ತುಂತುರು ಮಳೆ: ಚೇತರಿಸಿದ ಬೆಳೆ

ಶುಕ್ರವಾರ, ಜೂಲೈ 19, 2019
24 °C

ತುಂತುರು ಮಳೆ: ಚೇತರಿಸಿದ ಬೆಳೆ

Published:
Updated:

ಕುಷ್ಟಗಿ: ಕಳೆದ ಮೂರು ದಿನಗಳಿಂದಲೂ ಹಗಲು ರಾತ್ರಿ ಎನ್ನದೆ ತಾಲ್ಲೂಕಿನಾದ್ಯಂತ ಸುರಿದ ತುಂತುರು ಮಳೆ ನಿಂತಿದ್ದು. ಕಳೆದ ಒಂದು ತಿಂಗಳಿನಿಂದಲೂ ಮಳೆಯ ದರ್ಶನವಿಲ್ಲದೇ ತೇವಾಂಶ ಕೊರತೆಯಿಂದ ಬಾಡಿ ನಿಂತಿದ್ದ ಮುಂಗಾರಿನ ವಿವಿಧ ಬೆಳೆಗಳು ಚೇತರಿಸಿಕೊಂಡಿದ್ದೆ.ಒಟ್ಟು 68,250 ಹೆಕ್ಟರ್ ಮುಂಗಾರು ಬಿತ್ತನೆ ಗುರಿಯಲ್ಲಿ ಈವರೆಗೆ 46,005 ಹೆಕ್ಟರ್ ಬಿತ್ತನೆಯಾಗಿದೆ. ಈಗ ಮಳೆಯಾಗಿರುವುದರಿಂದ ಉಳಿದ ಪ್ರದೇಶದ ಬಿತ್ತನೆಗೆ ಚಾಲನೆ ದೊರೆತಿದೆ ಎಂದು ಕೃಷಿ ಇಲಾಖೆ ತಾಂತ್ರಿಕ ಸಹಾಯಕ ಶೇಖರಯ್ಯ ತಿಳಿಸಿದರು.ನೀರಾವರಿ ಆಶ್ರದಲ್ಲಿ ಮಾತ್ರ ಬೆಳೆಯಲಾಗುತ್ತಿದ್ದ ಮೆಕ್ಕೆಜೋಳ ಕಳೆದ ಎರಡು ವರ್ಷಗಳಿಂದ ಖುಷ್ಕಿ ಪ್ರದೇಶಕ್ಕೂ ಕಾಲಿರಿಸಿದೆ. ಈ ಬಾರಿ ಅತ್ಯಧಿಕ (6,680 ಹೆಕ್ಟರ್) ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದ್ದು ಮಳೆ ಸದ್ಯಕ್ಕಂತೂ ರೈತರಲ್ಲಿ ಉತ್ಸಾಹ ತಂದಿದೆ. ಅದೇ ರೀತಿ ತೇವಾಂಶ ಇಲ್ಲದೇ ಬಾಡುತ್ತಿದ್ದ ಹೈಬ್ರಿಡ್ ಸಜ್ಜೆ, ಅಲ್ಪಾವಧಿ ತಳಿ ಹೆಸರು, ಸೂರ್ಯಕಾಂತಿ, ಅಂತರಬೆಳೆಯಾಗಿರುವ ತೊಗರಿ ಮತ್ತಿತರ ಬೆಳೆಗಳಿಗೆ ತುಂತುರು ಮಳೆ ಆಸರೆಯಾಗಿ ಬಂದಿದೆ. ಆದರೆ ಅವಧಿ ಮೀರಿರುವ ಬಹಳಷ್ಟು ಪ್ರದೇಶದಲ್ಲಿನ ಹೆಸರು ಬೆಳೆಗೆ ಮಳೆಯಿಂದ ಲಾಭವಾಗಲಿಲ್ಲ. ತಡವಾಗಿ ಬಿತ್ತಿದ ಹೆಸರು ಬೆಳೆಗೆ ಪೂರಕವಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.ಎಣ್ಣೆಕಾಳು ಬೆಳೆಗಳಾದ ಶೇಂಗಾ ಮತ್ತು ಸೂರ್ಯಕಾಂತಿ ಬೆಳೆಗಳಿಗೂ ಮಳೆಯಿಂದ ಅನುಕೂಲವಾಗಿದೆ. ಜಿಟಿ ಜಿಟಿ ಮಳೆಯಿಂದ ಬೇರಿಗೆ ಹಸಿ ತಾಕಿದ್ದರೂ ಸಾಕಾಗುವುದಿಲ್ಲ, ಇನ್ನೊಂದು ವಾರದೊಳಗೆ ಮತ್ತೆ ಮಳೆಯಾದರೆ ಉತ್ತಮ. ಮಳೆ ಬರುವ ನಿರೀಕ್ಷೆ ಇದೆ ಎಂಬ ವಿಶ್ವಾಸ ರೈತ ಹನಮಂತಪ್ಪ ಕುರಿ, ಹುಲುಗಪ್ಪ ಮತ್ತಿತರರದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry