ಶನಿವಾರ, ಮೇ 8, 2021
26 °C
ಭಾನುವಾರದ ಸಂಜೆಗೆ ಮೆರುಗು ನೀಡಿದ ಮೇವುಂಡಿ, ನಿಖಿಲ್

ತುಂಬಿದ ಸಭಾಂಗಣದಲ್ಲಿ ರಾಗ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಎರಡು ದಿನ ಮಳೆ ಬಿಡುವು ನೀಡಿದ ಕಾರಣ ಹುಬ್ಬಳ್ಳಿ ಬಿಸಿಯಾಗಿತ್ತಾದರೂ ಮಹಾರಾಷ್ಟ್ರ ಮಂಡಳದ ಸಭಾಂಗಣ ಭಾನುವಾರ ಸಂಜೆ ತಂಪಾಗಿತ್ತು. ಸುಮಾರು ಎರಡು ತಾಸು ನಡೆದ ಸಂಗೀತ ಕಾರ್ಯಕ್ರಮದಲ್ಲಿ ರಾಗದ ಮಳೆ ಸುರಿಸಿದ ಖ್ಯಾತ ಗಾಯಕ ಪಂ.ಜಯತೀರ್ಥ ಮೇವುಂಡಿ ಹಾಗೂ ಯುವ ಸಿತಾರ್ ವಾದಕ ನಿಖಿಲ್ ಜೋಶಿ ಪ್ರೇಕ್ಷಕರ ಹೃದಯ ಗೆದ್ದರು.ಇಂಡಿಯನ್ ಅಕಾಡೆಮಿ ಆಫ್ ಮ್ಯೂಸಿಕ್ ಸಂಸ್ಥೆಯ ವಾರ್ಷಿಕೋತ್ಸವದ ಅಂಗವಾಗಿ ನಡೆದ ಖ್ಯಾತ ಗಾಯಕ ನಾರಾಯಣ ರಾವ್ ಮಜುಮದಾರ್ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮೊದಲು ಸಿತಾರ್‌ನ ಝಲಕ್. ನಂತರ ಮೇವುಂಡಿ ಅವರ ಗಾಯನದ ಮೋಡಿ.ಸಿರಿಕಂಠದ ಮೂಲಕ ರಾಗಗಳನ್ನು ಪ್ರಸ್ತುತಪಡಿಸಿದ ಮೇವುಂಡಿ ಅವರ ಗಾಯನಕ್ಕೆ ತಾಳ ಹಾಕುವುದರ ನಡುವೆಯೇ ನಿರಂತರ ಚಪ್ಪಾಳೆ ತಟ್ಟದೇ ಇರಲು ಸಂಗೀತ ರಸಿಕರಿಗೆ  ಸಾಧ್ಯವಾಗಲಿಲ್ಲ.ರಾಗ ಮೇಘ್ ಮೂಲಕ ಕಛೇರಿ ಆರಂಭಿಸಿದ ಮೇವುಂಡಿ `ಬರಸನ್ ಲಾಗೇ...'ಗೆ ವಿವಿಧ ಆಯಾಮಗಳನ್ನು ನೀಡಿ ರಸಿಕರ ಮನ ಗೆದ್ದರು. ಮಳೆ-ಗುಡುಗಿನಂತೆ ಸ್ವರಗಳ ಏರಿಳಿತ, ಅದಕ್ಕೆ ವಿಶೇಶ ಹಾವ-ಭಾವ ಸೇರಿಸಿ ಸಭಾಂಗಣದಲ್ಲಿ ಮಿಂಚಿನ ಸಂಚಾರ ಮೂಡಿಸಿದರು. ಮೇವುಂಡಿ ಪ್ರಸ್ತುತಪಡಿಸಿದ ವಿಳಂಬಿತ್ ಗತ್ ಮಧುರವಾಗಿದ್ದರೆ, ಧೃತ್ ಗತ್ ಅತಿಮಧುರವಾಗಿತ್ತು. ತರಾನಾ ಪ್ರಸ್ತುತಗೊಂಡಾಗ ಸಭಾಂಗಣದಲ್ಲಿ ಮಳೆ ಸುರಿದ ಅನುಭವ.ಇದಾದ ನಂತರ ರಾಗ ಪುರಿಯಾ ಕಲ್ಯಾಣ್ ಪ್ರಸ್ತುತಗೊಂಡಾಗಲೂ ಪ್ರೇಕ್ಷಕರ ಆನಂದಕ್ಕೆ ಪಾರವಿರಲಿಲ್ಲ. ರಾಗ ಭೈರವಿ ಹಾಗೂ ಭಜನ್ ಕೂಡಾ ಗಮನ ಸೆಳೆಯಿತು. ಕೇಶವ ಜೋಶಿ ಅವರ ತಬಲಾ ವಾದನ, ಭರತ್ ಹೆಗಡೆ ಅವರ ಹಾರ್ಮೋನಿಯಂ ಮತ್ತು ವಿನಾಯಕ ಹೆಗಡೆ ಅವರ ಸಹ ಗಾಯನ ಕಛೇರಿಗೆ ವಿಶೇಷ ಮೆರುಗು ನೀಡಿತು.ಇದಕ್ಕೂ ಮೊದಲು ಸಿತಾರ್ ವಾದನ ನಡೆಸಿಕೊಟ್ಟ ನಿಖಿಲ್ ಜೋಶಿ ರಾಗ ಗಾವತಿ ಮೂಲಕ ಮನ ಗೆದ್ದರು. ಶ್ರೀವತ್ಸ ಕೌಲಗಿ ತಬಲಾ ಸಾಥ್ ನೀಡಿದರು.

ಪ್ರೇಕ್ಷಕರ ಲಗ್ಗೆ: ಸಿತಾರ್ ಮತ್ತು ಗಾಯನ ಕೇಳಲು ನಿರೀಕ್ಷೆಗೂ ಮೀರಿ ಪ್ರೇಕ್ಷಕರು ಸಭಾಂಗಣಕ್ಕೆ ಲಗ್ಗೆ ಇಟ್ಟ ಕಾರಣ ಸಂಘಟಕರು ಸ್ಥಳಾವಕಾಶ ಮಾಡಿಕೊಡಲು ಪರದಾಡಿದರು. ಹಾಕಿದ ಕುರ್ಚಿಗಳೆಲ್ಲ ಭರ್ತಿಯಾದಾಗ ಜಮ್ಕಾನಾ ಹಾಸಿ ಕೆಲವರನ್ನು ವೇದಿಕೆಯ ಮುಂಭಾಗದಲ್ಲಿ ಕೂರಿಸಲಾಯಿತು.ಮೇವುಂಡಿ ಅವರ ಗಾಯನ ಆರಂಭವಾಗುತ್ತಿದ್ದಂತೆ ಇನ್ನಷ್ಟು ಪ್ರೇಕ್ಷಕರು ಬಂದರು. ಅವರೆಲ್ಲ ಸಭಾಂಗಣದ ಹೊರಗೆ ಕುಳಿತು ಗಾಯನ `ಕೇಳಿದರು'.

ಶಾಸಕ ಅರವಿಂದ ಬೆಲ್ಲದ, ಬಾಬುರಾವ ಹಾನಗಲ್, ಡಾ.ಎಂ.ಎಂ.ಜೋಶಿ, ಸಿತಾರ್ ವಾದಕ ಶ್ರೀನಿವಾಸ ಜೋಶಿ, ಕಾರ್ಮಿಕ ಮುಖಂಡ ರಾಘವೇಂದ್ರ ಆಯಿ ಮತ್ತಿತರರು ಉಪಸ್ಥಿತರಿದ್ದರು. ಇಂಡಿಯನ್ ಅಕಾಡೆಮಿ ಆಫ್ ಮ್ಯೂಸಿಕ್‌ನ ಕಾರ್ಯದರ್ಶಿ ವಿನಯ ನಾಯಕ ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.