ತುಮಕೂರು ಅಭಿವೃದ್ಧಿಗೆ ‘ಮಾಸ್ಟರ್‌ ಪ್ಲಾನ್‌’

7
ನಗರಾಭಿವೃದ್ಧಿ ಸಚಿವ ವಿನಯಕುಮಾರ್‌ ಸೊರಕೆ ಸೂಚನೆ

ತುಮಕೂರು ಅಭಿವೃದ್ಧಿಗೆ ‘ಮಾಸ್ಟರ್‌ ಪ್ಲಾನ್‌’

Published:
Updated:

ತುಮಕೂರು: ನಗರದ ಅಭಿವೃದ್ಧಿಗೆ ‘ಮಾಸ್ಟರ್‌ ಪ್ಲಾನ್‌’ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದರೆ ಅಗತ್ಯವಿರುವ ಅನುದಾನ ನೀಡಲು ಸಿದ್ಧ ಎಂದು ನಗರಾಭಿವೃದ್ಧಿ ಇಲಾಖೆ ಸಚಿವ ವಿನಯ­ಕುಮಾರ್‌ ಸೊರಕೆ ಭರವಸೆ ನೀಡಿದರು.ನಗರಪಾಲಿಕೆ ಸಭಾಂಗಣದಲ್ಲಿ ಬುಧವಾರ ನಗರಪಾಲಿಕೆ ಸದಸ್ಯರ ಜೊತೆ ನಗರಾಭಿವೃದ್ಧಿ ಕುರಿತು ಚರ್ಚೆ ನಡೆಸಿದ ಸಭೆಯಲ್ಲಿ ಮಾತ­ನಾಡಿ­ದರು. ನಗರಕ್ಕೆ ಅಗತ್ಯವಿರುವ ರಸ್ತೆ, ಕುಡಿಯುವ ನೀರು, ಒಳ ಚರಂಡಿ, ಉದ್ಯಾನ ಅಭಿವೃದ್ಧಿ ಬಗ್ಗೆ ಸಮಗ್ರ ವರದಿ ತಯಾರಿಸಿ, ಕ್ರಿಯಾ ಯೋಜನೆ ಸಲ್ಲಿಸುವಂತೆ ಸೂಚಿಸಿದರು.ಬೆಂಗಳೂರಿನಲ್ಲಿ ಜನದಟ್ಟಣೆ ಹೆಚ್ಚುತ್ತಿದ್ದು, 2ನೇ ಹಂತದ ನಗರಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕಾಗಿದೆ. ನಗರಾಭಿವೃದ್ಧಿಗೆ ಕೇಂದ್ರ ಸರ್ಕಾರ ಶೇ 80ರಷ್ಟು ಅನುದಾನ ನೀಡಲು ಸಿದ್ಧವಿದೆ. ಇದಕ್ಕೆ ಕೇಂದ್ರ ನಗರಾಭಿವೃದ್ಧಿ ಸಚಿ­ವರು ಒಪ್ಪಿಗೆ ನೀಡಿದ್ದಾರೆ. ಈ ದೃಷ್ಟಿಯಿಂದ ನಗರ­ಗಳ ಅಭಿವೃದ್ಧಿಗೆ ಕ್ರಿಯಾಯೋಜನೆ ತಯಾರಿಸು­ವಂತೆ ಸೂಚಿಸಲಾಗಿದೆ ಎಂದು ಹೇಳಿದರು.ಗ್ರಾ.ಪಂ. ಮಟ್ಟದ ಗ್ರಾಮ ಸಭೆಗಳ ಮಾದರಿಯಲ್ಲಿ ವಾರ್ಡ್‌ ಸಭೆಗಳನ್ನು ನಡೆಸಿ, ನಾಗರಿಕರ ಸಮಸ್ಯೆಗಳನ್ನು ಅರಿಯಲು ಅವಕಾಶ ನೀಡಲಾಗುತ್ತಿದೆ. ಆಡಳಿತ ಮತ್ತು ಅಭಿವೃದ್ಧಿ ಕಾರ್ಯದಲ್ಲಿ ನಾಗರಿಕರು ಸಹಕರಿಸಲು ಇದ­ರಿಂದ ಅನುಕೂಲವಾಗುತ್ತದೆ. ತುಮಕೂರು ನಗರ­ಪಾಲಿಕೆ ಆಗಿರುವುದರಿಂದ ಅಭಿವೃದ್ಧಿಗೆ ರೂ. 100 ಕೋಟಿ ಅನುದಾನ ದೊರೆಯುತ್ತದೆ ಎಂದು ತಿಳಿಸಿದರು.ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ನಗರದ ಅಮಾನಿಕೆರೆ ಅಭಿವೃದ್ಧಿ, ರಸ್ತೆ ಕಾಮ­ಗಾರಿಗಳಲ್ಲಿ ಅವ್ಯವಹಾರ ನಡೆದಿದೆ. ಅಮಾನಿಕೆರೆ ಮಣ್ಣು ತೆಗೆಯಲು, ಸಾಗಿಸಲು ಸಹ ದುಪ್ಪಟ್ಟು ಹಣ ನೀಡಲಾಗಿದೆ. ಅಭಿವೃದ್ಧಿಗಿಂತ ಹೆಚ್ಚು ಹಣ ದುರುಪಯೋಗವಾಗಿದೆ. ಈ ಬಗ್ಗೆ ಇಲಾಖೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.ಪಾಲಿಕೆ ಸದಸ್ಯ ಹನುಮಂತರಾಯಪ್ಪ ಮಾತ­ನಾಡಿ, ನಗರದ ಕಸ ಹಾಕಲು ಸೂಕ್ತ ಸ್ಥಳವೇ ಇಲ್ಲ. ಪಾಲಿಕೆ ಅಧಿಕಾರಿಗಳು ಎಲ್ಲೆಂದರಲ್ಲಿ ಕಸ ಹಾಕುತ್ತಿದ್ದಾರೆ. ಇದರಿಂದ ನಗರದ ಸ್ವಚ್ಛತೆಗೆ ಮಾರಕ­ವಾಗಿದೆ. ಅಲ್ಲದೆ ನಗರದ ಕೊಳೆಗೇರಿ­ಗಳಲ್ಲಿ ವಾಸ ಮಾಡುತ್ತಿರುವರಿಗೆ ಹಕ್ಕುಪತ್ರ ನೀಡಿ, ಕೊಳೆಗೇರಿಗಳನ್ನು ಅಭಿವೃದ್ಧಿ ಮಾಡ­ಬೇಕೆಂದು ಆಗ್ರಹಿಸಿದರು.ಸದಸ್ಯ ನಯಾಜ್‌ಅಹ್ಮದ್‌, ಕಳೆದ 20 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರು, ವಾಲ್ವ್‌­ಮನ್‌­ಗಳನ್ನು ಕಾನೂನು ತಿದ್ದುಪಡಿ ಮೂಲಕ ಕಾಯಂ ಮಾಡಲು ಕ್ರಮಕೈಗೊಳ್ಳಬೇಕು ಎಂದು ಕೋರಿದರು.ಸದಸ್ಯರ ಮನವಿ: ಪೂರ್ಣಾವಧಿಗೆ ತಮ್ಮನ್ನು ನಗರ ಪಾಲಿಕೆ ಸದಸ್ಯರನ್ನಾಗಿ ಮುಂದುವರಿಸ­ಬೇಕು. ಸರ್ಕಾರ ಕಾನೂನು ತಿದ್ದುಪಡಿ ಮಾಡುವ ಮೂಲಕ ಈಗಿರುವ ಜನಪ್ರತಿನಿಧಿ­ಗಳು ಅವಧಿ ಪೂರೈಸಲು ಅವಕಾಶ ನೀಡ­ಬೇ­ಕೆಂದು ಸಚಿವರಿಗೆ ಸದಸ್ಯರು ಮನವಿ ಸಲ್ಲಿಸಿದರು.ಕಾಂಗ್ರೆಸ್‌ ಸಭೆಯಾಯ್ತು...

ನಗರದ ಅಭಿವೃದ್ಧಿ ಬಗ್ಗೆ ಪಾಲಿಕೆ ಸದಸ್ಯ­ರೊಂದಿಗೆ ಚರ್ಚಿಸಲು ನಗರ ಪಾಲಿಕೆಯಲ್ಲಿ ನಗರಾ­ಭಿವೃದ್ಧಿ ಸಚಿವ ವಿನಯಕುಮಾರ್‌ ಸೊರಕೆ ಕರದಿದ್ದ ಸಭೆ ಕಾಂಗ್ರೆಸ್‌ ಮುಖಂಡರ ಕಾರ್ಯಕ್ರಮವಾಗಿ ಮಾರ್ಪಟ್ಟಿತ್ತು. ಶಾಸಕ ಡಾ.ರಫೀಕ್‌ ಅಹ್ಮದ್‌ ಭಾಗವಹಿಸುವ ಸರ್ಕಾರದ ಎಲ್ಲ ಕಾರ್ಯಕ್ರಮಗಳಲ್ಲಿ ಅಳಿಯ­ನೊಂದಿಗೆ ಮಾವ ವೇದಿಕೆ ಹತ್ತುವ ಪ್ರಸಂಗ ಇಲ್ಲಿಯೂ ಮುಂದುವರಿದಿತ್ತು. ಆಯುಕ್ತ ಅಷದ್‌ ಷರೀಫ್ ಅವರು ಪಕ್ಕದಲ್ಲಿ ಕೈಕಟ್ಟಿಕೊಂಡು ನಿಲ್ಲುವಂತಾಗಿತ್ತು. ಮೇಯರ್‌ ಗೀತಾ ಅವರ ಪತಿ ಸೇರಿದಂತೆ ನಗರ ಪಾಲಿಕೆ ಸದಸ್ಯರ ‘ಪತಿ ದೇವರು’ಗಳು ಸಹ ಭಾಗವಹಿಸಿ­ದ್ದರು. ಪತ್ನಿಯರ ಬದಲಿಗೆ  ಅವರ ಗಂಡಂದಿರು ಆಸೀನರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry