ತುಮಕೂರು ಜಿಲ್ಲೆಯಲ್ಲಿ ವಿದೇಶಿ ದೈತ್ಯ ಕಳೆ ಪತ್ತೆ

7

ತುಮಕೂರು ಜಿಲ್ಲೆಯಲ್ಲಿ ವಿದೇಶಿ ದೈತ್ಯ ಕಳೆ ಪತ್ತೆ

Published:
Updated:
ತುಮಕೂರು ಜಿಲ್ಲೆಯಲ್ಲಿ ವಿದೇಶಿ ದೈತ್ಯ ಕಳೆ ಪತ್ತೆ

ತುರುವೇಕೆರೆ: ದೇಶದಲ್ಲೇ ಹೊಸದೆನಿಸಿರುವ ವಿದೇಶಿ ದೈತ್ಯ ಕಳೆಯೊಂದನ್ನು (ಸಸ್ಯ ಶಾಸ್ತ್ರೀಯ ಹೆಸರು- PERENNIAL RAGWEEDASTERACEAE FAMILY) ಬೆಂಗಳೂರು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ತಾಲ್ಲೂಕಿನ ಮುನಿಯೂರು ಸಮೀಪ ಪತ್ತೆ ಹಚ್ಚಿದ್ದಾರೆ.ಉತ್ತರ ಅಮೆರಿಕ ಮೂಲದ ಈ ದೈತ್ಯ ಕಳೆ ದವನದ ಮಾದರಿಯಲ್ಲಿದ್ದು, ತಾಲ್ಲೂಕಿನ ಮುನಿಯೂರು, ಎಂ.ಬೇವಿನಹಳ್ಳಿ, ಶ್ರೀರಾಮಪುರ ಸುತ್ತಮುತ್ತ ನೂರು ಎಕರೆಗೂ ಹೆಚ್ಚು ಪ್ರದೇಶದಲ್ಲಿ ತೀವ್ರ ಗತಿಯಲ್ಲಿ ಹಬ್ಬುತ್ತಿದೆ. ಈ ಕಳೆ ದೇಶದಲ್ಲೇ ಮೊದಲ ಬಾರಿಗೆ ಕಂಡು ಬಂದಿದೆ ಎಂದು ಜಿಕೆವಿಕೆ ಹಿರಿಯ ವಿಜ್ಞಾನಿ ಡಾ.ರಾಘವೇಂದ್ರರಾವ್ ಮಂಗಳವಾರ ಖಚಿತಪಡಿಸಿದ್ದಾರೆ.ಈ ಕಳೆ ಸಾಮಾನ್ಯವಾಗಿ 10ರಿಂದ 60 ಸೆಂ.ಮೀ (ಕೆಲವೊಮ್ಮೆ 100 ಸೆಂ.ಮೀ) ಉದ್ದದ ನೇರ ಕಾಂಡ ಹೊಂದಿ ಪೊದೆ ಮಾದರಿಯಲ್ಲಿದೆ. ಎಲೆಗಳ ತುದಿ ಮೊನಚಾಗಿದ್ದು, ಉಷ್ಣಾಂಶ ಹೆಚ್ಚಿರುವ ಹಾಗೂ ಒಣ ಹವೆಯಿರುವ ಪ್ರದೇಶದಲ್ಲಿ ಹೆಚ್ಚು ವ್ಯಾಪಕವಾಗಿ ಹಬ್ಬುತ್ತದೆ.ಈ ಗಿಡದ ಬೀಜಗಳು ಸಾವಿರಾರು ಕಿ.ಮೀ. ದೂರದ ಉತ್ತರ ಅಮೆರಿಕದಿಂದ ಹೇಗೆ ಈ ಹಳ್ಳಿಗಳನ್ನು ತಲುಪಿದವು ಎಂಬುದು ಗೊತ್ತಾಗಿಲ್ಲ. ಬಹುಶಃ ವಲಸೆ ಬರುವ ಹಕ್ಕಿಗಳು ಈ ಬೀಜವನ್ನು ಈ ಪ್ರದೇಶದಲ್ಲಿ ತಂದು ಹಾಕಿರಬಹುದು ಎಂದು ಊಹಿಸಲಾಗಿದೆ.ಮೂರು ವರ್ಷಗಳ ಹಿಂದೆ ಎಂ.ಬೇವಿನಹಳ್ಳಿ ಯತಿರಾಜ್ ಎಂಬುವವರು ಈ ಕಳೆಯನ್ನು ಮೊದಲ ಬಾರಿಗೆ ಗುರುತಿಸಿದರು. ತಮ್ಮ ತೋಟದಲ್ಲಿ ವ್ಯಾಪಕವಾಗಿ ಹರಡುತ್ತಿದ್ದ ಈ ವಿಚಿತ್ರ ಕಳೆಯನ್ನು ಕೃಷಿ ವಿಜ್ಞಾನಿಗಳ ಗಮನಕ್ಕೆ ತಂದರು. ಕಳೆದ ಹಲ ತಿಂಗಳುಗಳಿಂದ ಮುನಿಯೂರು ಸುತ್ತಮುತ್ತಲ ಗ್ರಾಮಗಳಿಗೆ ಭೇಟಿ ನೀಡಿದ ವಿಜ್ಞಾನಿಗಳು ಇದೊಂದು ಅಪರೂಪದ ದೈತ್ಯಕಳೆ ಎಂಬುದನ್ನು ಗುರುತಿಸಿದರು.ಸುಮಾರು 15-20 ವರ್ಷಗಳ ಹಿಂದೆಯೇ ಈ ಗ್ರಾಮಗಳಲ್ಲಿ ಕಾಣಿಸಿಕೊಂಡಿದ್ದು ಈಗ ನೂರಾರು ಎಕರೆ ಪ್ರದೇಶಕ್ಕೆ ಹರಡಿಕೊಂಡಿದೆ ಎನ್ನಲಾಗಿದೆ. ಗ್ರಾಮಸ್ಥರು ಇದಕ್ಕೆ `ಕಾಡು ದವನ~ ಎಂದು ಹೆಸರಿಟ್ಟಿದ್ದಾರೆ.

ಈ ದೈತ್ಯ ಕಳೆಯು ಮರ, ಗಿಡಗಳ ಬೆಳವಣಿಗೆ ಕುಂಠಿಸುತ್ತದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.ಇದನ್ನು ಯಾವುದೇ ಪಶುಗಳು ತಿನ್ನುವುದಿಲ್ಲ. ಕಳೆ ಪರಿಣಾಮ ಹುಲ್ಲು ಸಹ ಬೆಳೆಯದೆ ಜಾನವಾರುಗಳಿಗೆ ಆಹಾರದ ಕೊರತೆ ಉಂಟಾಗುತ್ತದೆ. ಅಲ್ಲದೆ ಪೊದೆ ಮಾದರಿಯ ಇತರೆ ತರಕಾರಿ ಗಿಡಗಳು, ಬಳ್ಳಿಗಳೂ ಸಹ ಈ ಕಳೆ ಆಕ್ರಮಣಕ್ಕೆ ಸಿಕ್ಕಿ ನಲುಗುತ್ತಿವೆ. ಈ ಕಳೆ ಬೇರಿನಿಂದ ಮರು ಹುಟ್ಟು ಪಡೆಯುವ ಶಕ್ತಿ ಇರುವುದರಿಂದ ಕಳೆಯನ್ನು ಬೇರು ಸಹಿತ ಕಿತ್ತೊಗೆಯುವುದೊಂದೇ ದಾರಿ ಎನ್ನುತ್ತಾರೆ ವಿಜ್ಞಾನಿಗಳು.ಸದ್ಯ ಮುನಿಯೂರು ಸುತ್ತ ಮುತ್ತಲ ಗ್ರಾಮಸ್ಥರು ಗ್ಲೈಪಾಸ್ಪೇಟ್ ದ್ರಾವಣ ಸಿಂಪಡಿಸುವ ಮೂಲಕ ಈ ದೈತ್ಯ ಕಳೆ ನಿಯಂತ್ರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ರಾಸಾಯನಿಕದಿಂದ ನಾಶವಾಗುವ ಕಳೆ ಅಲ್ಪ ಸಮಯದಲ್ಲೇ ಸ್ವಲ್ಪವೇ ತೇವಾಂಶದಲ್ಲಿ ಹುಲ್ಲಿಗಿಂತ ವೇಗವಾಗಿ ಬೆಳೆಯುವುದು ಕಂಡು ರೈತರು ಆತಂಕಕ್ಕೊಳಗಾಗಿದ್ದಾರೆ.ಡಾ.ಟಿ.ವಿ.ರಾಮಚಂದ್ರಪ್ರಸಾದ್, ಡಾ.ಎಂ.ಟಿ.ಸಂಜಯ್, ಡಾ.ಎಚ್.ಶಿವಣ್ಣ, ಡಾ.ದೇವೇಂದ್ರ ಮೊದಲಾದ ವಿಜ್ಞಾನಿಗಳು ಹಾಗೂ ಸ್ಥಳೀಯ ರೈತ ಕ್ಲಿನಿಕ್‌ನ ಡಾ.ಟಿ.ವಿ.ಶ್ರೀಧರಮೂರ್ತಿ ಈ ಬಗ್ಗೆ ಸಂಶೋಧನೆ ನಡೆಸಿದ್ದಾರೆ.ಮುನಿಯೂರಿನ ಪುಟ್ಟಸ್ವಾಮಿ, ಎಂ.ಬೇವಿನಹಳ್ಳಿಯ ಯತಿರಾಜ್, ಪರಮೇಶ್ವರಯ್ಯ, ಬಿ.ಜಿ.ಶಿವಾನಂದ್ ಇತರರು ದೈತ್ಯ ಕಳೆ ನಾಶಕ್ಕೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry