ ವಿಷಯಕ್ಕೆ ಬರೋಣ. ಯೋಗರಾಜ ಭಟ್ ಸಿನಿಮಾ ಎಂದಮೇಲೆ ಹಾಡುಗಳದು ಮೇಲುಗೈ. `ಡ್ರಾಮಾ~ ಗೀತೆಗಳು ಈಗಾಗಲೇ ಪೇಟೆಯಲ್ಲಿವೆ. `ಸಿಕ್ಕಾಪಟ್ಟೆ ಹಿಟ್ ಆಗಿವೆ~ ಎಂದು ಚಿತ್ರತಂಡ ಒಕ್ಕೊರಲಿನಿಂದ ಹೇಳಿತು.

`ಮಂಡ್ಯದ ಭಾಷೆ ಬಳಸಿರೋದು ಯಶಸ್ವಿ ಆದಂತಿದೆ. ಆ ಭಾಷೆಯ ಪರಂಪರೆಯೇನು ಕಡಿಮೆಯಾ? ಮಂಟೇಸ್ವಾಮಿವರೆಗೂ ಮಂಡ್ಯ ಕನ್ನಡದ ಸೊಗಡಿದೆ. ಆ ನುಡಿಗಟ್ಟನ್ನು ಕೇಳೋದೇ ಒಂದು ಸುಖ~ ಎಂದರು ಭಟ್ಟರು. `ಮನಸಾರೆ~, `ಪಂಚರಂಗಿ~ ಚಿತ್ರಗಳಿಗಿಂತಲೂ `ಡ್ರಾಮಾ~ದ ಗೀತೆಗಳ ಬಿಕರಿ ಜೋರಾಗಿದೆ ಎಂದು ಆನಂದ್ ಆಡಿಯೋದ ಮೋಹನ್ ಕೂಡ ಕೋರಸ್ ಹಾಡಿದರು.ಅಂದಹಾಗೆ, ಧಾರವಾಡಿಯಾದ ಭಟ್ಟರು ಮಂಡ್ಯಕನ್ನಡ ಕರಗತ ಮಾಡಿಕೊಂಡೆ ಅಂದುಕೊಂಡಿರುವುದು ಹೀಗೆ- `ಲೊಕೇಶನ್ ಹುಡುಕಾಟದ ಸಮಯದಲ್ಲಿ ಹೋಂವರ್ಕ್ ಮಾಡಿದ್ದಾಗಿದೆ. ಮಂಡ್ಯದ ಹುಡುಗರೇ ಆದ, `ಡ್ರಾಮಾ~ದ ನಾಯಕರೂ ಆದ ಯಶ್ ಹಾಗೂ ನೀನಾಸಂ ಸತೀಶ್, ಭಟ್ಟರ ಗೀತೆಗಳು ಮತ್ತು ಮಾತುಗಳು ಮಂಡ್ಯದ ಸ್ಪರ್ಶ ಪಡೆದುಕೊಳ್ಳಲು ನೆರವಾಗಿದ್ದಾರಂತೆ.

ಮಂಡ್ಯಗನ್ನಡ, ಅಲ್ಲಿನ ರಂಗಗೀತೆಗಳ ಪ್ರಭಾವ- ಎರಡನ್ನೂ ಡ್ರಾಮಾ ಹಾಡುಗಳಲ್ಲಿ ಕಾಣಬಹುದಂತೆ.  `ಡ್ರಾಮಾ~ದ ಭಟ್ಟರ ಪದ್ಯಗಳಿಗೆ ಮಟ್ಟು ಹಾಕಿರುವುದು ಹರಿಕೃಷ್ಣ. `ಈ ಚಿತ್ರವೊಂದು ವಿಶೇಷ ಅನುಭವ~ ಎಂದವರು ಸವಿ ನೆನಪು ಚಪ್ಪರಿಸಿದರು.

ಸೋನು ನಿಗಮ್ ಹಾಡಿದ `ಚೆಂದುಟಿ~ ಗೀತೆಯನ್ನು ಆರಂಭದಲ್ಲಿ ಕೈಬಿಟ್ಟಿದ್ದು, ಆನಂತರ ಚಿತ್ರತಂಡದ ಒತ್ತಾಯದ ಮೇರೆಗೆ ತುಟಿಯನ್ನು ಒಪ್ಪಿಕೊಂಡಿದ್ದನ್ನು ಹರಿಕೃಷ್ಣ ನೆನಪಿಸಿಕೊಂಡರು.

`ಚೆಂದುಟಿ~ ಹಾಡನ್ನು ಹಾಡಿದ ಸೋನು ನಿಗಂ ಅವರ ಅದ್ಭುತ ಕಂಠಸಿರಿಯನ್ನು ಮೆಚ್ಚಿಕೊಂಡರು. `ಸೋನು ಬಿಡಿ ಸಾರ್, ದೈತ್ಯ. ಏಷ್ಯಾ ಖಂಡದಲ್ಲಿಯೇ ಅದ್ಭುತ ಪ್ರತಿಭೆ~ ಎಂದು ಭಟ್ಟರು ಸೋನುಗಾನ ಮುಂದುವರಿಸಿದರು.ಸಿನಿಮಾ ಬಗ್ಗೆ ಚಿತ್ರತಂಡ ಮಾತನಾಡಿದ್ದು ಕಡಿಮೆಯೇ. `ರೀರೆಕಾರ್ಡಿಂಗ್ ನಡೆಯುತ್ತಿದೆ. ನವೆಂಬರ್ ಮೊದಲ ವೇಳೆಗೆ ಚಿತ್ರ ತೆರೆಕಾಣಲಿದೆ~ ಎಂದು ನಿರ್ಮಾಪಕ ಜಯಣ್ಣ ಹೇಳಿದರು.ಎರಡನೇ ಅಂಕ ವಿಷಾದಕ್ಕೆ ಸಂಬಂಧಿಸಿದ್ದು. `ಡ್ರಾಮಾ~ದ ಕಥೆಯಲ್ಲೊಂದು ಅಧ್ಯಾತ್ಮದ ಎಳೆ ಇದೆ. ಬದುಕು ಕೊನೆಯಿಲ್ಲದ ನಾಟಕ ಎನ್ನುವುದನ್ನು ಸಿನಿಮಾ ಧ್ವನಿಸುತ್ತದಂತೆ. ಅಂಬರೀಷ್ ನಟನೆಯ `ಬೊಂಬೆ ಆಡ್ಸೋನು~ ಗೀತೆ ಕೂಡ ವಿಷಾದದಲ್ಲೇ ಅದ್ದಿ ತೆಗೆದಂತಿತ್ತು.

ವಿಷಾದದ ಮಾತು ಕಡಿಮೆಯೇ ಇರಲಿ ಎನ್ನುವಂತೆ ನಾಯಕ ನಟ ನೀನಾಸಂ ಸತೀಶ್ ಸವಿ ನೆನಪುಗಳ ಚಪ್ಪರಿಸಿದರು- ಅದು `ಸ್ಮರಣೆಕಾಂಡ~.  `ನನ್ನ ಸಿನಿಮಾ ಬದುಕಿನಲ್ಲಿ ಇದು ಮಹತ್ವದ ಚಿತ್ರ.

ಈ ಹಾಡಲ್ಲಿ ನಾನೂ ಇದ್ದೇನೆ ಅಂದುಕೊಳ್ಳುವುದು, ಹಾಡಿನಲ್ಲಿ ಕುಣಿಯುವುದು- ಇದೆಲ್ಲ ನನಗೆ ಹೊಸತು. ಹಾಗಾಗಿಯೇ ಚಿತ್ರದ ಎಲ್ಲ ಹಾಡುಗಳೂ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿವೆ.

`ಡ್ರಾಮಾ~ ತೆರೆಕಾಣುವ ಮೊದಲೇ ನಾಯಕನಾಗಿ ಮೂರ‌್ನಾಲ್ಕು ಚಿತ್ರಗಳ ಅವಕಾಶ ಹುಡುಕಿಕೊಂಡು ಬಂದಿವೆ~ ಎಂದು ಸತೀಶ್ ಕೊಂಚ ಭಾವುಕರಾಗಿಯೇ ಹೇಳಿದರು.

ಮಾತು ಮುಗಿಯಿತು ಎನ್ನುವಂತೆ ಚಿತ್ರತಂಡ ಚೆಲ್ಲಾಪಿಲ್ಲಿ ಆಯಿತು; `ಡ್ರಾಮಾ~ ಯಾವಾಗಲೂ ಅಪೂರ್ಣ ಎನ್ನುವಂತೆ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry