ತುತ್ತು ಕೂಳಿಗಾಗಿ ನಾಡ ತೊರೆದವರು

7

ತುತ್ತು ಕೂಳಿಗಾಗಿ ನಾಡ ತೊರೆದವರು

Published:
Updated:
ತುತ್ತು ಕೂಳಿಗಾಗಿ ನಾಡ ತೊರೆದವರು

ತುತ್ತಿನ ಚೀಲ ತುಂಬಿಸಿಕೊಳ್ಳಲು ಕೂಲಿ ಅರಸಿ ತಮ್ಮ ಹುಟ್ಟೂರನ್ನೇ ತೊರೆದು ಬೆಂಗಳೂರಿಗೆ ಆಗಮಿಸಿರುವವರು ಲಕ್ಷಾಂತರ ಮಂದಿ. ಅಂತಹವರಲ್ಲಿ ಉತ್ತರ ಪ್ರದೇಶದ ಆಗ್ರಾ ಸಮೀಪದ ವಿವಿಧ ಹಳ್ಳಿಗಳಿಂದ ಬಂದು ನೆಲೆಸಿರುವ `ಸಿಂಗಾನಿಯಾ' ಜನಸಮುದಾಯವೂ ಒಂದು. ಕುಲವೃತ್ತಿಯ ಕಾರಣದಿಂದ `ಸಿಂಗಾನಿಯಾ' ಎಂಬ ಹೆಸರು ಪಡೆದಿರುವ ಈ ಸಮುದಾಯದವರ  ಕೈಕೆಲಸ ನೋಡುಗರನ್ನು ಬೆರಗುಗೊಳಿಸುವಂಥದ್ದು.ಅವರ ಭಾಷೆಯಲ್ಲಿ ಹೇಳುವಂತೆ `ಸೀಟಾ', `ಬೂನ್ಸ್', `ರಸ್ಸಿ' ಮೊದಲಾದ ಕಚ್ಚಾ ಪದಾರ್ಥಗಳನ್ನು ಬಳಸಿ ತಯಾರಾಗುವ ಸ್ಟೂಲ್, ಟೇಬಲ್, ಕುರ್ಚಿಗಳು ತಮ್ಮ ವಿಶೇಷವಾದ ಆಕಾರಗಳಿಂದ ಗ್ರಾಹಕರನ್ನು ಬಹಳ ಥಟ್ಟನೆ ಆಕರ್ಷಿಸುತ್ತವೆ. ತಲೆತಲಾಂತರಗಳಿಂದಲೂ ಇದೇ ವೃತ್ತಿಯಲ್ಲಿ ತೊಡಗಿರುವ `ಸಿಂಗಾನಿಯಾ' ಸಮುದಾಯದ ಜನರು ಅನಕ್ಷರಸ್ಥರಾಗಿಯೇ ಮುಂದುವರಿದಿದ್ದು, ತಮ್ಮ ಮಕ್ಕಳನ್ನಾದರೂ ಶಿಕ್ಷಿತರಾಗಿಸಬೇಕು ಎಂಬ ಉದ್ದೇಶದಿಂದ ಸ್ವಂತ ಊರನ್ನು ತೊರೆದು, ದೇಶದ ಪ್ರಮುಖ ನಗರಗಳಲ್ಲಿ ವಾಸ್ತವ್ಯ ಹೂಡಿ ತಮ್ಮ ಕುಲದ ವೃತ್ತಿಯಲ್ಲಿ ನಿರತರಾಗಿದ್ದಾರೆ.ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಫುಟ್‌ಪಾತ್‌ನಲ್ಲಿಯೇ ಕೆಲಸ ನಿರ್ವಹಿಸುವ ಇವರದು ಬಾಡಿಗೆ ಮನೆಯೊಂದನ್ನೂ ಮಾಡಿಕೊಳ್ಳಲಾಗದ ದುಃಸ್ಥಿತಿ. ಫುಟ್‌ಪಾತ್‌ನಲ್ಲಿ ಕಟ್ಟಿಕೊಳ್ಳುವ ತಾತ್ಕಾಲಿಕ ಟೆಂಟೇ ಅವರಿಗೆ ಅಡುಗೆ ತಯಾರಿಸುವ, ಊಟ ಮಾಡುವ, ನಿದ್ರಿಸುವ ಕೋಣೆ.ತಮ್ಮ ಸ್ವಂತ ಊರಿನಲ್ಲಿ ತುಂಡು ಜಮೀನು ಹೊಂದಿದ್ದರೂ ಬೆಳೆ ಬೆಳೆಯಲು ನೀರಿಲ್ಲ. ಕೂಲಿ ಮಾಡಲು ಹೆಚ್ಚಿನ ಕಾರ್ಖಾನೆಗಳಿಲ್ಲ. ಇರುವ ಕಾರ್ಖಾನೆಗಳಲ್ಲಿ ಉದ್ಯೋಗ ಸಿಗುವುದೂ ಬಲು ಕಷ್ಟ. ಅಷ್ಟೇನೂ ಅಭಿವೃದ್ಧಿ ಕಾಣದಿರುವ ನಮ್ಮ ರಾಜ್ಯದಲ್ಲಿ ಇಂತಹ ವಸ್ತುಗಳನ್ನು ಕೊಳ್ಳಲು ಆಸಕ್ತಿ ತೋರುವವರೂ ಕಡಿಮೆ. ನಮ್ಮ ಕುಲದ ವೃತ್ತಿಗೆ ಎಲ್ಲಿ ಮಾನ್ಯತೆ ದೊರೆಯುತ್ತದೋ ಅಲ್ಲಿ ಕಾರ್ಯನಿರ್ವಹಿಸುವುದು ಅನಿವಾರ್ಯ ಎನ್ನುವ ಇವರು ಮಕ್ಕಳು ಮತ್ತು ಕುಟುಂಬದ ಭವಿಷ್ಯಕ್ಕಾಗಿ ಊರನ್ನು ತೊರೆದಾದರೂ ದುಡಿಯಲೇಬೇಕಿದೆ..ನಗರದ ಫುಟ್‌ಪಾತ್‌ಗಳಲ್ಲಿ ವಾಸಿಸುವ ಇವರ ಜೀವನ ನಿರ್ವಹಣೆಯೇ ಕಷ್ಟವಾಗಿರುವಾಗ ಕುಟುಂಬಗಳನ್ನೂ ಇಲ್ಲಿಗೇ ಕರೆತರುವುದು ಸಾಧ್ಯವಿರದ ಮಾತಾಗಿದೆ. ತಮ್ಮ ಕುಟುಂಬ, ಬಂಧುಬಳಗದವರನ್ನು ನೋಡಬೇಕೆಂದರೆ ಎರಡು ಮೂರು ತಿಂಗಳಿಗೆ ಮಾತ್ರ ಊರಿಗೆ ಹೋಗಲು ಸಾಧ್ಯ.`ಸೀಟಾ', `ಬೂನ್ಸ್', `ರಸ್ಸಿ' ಬಳಸಿ ಒಂದು ಸ್ಟೂಲ್, ಟೇಬಲ್ ಸಿದ್ಧಪಡಿಸಿಕೊಡಲು ದಿನವಿಡೀ ಶ್ರಮಿಸುತ್ತಾರೆ. ಕುರ್ಚಿಯ ಪೂರ್ಣ ಆಕಾರವನ್ನು ನೋಡಬೇಕಾದಲ್ಲಿ ಎರಡು ದಿನ ಬೇಕು. ಆದರೆ ಸಿಗುವ ಲಾಭ ಮಾತ್ರ ಕಡಿಮೆ. ಕನ್ನಡ ಮಾತನಾಡಲು ಬರದ ಇವರೊಂದಿಗೆ ಬೆಲೆಯಲ್ಲಿ ಚೌಕಾಸಿ ಮಾಡುವ ಜನರೇ ಹೆಚ್ಚು. ದುಡಿಮೆಯಿಂದ ಹೊಟ್ಟೆ ತುಂಬಿ, ಕುಟುಂಬಕ್ಕೆ ಒಂದಿಷ್ಟು ಉಳಿದರೆ ಸಾಕು ಎನ್ನುವ ಮನೋಭಾವದ ಇವರಿಗೆ ಅಪರೂಪಕ್ಕೆ ಗ್ರಾಹಕರೊಬ್ಬರು ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ 10-20 ರೂ. ಹೆಚ್ಚಿಗೆ ನೀಡಿದರಂತೂ ಸಂತೋಷಕ್ಕೆ ಪಾರವೇ ಇಲ್ಲ.ಫುಟ್‌ಪಾತ್‌ಗಳಲ್ಲಿ ಕಾರ್ಯನಿರ್ವಹಿಸುವ ಇವರು ಪೊಲೀಸ್, ಕಾರ್ಪೊರೇಶನ್‌ನವರ ಕಿರಿಕಿರಿಗಳಿಂದ ತಪ್ಪಿಸಿಕೊಳ್ಳಬೇಕಾದಲ್ಲಿ ಲಂಚ ನೀಡುವುದು ಕಡ್ಡಾಯ. ಇಲ್ಲದಿದ್ದಲ್ಲಿ ಎತ್ತಂಗಡಿ ಗ್ಯಾರಂಟಿ.ಒಮ್ಮಮ್ಮೆ ದಿನವಿಡೀ ಫುಟ್‌ಪಾತ್‌ನಲ್ಲಿ ಕಾದರೂ ವ್ಯಾಪಾರವಾಗದಿದ್ದಾಗ ಆ ದಿನದ ಊಟವನ್ನು ಹೊಂದಿಸಲು ತಾವು ತಯಾರಿಸಿರುವ ಸ್ಟೂಲ್, ಟೇಬಲ್, ಕುರ್ಚಿಗಳನ್ನು ಹೆಗಲ ಮೇಲೆ ಹೊತ್ತು ಬೀದಿಬೀದಿಗಳಲ್ಲಿ ಗಂಟಲು ಶೋಷಣೆ ಮಾಡಿಕೊಂಡು ಮಾರಾಟ ಮಾಡುವುದು ತಪ್ಪಿದ್ದಲ್ಲ.ಹಣ ಸಂಪಾದನೆಗಾಗಿ ಅಡ್ಡದಾರಿಗಳನ್ನು ಹಿಡಿಯುವವರ ಮುಂದೆ ತಮ್ಮ ಹಾಗೂ ಕುಟುಂಬದ ತುತ್ತಿನ ಚೀಲ ತುಂಬಿಕೊಳ್ಳಲು ಹುಟ್ಟೂರನ್ನೇ ತೊರೆದು, ಕೆಲಸಕ್ಕೆ ಬೇಕಾದ ಕಚ್ಚಾ ಪದಾರ್ಥಗಳನ್ನು ನಮ್ಮ ಊರಿನಿಂದಲೇ ಹೊತ್ತು ತಂದು ದೇಶದ ಬೇರೆ ಬೇರೆ ಭಾಗಗಳಲ್ಲಿ ಸ್ವಾವಲಂಬಿಗಳಾಗಿ ದುಡಿದು ಬದುಕುತ್ತಿರುವ `ಸಿಂಗಾನಿಯಾ' ಸಮುದಾಯದವರ ಪರಿಶ್ರಮ ಮಾದರಿಯಂತೆ ಕಾಣುತ್ತದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry