ಗುರುವಾರ , ನವೆಂಬರ್ 21, 2019
26 °C

ತುಮಕೂರಿಗೆ ಸೇಬು ಓಕೆ

Published:
Updated:
ತುಮಕೂರಿಗೆ ಸೇಬು ಓಕೆ

ತುಮಕೂರು: ಜಿಲ್ಲೆಯಲ್ಲಿ ಸೇಬು ಬೆಳೆಯಲು ಅವಕಾಶವಿದ್ದು, ಪ್ರಾಯೋಗಿಕವಾಗಿ ಬೆಳೆಯಬಹುದು ಎಂದು ಕೃಷಿ ವಿಜ್ಞಾನಿ ಡಾ.ಚಿರಂಜಿತ್ ಪರ್ಮಾರ್ ಹೇಳಿದರು.ತಾಲ್ಲೂಕಿನ ನೇರಳಾಪುರದ ಕೃಷಿಕ ಗಂಗಾಧರಮೂರ್ತಿ ಅವರು ತೋಟದಲ್ಲಿ ಬೆಳೆದಿರುವ ಸೇಬು ಗಿಡಗಳನ್ನು ಬುಧವಾರ ಪರಿಶೀಲಿಸಿದ ನಂತರ ರೈತರ ಕೆಲ ಪ್ರಶ್ನೆಗಳಿಗೆ ಉತ್ತರಿಸಿ, ಸದ್ಯಕ್ಕೆ ದೊಡ್ಡ ಪ್ರಮಾಣದಲ್ಲಿ ಸೇಬು ಕೃಷಿ ಬೇಡ. ಹಲ ವರ್ಷಗಳ ಕಾಲ ಪ್ರಾಯೋಗಿಕವಾಗಿ ಬೆಳೆದು ಪರೀಕ್ಷೆ ಮಾಡಬೇಕು ಎಂದು ತಿಳಿಸಿದರು.ಈ ಸಂದರ್ಭ ಕೆಲವು ರೈತರು ಸೇಬು ಸಸಿಗಳಿಗೆ ಬೇಡಿಕೆ ಇಟ್ಟರು. ಹಿಮಾಚಲ ಪ್ರದೇಶದಿಂದ ಸೇಬು ಸಸಿ ಬೆಳೆಸಲು ಅಂಗಾಂಶಗಳನ್ನು ಕಳುಹಿಸಿಕೊಡುವುದಾಗಿ ಹೇಳಿದ ಪರ್ಮಾರ್ ಈಗಾಗಲೇ ಕೇರಳ, ಕೊಡಗು, ಮಂಗಳೂರು ಮುಂತಾದ ಕಡೆ ಇಂತಹ ಪ್ರಯತ್ನಗಳು ನಡೆಯುತ್ತಿವೆ.ಕೆಲವು ರೈತರು ಇಂಡೋನೇಷಿಯಾಗೆ ತೆರಳಿ ಅಲ್ಲಿ ಒಣ ಪ್ರದೇಶದಲ್ಲಿ ಸೇಬು ಬೆಳೆದಿರುವುದನ್ನು ವೀಕ್ಷಿಸಿ ಬಂದರೆ, ಇಲ್ಲಿ ಬೆಳೆಯಲು ಧೈರ್ಯ ಬರಬಹುದು ಎಂದು ಸಲಹೆ ನೀಡಿದರು.ಹಿಮಾಚಲ ಪ್ರದೇಶದಲ್ಲಿ ಹೆಕ್ಟೇರ್‌ಗೆ ವಾರ್ಷಿಕ 7 ಟನ್ ಸೇಬು ಬೆಳೆ ಸಿಗುತ್ತಿದೆ. ಇಂಡೋನೇಷ್ಯಾದ ಬಾಟೂ ದ್ವೀಪದಲ್ಲಿ ವಾರ್ಷಿಕ 65 ಟನ್ ಬೆಳೆ ಸಿಗುತ್ತಿದೆ. ಬಾಟೂನ ವಾತಾವರಣ ದಕ್ಷಿಣ ಕರ್ನಾಟಕದಲ್ಲಿ ಕಂಡು ಬಂದಿದ್ದು, ತುಮಕೂರಿನಲ್ಲಿ ರೈತರು ಸೇಬು ಬೆಳೆ ಬೆಳೆಯಬಹುದು ಎಂದು ವಿವರಿಸಿದರು.ತೋಟಗಾರಿಕೆ ಇಲಾಖೆ ಇಲ್ಲಿನ ಹವಾಗುಣಕ್ಕೆ ಹೊಂದುವಂಥ ಸೇಬು ತಳಿ ಬಗ್ಗೆ ಸಂಶೋಧನೆ ನಡೆಸಬೇಕು. ಬೆಳೆ ಬೆಳೆಯಲು ಅಗತ್ಯ ಸಲಹೆ-ಸೂಚನೆ ನೀಡಬೇಕು ಎಂದು ಜಿಲ್ಲೆಯ ಪ್ರಗತಿಪರ ರೈತರು ಆಗ್ರಹಿಸಿದ್ದಾರೆ.

ಪ್ರತಿಕ್ರಿಯಿಸಿ (+)