ಸೋಮವಾರ, ನವೆಂಬರ್ 18, 2019
23 °C

`ತುಂಬಾ ಒತ್ತಡದಲ್ಲಿದ್ದೇನೆ'

Published:
Updated:

ಮೊಹಾಲಿ (ಪಿಟಿಐ): ಬ್ಯಾಟಿಂಗ್‌ನಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವುದರಿಂದ ಅತಿಯಾದ ಒತ್ತಡದಲ್ಲಿದ್ದೇನೆ ಎಂದಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಆ್ಯಡಮ್ ಗಿಲ್‌ಕ್ರಿಸ್ಟ್, `ಮುಂದಿನ ಪಂದ್ಯದಲ್ಲಿ ಬೇರೊಬ್ಬರು ತಂಡವನ್ನು ಮುನ್ನಡೆಸುವ ಸಾಧ್ಯತೆಯೂ ಇದೆ' ಎಂಬ ಸೂಚನೆ ನೀಡಿದ್ದಾರೆ.`ತಂಡದ ಆಡಳಿತ ನನ್ನ ಪ್ರದರ್ಶನವನ್ನು ಗಮನಿಸುತ್ತಿದೆ. ನಾನು ಸಾಕಷ್ಟು ರನ್ ಪೇರಿಸಿಲ್ಲ. ಒಂದು ಕ್ಯಾಚ್ ಕೂಡಾ ಕೈಚೆಲ್ಲಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಮುಂದಿನ ಪಂದ್ಯಕ್ಕಾಗಿ ಅಂತಿಮ ಇಲೆವೆನ್‌ನ ಆಯ್ಕೆಯ ವೇಳೆ ಈ ಎಲ್ಲಾ ವಿಷಯಗಳು ಚರ್ಚೆಗೆ ಬರಲಿವೆ. ಯುವ ಆಟಗಾರರ ಉತ್ತಮ ಪ್ರದರ್ಶನದಿಂದಾಗಿ ನಮಗೆ ಜಯ ದೊರೆಯಿತು' ಎಂದು ಅವರು ಭಾನುವಾರ ನಡೆದ ಪಂದ್ಯದ ಬಳಿಕ ಪ್ರತಿಕ್ರಿಯಿಸಿದ್ದಾರೆ.ಪಿಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಏಳು ವಿಕೆಟ್‌ಗಳಿಂದ ಪುಣೆ ವಾರಿಯರ್ಸ್ ತಂಡವನ್ನು ಮಣಿಸಿತ್ತು. ಗೆಲುವಿಗೆ ಅಗತ್ಯವಿದ್ದ 186 ರನ್‌ಗಳನ್ನು 19.5 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ತಲುಪಿತ್ತು. ಡೇವಿಡ್ ಮಿಲ್ಲರ್ (ಅಜೇಯ 80, 41 ಎಸೆತ) ಮತ್ತು ಮನ್‌ದೀಪ್ ಸಿಂಗ್ (ಅಜೇಯ 77, 58 ಎಸೆತ) ಗೆಲುವಿಗೆ ಕಾರಣರಾಗಿದ್ದರು.

ಪ್ರತಿಕ್ರಿಯಿಸಿ (+)