ಶುಕ್ರವಾರ, ಫೆಬ್ರವರಿ 26, 2021
30 °C
ನಗರ ಸಂಚಾರ

ತುಮಕೂರಿನಲ್ಲಿ ತಪ್ಪದ ಪ್ಲಾಸ್ಟಿಕ್ ಕಿರಿಕಿರಿ

ಪ್ರಜಾವಾಣಿ ವಾರ್ತೆ/ ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

ತುಮಕೂರಿನಲ್ಲಿ ತಪ್ಪದ ಪ್ಲಾಸ್ಟಿಕ್ ಕಿರಿಕಿರಿ

ತುಮಕೂರು: ಸರ್ಕಾರ 40 ಮೈಕ್ರಾನ್‌ಗಿಂತ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಈ ಆದೇಶ ರಾಜ್ಯ­ದಲ್ಲಿ ಜಾರಿಗೊಂಡು ವರ್ಷಗಳು ಗತಿಸಿದರೂ; ನಗರದಲ್ಲಿ ಯಾವ ಪರಿಣಾಮವನ್ನು ಬೀರಿಲ್ಲ. ಸರ್ಕಾರದ ನಿರ್ಬಂಧ ಕೇವಲ ಕಡತಗಳಿಗೆ ಮತ್ತು ಅಧಿಸೂಚನೆಗಳಿಗೆ ಮಾತ್ರ ಸೀಮಿತ­ವಾಗಿದೆ. ನಗರದ ತುಂಬ ಪ್ಲಾಸ್ಟಿಕ್ ಚೀಲಗಳು, ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ಹಾಳೆಗಳು ಎಲ್ಲೆಂದರಲ್ಲಿ ಗೋಚರಿಸುತ್ತವೆ.ಹೋಟೆಲ್, ಟೀ ಸ್ಟಾಲ್, ಬಾರ್, ಬೇಕರಿ, ತರಕಾರಿ ಮಾರುಕಟ್ಟೆ, ದಿನಸಿ ಅಂಗಡಿ, ಹಣ್ಣಿನ ಅಂಗಡಿ ಸೇರಿದಂತೆ ಎಲ್ಲೆಡೆ ಕಳಪೆ ಪ್ಲಾಸ್ಟಿಕ್ ಬಳಕೆಯಾಗುತ್ತಿದೆ. ಈಗಾಗಲೇ ಕಸದಿಂದ ಕಂಗೆಟ್ಟಿ­ರುವ ನಗರದ ಜನತೆಗೆ ಪ್ಲಾಸ್ಟಿಕ್‌ನದ್ದು ಬಗೆಹರಿಯದ ಸಮಸ್ಯೆ. ಕಸವೇ ಸರಿಯಾಗಿ ವಿಲೇವಾರಿಯಾಗುತ್ತಿಲ್ಲ. ವೈಜ್ಞಾನಿಕವಾಗಿ ವಿಂಗಡಣೆಯೂ ಆಗುತ್ತಿಲ್ಲ. ಇನ್ನೂ ಇದರ ಜತೆ ಸೇರುವ ಪ್ಲಾಸ್ಟಿಕ್‌ಗೂ ನಗರಪಾಲಿಕೆಯೇ ಬೆಂಕಿ ಹಾಕಿಸುತ್ತಿದೆ.ಇದರಿಂದ ಪರಿಸರ ಹಾಳಾಗುವ ಜತೆ, ಜನರ ಆರೋಗ್ಯಕ್ಕೂ ಮಾರಕ. ಸುಡುವ ಪ್ಲಾಸ್ಟಿಕ್‌ನ ದುರ್ವಾಸನೆ ಇಡೀ ಪ್ರದೇಶಕ್ಕೆ ವಿಸ್ತರಿಸಿ ಆ ಭಾಗದ ಜನರ ಆರೋಗ್ಯಕ್ಕೆ ಹಾನಿಕಾರಕವಾಗಿ ಪರಿ­ಣಮಿಸುತ್ತಿದೆ. ಪ್ಲಾಸ್ಟಿಕ್‌ ತಯಾರಾಗುವ ಮತ್ತು ಮಾರಾಟವಾಗುವ ಜಾಗ ಗೊತ್ತಿದ್ದರೂ; ಸಂಬಂಧಿಸಿದ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಇನ್ನೂ ಪಾಲಿಕೆ ನೇತೃತ್ವ­ದಲ್ಲೇ ಬೆಂಕಿ ಹಾಕಿ ಪರಿಸರ ಹಾನಿ ಮಾಡ­ಲಾಗುತ್ತಿದೆ.ಸರ್ಕಾರ ಪ್ಲಾಸ್ಟಿಕ್‌ ನಿಷೇಧ ಆದೇಶ ಹೊರಡಿ­ಸಿದ ಆರಂಭದ ದಿನದಲ್ಲಿ ಆರಂಭ­ಶೂರತ್ವ ಮೆರೆದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ನಗರ­ಪಾಲಿಕೆಯ ಪರಿಸರ ಎಂಜಿನಿಯರ್ ಮತ್ತು ಸಿಬ್ಬಂದಿ, ನಗರದಲ್ಲಿ 40 ಮೈಕ್ರಾನ್‌ಗಿಂತ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿದ್ದರು. ಅಂಗಡಿ ಮಾಲೀಕರಿಗೆ ದಂಡವನ್ನು ವಿಧಿಸಿದರು.

ಆದರೆ ದಿನ ಕಳೆದಂತೆ ಎಲ್ಲವೂ ಮಾಮೂಲಿ­ಯಾಗಿದೆ. ಪ್ಲಾಸ್ಟಿಕ್ ಕವರ್‌ಗಳ ಮಾರಾಟ ಎಗ್ಗಿಲ್ಲದೆ ಮುಂದುವರಿದಿದೆ. ಕಾನೂನು ಪಾಲಕರ ಕಣ್ಣೆದುರೇ ರಾಜಾರೋಷವಾಗಿ ನಡೆಯುತ್ತಿದ್ದರೂ; ಯಾರೊಬ್ಬರೂ ಪ್ರಶ್ನಿಸಲು ಮುಂದಾಗಲ್ಲ.ಕಾಗದಕ್ಕೆ ಸೀಮಿತ

ದಶಕದ ಹಿಂದೆಯೇ ಜಿಲ್ಲಾಡಳಿತ ಪ್ಲಾಸ್ಟಿಕ್‌ ನಿಷೇಧಿಸಿದೆ. ಆದರೂ ನಗರ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಕಳಪೆ ಗುಣಮಟ್ಟದ ಪ್ಲಾಸ್ಟಿಕ್‌ ವ್ಯಾಪಾರ ಭರ್ಜರಿಯಾಗಿದೆ. ಚಟುವಟಿಕೆ ತೋರಿಸಿ­ಕೊಳ್ಳಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಪಾಲಿಕೆಯ ಪರಿಸರ ಎಂಜಿನಿಯರ್‌ಗಳು ಮಂಡಿ­ಪೇಟೆಯ ಕೆಲ ಅಂಗಡಿಗಳ ಮೇಲೆ ದಾಳಿ ನಡೆಸಿ, ಸುದ್ದಿಯಾಗುವಂತೆ ಮಾಡುತ್ತಾರೆ ವಿನಾಃ, ಪ್ರಾಮಾಣಿಕ ಕಾಳಜಿಯಿಂದ ಕಳಪೆ ದರ್ಜೆಯ ಪ್ಲಾಸ್ಟಿಕ್‌ ನಿಯಂತ್ರಣಕ್ಕೆ ಮುಂದಾಗುತ್ತಿಲ್ಲ ಎಂದು ಪರಿಸರವಾದಿ ಬಿ.ವಿ.ಗುಂಡಪ್ಪ ಬೇಸರ ವ್ಯಕ್ತಪಡಿಸುತ್ತಾರೆ.ರಾಜ್ಯದಲ್ಲಿ ಮಂಗಳೂರಿನಲ್ಲಿ ಮಾತ್ರ 40 ಎಂ.ಎಂ.ಗೂ ಅಧಿಕ ದಪ್ಪದ ಕ್ಯಾರಿ ಬ್ಯಾಗ್‌ ಬಳಕೆಯಾಗುತ್ತದೆ. ಇದು ಕೇರಳದಲ್ಲೂ ಕರಾರುವಕ್ಕಾಗಿ ಪಾಲನೆಯಾಗುತ್ತದೆ. ಉಳಿದೆಡೆ ಅದೇ ರಾಗ ಅದೇ ಹಾಡು. ಗ್ರಾಮೀಣ ಪ್ರದೇಶದಲ್ಲಿ ಸಂಗ್ರಹಿಸುವ ಹಳೆ ಪ್ಲಾಸ್ಟಿಕ್‌ ಸಾಮಗ್ರಿಗಳನ್ನು ನಗರದ ಮಂಡಿಪೇಟೆ ಸುತ್ತವಿರುವ ಕೆಲ ಫ್ಯಾಕ್ಟರಿಗಳು ಕರಗಿಸಿ, ನಿಷೇಧಿತ ಬಣ್ಣ ಬಳಸಿ ಕೆಳ ದರ್ಜೆಯ ಪ್ಲಾಸ್ಟಿಕ್‌ ತಯಾರಿಸಿ ಮಾರುತ್ತಿವೆ.ಇದು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಪರಿಸರಕ್ಕೆ ಸಾಕಷ್ಟು ಹಾನಿ ಮಾಡುತ್ತಿದೆ. ಗಾಳಿ–ಬಿಸಿಲಿಗೆ ಈ ಪ್ಲಾಸ್ಟಿಕ್‌ನ ಬಣ್ಣ ಕರಗಿ ಕುಡಿಯುವ ನೀರು ಸೇರಿ ಮನುಷ್ಯನ ದೇಹ ಹೊಕ್ಕು ಅಪಾರ ಹಾನಿ ಮಾಡುತ್ತಿದೆ ಎಂದು ಪ್ಲಾಸ್ಟಿಕ್‌ನಿಂದಾಗುವ ಅಪಾಯಗಳನ್ನು ‘ಪ್ರಜಾವಾಣಿ’ಗೆ ವಿವರಿಸಿದರು. ಇದೇ ಸಂದರ್ಭ ಗುಣಮಟ್ಟದ ಪ್ಲಾಸ್ಟಿಕ್‌ ಬಳಸುವ ಜತೆ ಮರು ಬಳಸುವಂತೆ ಸಲಹೆ ನೀಡಿದರು.

ಸಾಮೂಹಿಕ ಡೆಂಗೆ: ಆತಂಕ

ಮಳೆಗಾಲ ಆರಂಭದೊಂದಿಗೆ ಎಲ್ಲೆಂದರಲ್ಲಿ ಬಿಸಾಡಿರುವ ಈ ಪ್ಲಾಸ್ಟಿಕ್‌ ಲೋಟ, ತೊಟ್ಟೆಗಳಲ್ಲಿ ನೀರು ನಿಂತು ಮಾರಕ ಡೆಂಗೆ ಹರಡುವ ಸೊಳ್ಳೆಗಳ ಉತ್ಪತ್ತಿಗೂ ಕಾರಣವಾಗುತ್ತದೆ. ಕಳೆದ ವಾರ ಮಳೆ ಬಿದ್ದ ಒಂದೆರಡು ದಿನಗಳಲ್ಲಿ ನಗರದಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿದ್ದರ ಹಿಂದೆಯೂ ಈ ಪ್ಲಾಸ್ಟಿಕ್‌ ಕಸ ಮತ್ತು ತ್ಯಾಜ್ಯ ಕಾರಣವಾಗಿದೆ. ಮಳೆಗಾಲ ಸನಿಹದಲ್ಲಿದ್ದರೂ ಪಾಲಿಕೆ ನಿದ್ದೆ ಮಾಡುತ್ತಿದೆ. ಹೀಗಾಗಿ ಈ ವರ್ಷ ನಗರದಲ್ಲಿ ಡೆಂಗೆ, ಚಿಕುನ್‌ಗುನ್ಯ ಜ್ವರ ಸಾಮೂಹಿಕವಾಗಿ ಹರಡುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ಈಚೆಗಷ್ಟೇ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದ ಆರೋಗ್ಯ ಸಚಿವ ಖಾದರ್‌ ಕೂಡ ನಗರದಲ್ಲಿ ತ್ಯಾಜ್ಯ ನಿರ್ವಹಣೆ ಸರಿಯಾಗಿಲ್ಲದ ಕಡೆ ಬೊಟ್ಟು ಮಾಡಿ ತೋರಿಸಿದ್ದಾರೆ. ಸಾಂಕ್ರಾಮಿಕ ರೋಗ ಹರಡುವ ಭೀತಿಯಿದ್ದು  ಪಾಲಿಕೆ ತುರ್ತು ಗಮನ ಹರಿಸಬೇಕು ಎಂದು ಸೂಚಿಸಿದ್ದರು. ಆದರೂ ಪಾಲಿಕೆ ಮೈಕೊಡವಿ ಎದ್ದಂತೆ ಕಾಣುತ್ತಿಲ್ಲ. ಈ ಸಂಬಂಧ ಇಲ್ಲಿಯವರೆಗೂ ಕನಿಷ್ಠ ಅಧಿಕಾರಿಗಳ ಸಭೆಯೂ ನಡೆದಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.