ತುಮರಿ: ಕಂಗಾಲಾದ ರೈತರ ಅಳಲು

7

ತುಮರಿ: ಕಂಗಾಲಾದ ರೈತರ ಅಳಲು

Published:
Updated:
ತುಮರಿ: ಕಂಗಾಲಾದ ರೈತರ ಅಳಲು

ತುಮರಿ: ‘ಮೂರು ಎಕರೆ ಜಮೀನಿನಲ್ಲಿ ಕೃಷಿ ಇಲಾಖೆಯಿಂದ ಬೀಜ ತಂದು ಸಸಿ ಹಾಕಿದೆವು. ಎದೆಮಟ್ಟ ಬೆಳೆದ ಸಸಿಯಾಗೆ ಭತ್ತದ ತೆನೆ ಬದಲು ಕಾಡು ಜಾತಿ ಗೊಂಡೆ ಕಳೆಯ ತೆನೆ ಬಿಟೈತೆ. ಈ ಸಾರಿ ಉಣ್ಣಾ ಅನ್ನಾಕೂ ಇನ್ನೊಬ್ಬರ ಕಡೆ ನೋಡಬೇಕು, ಕೃಷಿ ಇಲಾಖೆ ನಂಬಿ ಹಾಳಾದೆವು’.- ಇದು ಯಾವುದೋ ಸಿನಿಮಾದ ಸಂಭಾಷಣೆ ಅಲ್ಲ. ಕರೂರು ಹೋಬಳಿಯಲ್ಲಿ ಕೃಷಿ ಇಲಾಖೆಯಿಂದ ಹಂಚಲ್ಪಟ್ಟ ಭತ್ತದ ಬೀಜ ನಂಬಿ ಭಾರಿ ಫಸಲು ನಿರೀಕ್ಷಿಸಿ ಈಗ ಕಂಗಾಲಾದ ರೈತರ ಅಳಲು.

ಕುದುರೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಳೂರು, ಸಸಿಗೊಳ್ಳಿ ಮುಂತಾದ ಹಳ್ಳಿಗಳ ರೈತರು ಸುಮಾರು ಹದಿನೈದು ಎಕರೆಗೂ ಹೆಚ್ಚು ಗದ್ದೆಯಲ್ಲಿ ಕೃಷಿ ಇಲಾಖೆ ತುಮರಿಯ ಕೃಷಿ ಸಂಪರ್ಕ ಕೇಂದ್ರದ ಮೂಲಕ ಹಂಚಿದ ಆರೇಂಜ್ ಎಂಬ ಮಿಶ್ರ ತಳಿಯ ಬೀಜ ಬಿತ್ತಿದ್ದರು.`300 ಹಣ ನೀಡಿ ಮೂರು ಕೆ.ಜಿ. ತೂಕದ ಆರೇಂಜ್ ಬೀಜದಭತ್ತದ ನಾಟಿ ಮಾಡಿದ ನಂತರ ಬೆಳೆ ಬಹಳ ಹುಲುಸಾಗಿ ಬೆಳೆದಿತ್ತು. ಒಂದು ಸಸಿಯಲ್ಲಿ ನಲವತ್ತಕ್ಕೂ ಹೆಚ್ಚು ಸಸಿ ಮೂಡಿ ಬಂಪರ್ ಬೆಳೆಯ ನಿರೀಕ್ಷೆ ಹುಟ್ಟಿಸಿತ್ತು. ಆದರೆ, ಇವರ ಖುಷಿ ತುಂಬ ದಿನ ಉಳಿಯಲಿಲ್ಲ. ಭೂಮಿ ಹುಣ್ಣಿಮೆ ಮುಗಿದು ಬೆಳೆ ತೆನೆ ಮೂಡುವ ಹೊತ್ತಿಗೆ ಭತ್ತದ ತೆನೆಯ ಬದಲು ಕಾಡು ಜಾತಿಯ ಗೊಂಡೆ ಹುಲ್ಲಿನ ತೆನೆ ಅಲ್ಲಲ್ಲಿ ಮೂಡಿದವು. ತಾವು ಕೃಷಿ ಇಲಾಖೆಯಿಂದ ಮೋಸ ಹೋದೆವು ಎಂದು ಗೊತ್ತಾಗುವ ಹೊತ್ತಿಗೆ ಇಡೀ ಗದ್ದೆ ಪೂರ್ಣವಾಗಿ ಗೊಂಡೆ ಕಳೆಯ ತೆನೆಯಿಂದಲೇ ತುಂಬಿ ಹೋಯಿತು.- ಹೀಗೆ ತಮ್ಮ ಈ ವರ್ಷದ ಬೆಳೆಯ ಯಶೋಗಾಥೆಯನ್ನು ವಿವರಿಸುವ ಅಳೂರು ಗ್ರಾಮದ ರೈತ ಮಂಜನಾಯ್ಕ, ತಾನು ತಂದ ಬೀಜದ ಭತ್ತವನ್ನು ಪಕ್ಕದ ರೈತರಿಗೂ ನೀಡಿದ್ದರಿಂದ ತಾನು ಮೋಸ ಹೋಗಿ ತನ್ನಿಂದ ಉಳಿದ ರೈತರು ಮೋಸ ಹೋದರೆಂದು ನೊಂದುಕೊಳ್ಳುತ್ತಿದ್ದಾರೆ. ಆದರೆ, ರೈತರ ಬವಣೆ ಹೀಗೆ ಮುಂದುವರಿದರೂ, ಮಾಹಿತಿ ತಿಳಿಸಿದರೂ ಕೃಷಿ ಇಲಾಖೆಯ ಅಧಿಕಾರಿಗಳು ಬೆಳೆ ಪರಿಶೀಲನೆ ಮಾಡದೇ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವಂತಿದ್ದಾರೆ.ಖಾಸಗಿ ಕಂಪೆನಿಗಳ ಹೆಸರಿನಲ್ಲಿ ರೈತರಿಗೆ ಕಳಪೆ ಬೀಜ, ಗೊಬ್ಬರ, ಔಷಧ ಮುಂತಾದವುಗಳನ್ನು ವ್ಯಾಪಾರ ಮಾಡಿ ಮೋಸ ಮಾಡುವುದನ್ನು ಟಿವಿಗಳ ಮೂಲಕ ನೋಡಿದ್ದ ಅಳೂರಿನ ರೈತರು ಸರ್ಕಾರದ ಭಾಗವಾದ ಕೃಷಿ ಇಲಾಖೆಯಿಂದ ಬೀಜದ ಭತ್ತ ಖರೀದಿಸಿ ಮೋಸ ಹೋಗಿದ್ದಾರೆ. ತಮ್ಮ ವರ್ಷದ ಗಂಜಿಯನ್ನು ಕಳೆದುಕೊಂಡ ಅವರು ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇಂದು ಪ್ರತಿಭಟನೆಕೃಷಿ ಇಲಾಖೆಯ ಬೇಜವಾಬ್ದಾರಿತನ ಮತ್ತು ಪರಿಹಾರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ, ಸ್ಪಂದನ ಯುವ ವೇದಿಕೆ ಮುಂತಾದ ಸಂಘಟನೆಗಳು ತುಮರಿಯ ರೈತ ಸಂಪರ್ಕ ಕೇಂದ್ರದ ಮುಂದೆ ಗೊಂಡೆ ತೆನೆ ಇಟ್ಟು ಗುರುವಾರ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಹೇಳಿಕೆಯಲ್ಲಿ ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry