ಶನಿವಾರ, ಮೇ 15, 2021
23 °C

ತುರುವೇಕೆರೆ: ಮರಳು ದಂಧೆಗೆ ಕಡಿವಾಣ

ವಿಶೇಷ ವರದಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುರುವೇಕೆರೆ: ಇಲ್ಲಿನ ದಂಡಾಧಿಕಾರಿಗೆ ತಮ್ಮದೇ ಆದ ಸರ್ಕಾರಿ ವಾಹನವೇ ಇಲ್ಲ, ಕರೆದ ಕೂಡಲೆ ಬರುವ ಸಿಬ್ಬಂದಿಯಿಲ್ಲ, ಆದರೂ ಜನಪ್ರತಿನಿಧಿಗಳ ಒತ್ತಡ, ಮರಳು ದಂಧೆಕೋರರ ಬೆದರಿಕೆಗೆ ಸೆಡ್ಡು ಹೊಡೆದು ಮರಳು ದಂಧೆ ಮಟ್ಟ ಹಾಕಲು ಪ್ರಾಣ ಒತ್ತೆಯಿಟ್ಟು ಹೋರಾಡುತ್ತಿದ್ದಾರೆ.ಮರಳು ಗಣಿಗಾರಿಕೆ ನಡೆಸುವಂತಿಲ್ಲ ಎಂಬ ನಿಯಮವಿದ್ದರೂ ಮಾಯಸಂದ್ರ ಹೋಬಳಿ ಶಿಂಷಾ ನದಿ ಪಾತ್ರದ ದೊಡ್ಡಮಾರ್ಗೋನಹಳ್ಳಿ, ಸೊಂಡೆ ಮಾರ್ಗೋನಹಳ್ಳಿ, ಮಣಿಚೆಂಡೂರು, ಹಿತ್ತಲಕೊಪ್ಪ, ಕೊಡಗೀಹಳ್ಳಿ, ಗುಡ್ಡೇನಹಳ್ಳಿಗಳಲ್ಲಿ ಕಳೆದ ಒಂದು ದಶಕದಿಂದ ಅವ್ಯಾಹತವಾಗಿ ಮರಳು ದಂಧೆ ನಡೆಯುತ್ತಿತ್ತು. ರಿಪಬ್ಲಿಕ್ ಬಳ್ಳಾರಿಯಂತೆ ಇಲ್ಲೂ ಒಂದು `ರಿಪಬ್ಲಿಕ್ ಶಿಂಷಾ' ಸ್ಥಾಪನೆಗೊಂಡಿತ್ತು.ರೂ.250 ಕೋಟಿಗೂ ಹೆಚ್ಚು ಬೆಲೆಬಾಳುವ ಸಾವಿರಾರು ಲೋಡ್ ಮರಳನ್ನು ಅಕ್ರಮವಾಗಿ ಬೆಂಗಳೂರು ಮುಂತಾದೆಡೆ ಸಾಗಿಸಲಾಗಿದೆ. ಅಂತರ್ಜಲ ಕುಸಿದಿತ್ತು. ಆಗೊಂದು ಈಗೊಂದು ಟ್ರ್ಯಾಕ್ಟರ್, ಜೆಸಿಬಿ ತಡೆದು ದಂಡ ಹಾಕಿದ ಶಾಸ್ತ್ರ ಮಾಡಿದ ನಂತರ ಅಧಿಕಾರಿಗಳು ಕೈ ತೊಳೆದುಕೊಳ್ಳುತ್ತಿದ್ದರು. ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಇರಲಿಲ್ಲ.ಮರಳು ದಂಧೆಗೆ ಕಡಿವಾಣ ಹಾಕಲು ಸಂಕಲ್ಪ ಮಾಡಿದ ತಹಶೀಲ್ದಾರ್ ಮಂಜೇಗೌಡ, ತಮ್ಮ ಅಧಿಕಾರ ಅವಧಿಯಲ್ಲಿ 37 ಪ್ರಕರಣ ದಾಖಲಿಸಿ ರೂ.8.97 ಲಕ್ಷ ದಂಡ ವಸೂಲಿ ಮಾಡಿದ್ದಾರೆ. ಮರಳು ದಂಧೆ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಅಕ್ರಮ ಮರಳು ದಾಸ್ತಾನು ವಶಕ್ಕೆ ಪಡೆಯಲು ನಿರ್ಧರಿಸಿದರು. ಸರ್ಕಲ್ ಇನ್ಸ್‌ಪೆಕ್ಟರ್ ಅಂಜನ್ ಕುಮಾರ್ ನೆರವಿನೊಂದಿಗೆ ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ದಯಾನಂದ್, ಉಪತಹಶೀಲ್ದಾರ್‌ಗಳು, ಕಂದಾಯ ಅಧಿಕಾರಿಗಳನ್ನೊಳಗೊಂಡ ಅಧಿಕಾರಿಗಳ ಕಾರ್ಯಪಡೆ ರೂಪಿಸಿದರು.ಕಳೆದ ವಾರದಿಂದ ಅಕ್ರಮ ಮರಳು ದಾಸ್ತಾನು ಮಾಡಿರುವ ಮಾಯಸಂದ್ರ ಹೋಬಳಿಯ ಮೂಲೆ ಮೂಲೆಗಳಲ್ಲೂ ದಾಳಿ ನಡೆಸಿ ಲೋಡ್‌ಗಟ್ಟಲೆ ಮರಳನ್ನು ವಶಪಡಿಸಿಕೊಂಡರು. ಹಾಗೆ ವಶಕ್ಕೆ ಪಡೆದ ಸುಮಾರು 250 ಲೋಡ್‌ಗೂ ಹೆಚ್ಚು ಮರಳನ್ನು ಮಾಯಸಂದ್ರದ ಕಲ್ಪತರು ಆಶ್ರಮದ ಆವರಣದಲ್ಲಿ ದಾಸ್ತಾನು ಮಾಡಲಾಗಿದೆ.ಕಾರ್ಯಪಡೆ ದಾಳಿಯಿಂದ ಮರಳು ದಂಧೆಯಲ್ಲಿ ನಿರತರಾಗಿದ್ದರು ತತ್ತರಿಸಿದ್ದಾರೆ. ಈ ಹಿಂದೆ ಅಕ್ರಮ ಮರಳು ದಾಸ್ತಾನಿದ್ದ ಕಡೆ ಅಧಿಕಾರಿಗಳು ತಲೆ ಹಾಕಲೂ ಆಗದಂಥ ಅಭೇದ್ಯ ಕೋಟೆ ನಿರ್ಮಾಣಗೊಂಡಿತ್ತು.ಅಧಿಕಾರಿಗಳು ವಶಕ್ಕೆ ಪಡೆದ ಮರಳನ್ನು ಹರಾಜು ಕೂಗಲೂ ಯಾರೂ ಮುಂದೆ ಬರುತ್ತಿರಲಿಲ್ಲ. ಇದೀಗ ತಾಲ್ಲೂಕಿನಲ್ಲಿ ವಾತಾವರಣ ಬದಲಾಗಿದೆ. ಮರಳು ದಾಸ್ತಾನು ಎತ್ತಂಗಡಿ ಕಾರ್ಯಾಚರಣೆ ಮುಂದುವರೆದಿದೆ.

ಮುಂದಿನ ದಿನಗಳಲ್ಲಿ ಮರಳು ದಾಸ್ತಾನು ಮಾಡಿದ್ದ ವ್ಯಕ್ತಿಗಳ ಮತ್ತು ದಾಸ್ತಾನಿದ್ದ ಜಾಗಗಳ ಮಾಲೀಕರ ವಿರುದ್ಧ ಮೊಕದ್ದಮೆ ಹೂಡಲಾಗುವುದು. ಅಕ್ರಮ ಮರಳು ಸಾಗಣೆಗೆ ಬಳಸುತ್ತಿರುವ ಟ್ರ್ಯಾಕ್ಟರ್‌ಗಳ ಮೇಲೆ ಕೃಷಿ ಚಟುವಟಿಕೆಗೆಂದು ಪಡೆದಿರುವ ಎಲ್ಲ ರಿಯಾಯಿತಿ ರದ್ದುಗೊಳಿಸಿ ವಶಪಡಿಸಿಕೊಳ್ಳಲಾಗುವುದು.ಈ ಹಿಂದೆ ಜಿಲ್ಲಾಧಿಕಾರಿ ನೇತೃತ್ವದ ತಂಡ ವಶಪಡಿಸಿಕೊಂಡಿದ್ದ ರೂ.50 ಲಕ್ಷ ಮೌಲ್ಯದ ಮರಳು ದಾಸ್ತಾನು ಹಾಗೆಯೇ ಇದೆ. ಈ ಬಾರಿ ಅದನ್ನೂ ಹರಾಜು ಹಾಕಲಾಗುವುದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.ಎಸ್‌ಪಿ ರಮಣ್‌ಗುಪ್ತ ಮರಳು ದಂಧೆ ಕಡಿವಾಣಕ್ಕೆಂದು ವಿಶೇಷ ಪೊಲೀಸ್ ಪಡೆಯ ನೆರವು ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.