ತುಮಕೂರು ರೈಲು ನಿಲ್ದಾಣದಲ್ಲಿ ತಪ್ಪದ ಕಿರಿಕಿರಿ

ಶನಿವಾರ, ಜೂಲೈ 20, 2019
28 °C

ತುಮಕೂರು ರೈಲು ನಿಲ್ದಾಣದಲ್ಲಿ ತಪ್ಪದ ಕಿರಿಕಿರಿ

Published:
Updated:

ತುಮಕೂರು: ರೈಲಿನ ಶಿಳ್ಳು ಕೇಳಿಸಿದರೆ ಸಾಕು ನಿರ್ಜೀವವಾಗಿದ್ದ ಆಟೊಗಳಲ್ಲಿ ಜೀವ ಸಂಚಾರವಾಗುತ್ತವೆ. ನಿಲ್ದಾಣದ ಎದುರು ಇರುವ ಹಿಡಿಯಷ್ಟು ಸ್ಥಳದಲ್ಲಿ ನೂರಾರು ಆಟೊಗಳು ಠಳಾಯಿಸುತ್ತವೆ. ರೈಲಿನಿಂದ ಇಳಿದ ಜನರಿಗೆ ನಿಲ್ದಾಣ ಸಮುಚ್ಚಯದಿಂದ ಹೊರಗೆ ಬರಲು `ದಾರಿಯಾವುದಯ್ಯಾ?~ ಎಂಬ ಗೊಂದಲ ಕಾಡುತ್ತದೆ.ಕ್ಯೂ ಪದ್ಧತಿಯಾಗಲೀ, ಮೀಟರ್ ಆಗಲಿ ಇಲ್ಲದ ಆಟೊಗಳ ಸೇವೆ ಚಾಲಕರ ಮನಸ್ಥಿತಿ ಮೇಲೆ ಅವಲಂಬಿತವಾಗಿದೆ. ಅವರು ಹೇಳಿದ್ದೇ ಬಾಡಿಗೆ-ಒಪ್ಪಿಕೊಂಡರೆ ಸರಿ. ಒಪ್ಪಿಕೊಳ್ಳದಿದ್ದರೆ ಬರಲ್ಲ ಎಂಬ ಉತ್ತರ. ಹೊಸಬರು ಎಂದು ಗೊತ್ತಾದರೆ ಬಸ್‌ಸ್ಟ್ಯಾಂಡ್‌ಗೆ ರೂ. 30ರ ವರೆಗೂ ವಸೂಲಿ ಮಾಡುತ್ತಾರೆ ಎನ್ನುವುದು ಬಹುತೇಕ ಪ್ರಯಾಣಿಕರ ಆರೋಪ.ನಿರ್ಲಕ್ಷ್ಯ: ರೈಲ್ವೆ ನಿಲ್ದಾಣದ ಅವ್ಯವಸ್ಥೆಗೆ ಟ್ರಾಫಿಕ್ ಪೊಲೀಸರ ನಿರ್ಲಕ್ಷ್ಯವೇ ಪ್ರಮುಖ ಕಾರಣ ಎನ್ನುವುದನ್ನು ಪ್ರಯಾಣಿಕರು ಮತ್ತು ಬಹುತೇಕ ಆಟೊ ಚಾಲಕರು ಒಪ್ಪುತ್ತಾರೆ.`ರೈಲು ನಿಲ್ದಾಣದ ಮುಂಭಾಗಕ್ಕೆ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು. ಆಟೊಗಳು ಸರತಿಯಲ್ಲಿ ನಿಲ್ಲುವಂತಾಗಬೇಕು. ಪ್ರಯಾಣಿಕರು ಆಟೊ ಬಳಿಗೆ ಹೋಗಬೇಕೇ ಹೊರತು ಆಟೋದವರು ನಮ್ಮನ್ನು ಕೂಗಿ ಕರೆದು ಹತ್ತಿಸಿಕೊಳ್ಳುವಂತಾಗಬಾರದು. ನಮ್ಮ ಮೇಲೆ ಆಟೊ ಚಾಲಕರು ಸವಾರಿ ಮಾಡುವಂತೆ ಆಗಬಾರದು~ ಎಂದು ಸೋಮವಾರ ಮುಂಜಾನೆ ಅರಸೀಕೆರೆ ಪ್ಯಾಸೆಂಜರ್‌ನಲ್ಲಿ ತಿಪಟೂರಿನಿಂದ ಬಂದ ರಮೇಶ್ ಹೇಳಿದರು.`ರೈಲು ನಿಲ್ದಾಣದ ಎದುರು ಬಸ್‌ಸ್ಟ್ಯಾಂಡ್‌ಗೆ ದಾರಿ ಎಂಬ ಒಂದು ಬೋರ್ಡ್ ಹಾಕಬೇಕು. ಅದರಲ್ಲಿ ಬಸ್‌ಸ್ಟ್ಯಾಂಡ್ ಎಷ್ಟು ದೂರದಲ್ಲಿದೆ, ಆಟೊದಲ್ಲಿ ಎಷ್ಟು ಬಾಡಿಗೆ ಪಡೆಯುತ್ತಾರೆ ಎಂಬ ಮಾಹಿತಿ ನೀಡಬೇಕು. ಆಗ ಮಾತ್ರ ಪ್ರಯಾಣಿಕರ ಶೋಷಣೆ ನಿಲ್ಲಲು ಸಾಧ್ಯ~ ಎಂದು ಸಲಹೆ ನೀಡಿದವರು ನಿತ್ಯ ಬೆಂಗಳೂರಿಗೆ ಸಂಚರಿಸುವ ರಘು.`ಏನು ಮಾಡೋದು ಸಾರ್, ನಾವು, ನಮ್ಮ ಪಾಡಿಗೆ ಇರ್ತೀವಿ. ಅವಶ್ಯಕತೆ ಇರೋ ಬಾಡಿಗೆ ಗಿರಾಕಿಗಳು ನಮ್ಮನ್ನೇ ಹುಡುಕಿಕೊಂಡು ಬಂದು ಕರ‌್ಕೊಂಡು ಹೋಗ್ತಾರೆ. ಈಗಿನ ಕಾಲದ ಹುಡುಗರು ಹಿಂಗ್ಯಾಕೆ ಒಬ್ಬರ ಮೇಲೆ ಒಬ್ಬರು ಬಿದ್ದಂಗೆ ಮಾಡಿ ಜನರಿಗೆ ಆಟೊದವರು ಅಂದ್ರೆ ಬೇಜಾರು ಬರೋಹಂಗೆ ಮಾಡ್ತಾರೋ ಗೊತ್ತಾಗಲ್ಲ~ ಎಂದು ಹೊಸ ತಲೆಮಾರಿನ ರಿಕ್ಷಾ ಚಾಲಕರ ನಡವಳಿಕೆ ಬಗ್ಗೆ ಹಿರಿಯ ಆಟೊ ಚಾಲಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.ಇನ್ನೊಂದು ಮುಖ: `ಕೆಎಸ್‌ಆರ್‌ಟಿಸಿಯಿಂದ ಸಿಟಿ ಬಸ್ ಸಂಚಾರ ಆರಂಭಿಸಿದ ನಂತರ `ಟ್ರಿಪ್~ ಆಟೊಗಳೂ ಸ್ಟೇಷನ್ ಕಡೆ ಬರ‌್ತಾ ಇವೆ. ಸದ್ಯಕ್ಕೆ ಇದೊಂದೇ ರೂಟ್‌ನಲ್ಲಿ ಕಲೆಕ್ಷನ್ ಚೆನ್ನಾಗಿ ಆಗ್ತಿರೋದು. ಸ್ಟೇಷನ್ ಮುಂದೆ 8 ಆಟೊ ಕ್ಯಾಪಾಸಿಟಿಯ ನಿಲ್ದಾಂ ಇದೆ. ಈ ರೂಟ್‌ನಲ್ಲಿ ಕನಿಷ್ಠ 100- 150 ಆಟೊ ಓಡಾಡ್ತವೆ. ಅಷ್ಟೊಂದು ಆಟೊಗಳನ್ನ ಎಲ್ಲಿ ನಿಲ್ಲಿಸಬೇಕು?~ ಎಂದು ವಾಸ್ತವದ ಪ್ರಶ್ನೆ ಮುಂದಿಡುತ್ತಾರೆ ಆಟೊ ಚಾಲಕರ ಸಂಘದ ಅಧ್ಯಕ್ಷ ಪ್ರತಾಪ್.`ನಗರದಲ್ಲಿ ಸಂಚರಿಸುವ ಬಹುತೇಕ ಹೊಸ ಆಟೊಗಳು ಸಹಕಾರ ಬ್ಯಾಂಕ್‌ಗಳಿಗೆ ಹೈಪೋಥಿಕೇಟ್ ಆಗಿವೆ. ಶೇ. 16ರಷ್ಟು ಬಡ್ಡಿ, ಸಾಲ ತೀರಿಸಬೇಕು. ಒಂದು ದಿನ ತಡವಾದರೂ ಶೇ. 3ರ ಬಡ್ಡಿ, ಸೀಜಿಂಗ್ ಚಾರ್ಜ್ ಬೀಳುತ್ತೆ. ಹೀಗಾಗಿ ಗಿರಾಕಿಗಳನ್ನ ಹಿಡಿಯೋ ಆತುರದಲ್ಲಿ ನಮ್ಮವರೇ ಹೊಡೆದಾಡಿಕೊಳ್ತಾರೆ~ ಎಂದು ಅವರು ವಿವರಿಸುತ್ತಾರೆ.`ಪ್ರಯಾಣಿಕರ ಬಗ್ಗೆ ನಮಗೂ ಕಾಳಜಿಯಿದೆ. ಅವರಿಂದಲೇ ನಾವು ಅನ್ನ ಕಾಣ್ತೀವಿ. ಅವ್ರಿಗೆ ತೊಂದ್ರೆ ಕೊಡೋಕೆ ಯಾರಾದ್ರೂ ಆಟೊ ಡ್ರೈವರ್ ಇಷ್ಟಪಡ್ತಾರಾ? ಅಲ್ಲಿ ಟ್ರಾಫಿಕ್ ಪೊಲೀಸ್ ನಿಂತ್ರೆ ಅರ್ಧದಷ್ಟು ಸಮಸ್ಯೆ ಪರಿಹಾರವಾಗುತ್ತೆ~ ಎನ್ನುವುದು ಅವರ ಅಭಿಪ್ರಾಯ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry