ತುಮಕೂರು ನಾಲೆ ಮೂಲಕ ಶೀಘ್ರ ನೀರು

7

ತುಮಕೂರು ನಾಲೆ ಮೂಲಕ ಶೀಘ್ರ ನೀರು

Published:
Updated:

ಹಿರಿಯೂರು: ತುಮಕೂರು ಶಾಖಾ ಕಾಲುವೆ ನಿರ್ಮಾಣ ಆಗದ ಹೊರತು ಹಿರಿಯೂರು, ಹೊಸದುರ್ಗ, ಸಿರಾ, ಚಿಕ್ಕನಾಯಕನಹಳ್ಳಿ ತಾಲ್ಲೂಕುಗಳಿಗೆ ನೀರು ಹರಿಯುವುದಿಲ್ಲ ಎಂದು ವಿರೋಧ ಪಕ್ಷದ ಉಪ  ನಾಯಕ ಟಿ.ಬಿ. ಜಯಚಂದ್ರ ಅಭಿಪ್ರಾಯಪಟ್ಟರು.ಭಾನುವಾರ ನಗರದಲ್ಲಿನ ಕಾರ್ಯಕ್ರಮ ವೊಂದರಲ್ಲಿ ಪಾಲ್ಗೊಳ್ಳಲು ಬಂದಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿದರು.ಬಚಾವತ್ ತೀರ್ಪಿನ ಅನ್ವಯ ರಾಜ್ಯಕ್ಕೆ ಸಿಗಬೇಕಿರುವ 911 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಯೋಜನೆ ರೂಪಿಸಿ ಜಾರಿಗೊಳಿಸುವ ಕೆಲಸಕ್ಕೆ ಸರ್ಕಾರ ತಕ್ಷಣ ಕಾರ್ಯಪ್ರವೃತ್ತ ಆಗಬೇಕು.ಈಗಾಗಲೇ 500 ಟಿಎಂಸಿ ನೀರು ಬಳಸಿಕೊಳ್ಳಲಾಗುತ್ತಿದ್ದು, ಬಾಕಿ ಇರುವ 411 ಟಿಎಂಸಿ ನೀರಿನಲ್ಲಿ 130 ಟಿಎಂಸಿ ಉತ್ತರ ಕರ್ನಾಟಕಕ್ಕೆ ಮೀಸಲಿದ್ದು, 40 ಟಿಎಂಸಿ ನೀರನ್ನು ಚಿತ್ರದುರ್ಗ, ತುಮಕೂರು, ಕೋಲಾರ ಜಿಲ್ಲೆಗಳಿಗೆ ಬಳಸಿಕೊಳ್ಳಬೇಕಿದೆ. ಆದರೆ, ಆಂತರಿಕ ಜಗಳದಲ್ಲಿ ಮುಳುಗಿರುವ ರಾಜ್ಯ ಸರ್ಕಾರ ಯೋಜನೆ ಜಾರಿಗೆ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ ಎಂದು ಅವರು ಆರೋಪಿಸಿದರು.ಕೃಷ್ಣಾ ನ್ಯಾಯಾಧೀಕರಣದ ಬಚಾವತ್ ತೀರ್ಪಿನ ಪ್ರಕಾರ ನೆರೆಯ ಆಂಧ್ರಪ್ರದೇಶದವರು ತಮ್ಮ ಪಾಲಿನ ನೀರಿಗಿಂತ ಹೆಚ್ಚಿನ ನೀರನ್ನು ಬಳಸಿದ್ದಾರೆ. 1976ರಲ್ಲೇ ತೀರ್ಪು ಬಂದರೂ ಕರ್ನಾಟಕ ತನ್ನ ನೀರಿನ ಪಾಲನ್ನು ಬಳಕೆ ಮಾಡಿಕೊಳ್ಳುವಲ್ಲಿ ವಿಫಲವಾದ ಕಾರಣಕ್ಕೆ ಕುಡಿಯುವ ನೀರಿಗೂ ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ಬಂದಿದೆ. ಬಚಾವತ್ `ಎ~ ಸ್ಕೀಂನಲ್ಲಿ ಬಳಕೆಗೆ ಲಭ್ಯವಿರುವ 21.5 ಟಿಎಂಸಿ ನೀರನ್ನು ಕೆಸಿ ರೆಡ್ಡಿ ವರದಿಯಲ್ಲಿ ಸೂಚಿಸಿರುವಂತೆ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ.

 

ಆದರೆ ಆಮೆಗತಿಯಲ್ಲಿ ಸಾಗುತ್ತಿರುವ ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣಗೊಳ್ಳುವ ಬಗ್ಗೆ ಸಂದೇಹವಿದೆ. ಬಯಲುಸೀಮೆಯ ರೈತರಿಗೆ, ಸಾರ್ವಜನಿಕರಿಗೆ ಈ ಭದ್ರಾ ಮೇಲ್ದಂಡೆ ಯೋಜನೆ ಜಾರಿ ಅತ್ಯಗತ್ಯವಾಗಿ ಆಗಲೇಬೇಕಿದೆ ಎಂದು ಜಯಚಂದ್ರ ವಿವರಿಸಿದರು.ಭದ್ರಾ ಮೇಲ್ದಂಡೆ ಯೋಜನೆ ಜಾರಿಗೊಳಿಸಲು ಚಿತ್ರದುರ್ಗ ಶಾಖಾ ನಾಲೆ ನಿರ್ಮಾಣಕ್ಕೆ ಸಮೀಕ್ಷೆ ನಡೆಸಲಾಗುತ್ತಿದೆ. ಈ ನಾಲೆಯಿಂದ ಚಿತ್ರದುರ್ಗ, ಜಗಳೂರು, ಮೊಳಕಾಲ್ಮೂರು ತಾಲ್ಲೂಕುಗಳ ಕೆಲ ಭಾಗಗಳಿಗೆ ಮಾತ್ರ ನೀರು ಹರಿಸಲು ಸಾಧ್ಯವಿದ್ದು, ತುಮಕೂರು ಶಾಖಾ ನಾಲೆ ಯೋಜನೆ ಜಾರಿಗೊಂಡರೆ ವಾಣಿವಿಲಾಸ, ಗಾಯತ್ರಿ ಜಲಾಶಯ ಹಾಗೂ ಧರ್ಮಪುರ ಕೆರೆಗಳಿಗೆ ನೀರು ಹರಿಸಬಹುದು. ಮೂರು ಪ್ಯಾಕೇಜ್‌ಗಳಲ್ಲಿ ಜಾರಿಯಾಗಬೇಕಿರುವ ಭದ್ರಾ ಮೇಲ್ದಂಡೆ ಕಾಮಗಾರಿ ನಿಧಾನಗತಿಯಲ್ಲಿ ಸಾಗಿರುವುದು ಬೇಸರದ ಸಂಗತಿ ಎಂದು ಅವರು ತಿಳಿಸಿದರು.ಜಿಲ್ಲೆಯಲ್ಲಿ ಅದಿರು ಹರಾಜಿನಿಂದ ರೂ 30 ಸಾವಿರ ಕೋಟಿ, ಆದಾಯ ನಿರೀಕ್ಷೆ ಮಾಡಿದ್ದು, ಇದರಲ್ಲಿ ದಾವಣಗೆರೆ-ತುಮಕೂರು ನೇರ ರೈಲು ಮಾರ್ಗಕ್ಕೆ ರೂ 960 ಕೋಟಿ, ಮೀಸಲಿಡಲಾಗಿದೆ. ಅದೇ ರೀತಿ ತುಮಕೂರು ಶಾಖಾ ನಾಲೆಗೆ ರೂ 3,000 ಕೋಟಿ ಮೀಸಲಿಡಬೇಕು. ನೀರಾವರಿ ಯೋಜನೆಗಳ ಜಾರಿಗೆ ಬಯಲಸೀಮೆಯ ಜನತೆ ಬೀದಿಗಿಳಿದು ಹೋರಾಟ ಮಾಡಬೇಕು ಎಂದು ಜಯಚಂದ್ರ ಕರೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry