ಗುರುವಾರ , ಮೇ 19, 2022
20 °C

ತುರುವೇಕೆರೆ ಪಟ್ಟಣ ಬ್ಯಾಂಕ್‌ಗೆ ಶತಮಾನೋತ್ಸವ ಸಂಭ್ರಮ

ಪ್ರಜಾವಾಣಿ ವಾರ್ತೆ/ Updated:

ಅಕ್ಷರ ಗಾತ್ರ : | |

ತುರುವೇಕೆರೆ: ಹಲವು ಏಳು-ಬೀಳು ಕಂಡು ಫಿನಿಕ್ಸ್ ಹಕ್ಕಿಯಂತೆ ಮೇಲೆದ್ದು ಬಂದಿರುವ ಪಟ್ಟಣ ಸಹಕಾರ ಬ್ಯಾಂಕ್ ಶತಮಾನೋತ್ಸವ ಸಂಭ್ರಮದಲ್ಲಿದೆ.ಸೊಸೈಟಿ ರಂಗಣ್ಣ 1909 ಮೇ 7ರಂದು ಸಹಕಾರ ಸಂಘ ಸ್ಥಾಪಿಸಿದರು. ಕೆರೆಗೋಡಯ್ಯ, ಲಿಂಗಣ್ಣಯ್ಯ ಮೊದಲಾದವರ ಸಾರಥ್ಯದಲ್ಲಿ ಚಿಕ್ಕ ಕೋಣೆಯೊಂದರಲ್ಲಿ ಆರಂಭವಾದ ಸಂಘ ಪಟ್ಟಣದ ಹೃದಯ ಭಾಗಕ್ಕೆ 1978ರಲ್ಲಿ ಸ್ಥಳಾಂತರಗೊಂಡು ಪೂರ್ಣ ಪ್ರಮಾಣದ ಹಣಕಾಸಿನ ಚಟುವಟಿಕೆ ಆರಂಭಿಸಿತು.ದಿ.ಎಚ್.ಡಿ.ರಂಗಪ್ಪಗೌಡ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಯಿತು. ಪಟ್ಟಣ ಸಹಕಾರಿ ಬ್ಯಾಂಕ್ 2001ರ ವರೆಗೆ ಅತ್ಯುತ್ತಮ ನಿರ್ವಹಣೆಯೊಂದಿಗೆ ಉತ್ತಮ ಸ್ಥಾನದಲ್ಲಿತ್ತು. ಆ ನಂತರ ನೌಕರರ ಅಧಕ್ಷತೆ ಮತ್ತು ಅವ್ಯವಹಾರದ ಪರಿಣಾಮವಾಗಿ ವೈಭವದಿಂದ ಮನೆಮಾತಾಗಿದ್ದ ಬ್ಯಾಂಕ್, ಗ್ರಾಹಕರ ವಿಶ್ವಾಸ ಕಳೆದುಕೊಂಡು ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿತು.ಬ್ಯಾಂಕ್ ಏಕಾಏಕಿ ಕೋಟ್ಯಂತರ ರೂಪಾಯಿ ಠೇವಣಿ ಹಿಂದಿರುಗಿಸುವ ತೀವ್ರ ಒತ್ತಡಕ್ಕೆ ಸಿಲುಕಿತು. ಅದೇ ಸಮಯಕ್ಕೆ ಬ್ಯಾಂಕಿನಿಂದ ಸಾಲ ಪಡೆದವರೂ ವಾಯಿದೆ ಪ್ರಕಾರ ಸಾಲ ಮರುಪಾವತಿ ಮಾಡದೆ ಬ್ಯಾಂಕ್ ದಿವಾಳಿ ಅಂಚಿಗೆ ಬಂದು ನಿಂತಿತು.ಇಂತಹ ಕಡುಕಷ್ಟಗಳನ್ನು ಸಮರ್ಥವಾಗಿ ಎದುರಿಸಿ ಬ್ಯಾಂಕ್ ಮತ್ತೆ ಚೇತರಿಕೆ ಹಾದಿಯಲ್ಲಿದೆ ಎನ್ನುವುದೇ ಶತಮಾನೋತ್ಸವದ ಸಮಾಧಾನ. ಕಷ್ಟಕಾಲದಲ್ಲಿ ಸಂಘವನ್ನು ಮುನ್ನಡೆಸಿ ಮತ್ತೆ ಪ್ರವೃದ್ಧಮಾನಕ್ಕೆ ಬರುವಂತೆ ಮಾಡುವಲ್ಲಿ ಹಾಲಿ ಅಧ್ಯಕ್ಷ ಎಚ್.ಆರ್.ರಾಮೇಗೌಡರ ಪಾತ್ರ ಸ್ಮರಣೀಯ. ಉಪಾಧ್ಯಕ್ಷ ಶಿವಕುಮಾರ್, ನಿರ್ದೇಶಕರಾದ ಎನ್.ಆರ್.ಸುರೇಶ್, ಕುಮಾರಸ್ವಾಮಿ ಇತರ ನಿರ್ದೇಶಕರು ಅವರಿಗೆ ಬೆಂಬಲವಾಗಿ ನಿಂತಿದ್ದಾರೆ.ಕಳೆದ ಮೂರು ವರ್ಷಗಳ ಅವಧಿಯಲ್ಲಿ ಬ್ಯಾಂಕ್ ಹಲವು ಸುಧಾರಣೆ ಕಂಡಿದೆ. ಬ್ಯಾಂಕ್ ವ್ಯವಹಾರವನ್ನು ಗಣಕೀಕರಣಗೊಳಿಸಲಾಗಿದೆ. ಗ್ರಾಹಕರನ್ನು ಮತ್ತೆ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ. ಬ್ಯಾಂಕ್ ಅಧ್ಯಕ್ಷ ಎಚ್.ಆರ್.ರಾಮೇಗೌಡರ ಪ್ರಕಾರ ಸಂಘಕ್ಕೆ ರೂ. 2 ಕೋಟಿಗೂ ಮೀರಿದ ಆಸ್ತಿ ಇದೆ. ಬ್ಯಾಂಕ್ ರೂ. 68 ಲಕ್ಷ ಠೇವಣಿ ಹೊಂದಿದೆ. ಬ್ಯಾಂಕಿಗೆ ವಸೂಲಾಗಬೇಕಿರುವ ಸಾಲ ರೂ.1.45 ಲಕ್ಷ.ಸಾಲ ವಸೂಲಿಗಾಗಿ ಸಾಲಗಾರರ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಸುಮಾರು 40 ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥ ಪಡಿಸಿ ಸಾಲ ವಸೂಲಿ ಮಾಡಲಾಗಿದೆ. ಗ್ರಾಹಕರು ಮತ್ತೆ ಬ್ಯಾಂಕಿನಲ್ಲಿ ಠೇವಣಿ ಇಡಲು ಆರಂಭಿಸಿದ್ದಾರೆ.ಅಂಗನವಾಡಿ ಕಾರ್ಯಕರ್ತೆಯರಿಗೆ, ಸರ್ಕಾರಿ ನೌಕರರಿಗೆ ಮತ್ತೆ ಸಂಘ ಸಾಲ ನೀಡುತ್ತಿದೆ. 49 ಅಂಗಡಿ ಮಳಿಗೆಗಳ ಬಾಡಿಗೆ ಪರಿಷ್ಕರಿಸಿದ್ದು ಮಾಸಿಕ ರೂ. 60 ಸಾವಿರ ಆದಾಯ ಬರುತ್ತಿದೆ.ಬ್ಯಾಂಕ್ ಹಿಂದಿನ ನೌಕರರಿಂದ ದುರುಪಯೋಗವಾಗಿರುವ ಹಣದ ವಸೂಲಿಗೆ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಸುಮಾರು 45 ಲಕ್ಷಕ್ಕೂ ಅಧಿಕ ಮೊತ್ತ ಬ್ಯಾಂಕಿಗೆ ವಸೂಲಾಗುತ್ತದೆ ಎಂಬ ನಿರೀಕ್ಷೆಯಿದೆ. ಈ ಎಲ್ಲದರ ನಡುವೆಯೂ ಶತಮಾನೋತ್ಸವದ ನೆನಪಿಗೆ ಒಂದು ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗಿದೆ.ಫೆ. 9ರಂದು ನಡೆಯಲಿರುವ ಶತಮಾನೋತ್ಸವದಂದು ಹೊಸ ವಾಣಿಜ್ಯ ಸಂಕೀರ್ಣ ಉದ್ಘಾಟನೆಯಾಗಲಿದೆ. ಬ್ಯಾಂಕನ್ನು ಈಗಿರುವ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿ ಮತ್ತೊಂದು ವಿಸ್ತರಣೆ ಮಾಡುವ ಯೋಜನೆ ರೂಪಿಸಲಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.