ತುರ್ತು ಸಭೆ ನಡೆಸಿದ ಮುಖ್ಯಮಂತ್ರಿ

7

ತುರ್ತು ಸಭೆ ನಡೆಸಿದ ಮುಖ್ಯಮಂತ್ರಿ

Published:
Updated:

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜಾಮೀನು ಅರ್ಜಿಯನ್ನು ಶನಿವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯ ವಜಾಗೊಳಿಸಿರುವ ವಿಷಯ ಗೊತ್ತಾಗುತ್ತಿದ್ದಂತೆಯೇ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಮುಂಬೈ ಪ್ರವಾಸವನ್ನು ರದ್ದುಗೊಳಿಸಿ ಗೃಹ ಕಚೇರಿ `ಕೃಷ್ಣಾ~ದಲ್ಲಿ ತುರ್ತು ಸಭೆ ನಡೆಸಿದರು.ಮುಂಬೈಗೆ ಹೊರಡಲು ಸದಾನಂದ ಗೌಡ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಆದರೆ ವಿಷಯ ಗೊತ್ತಾಗುತ್ತಿದ್ದಂತೆಯೇ ಪ್ರವಾಸ ರದ್ದುಪಡಿಸಿ ಅಲ್ಲಿಂದ ನೇರವಾಗಿ `ಕೃಷ್ಣಾ~ಗೆ ಆಗಮಿಸಿ ಸಚಿವರಾದ ಆರ್.ಅಶೋಕ, ಎಸ್.ಸುರೇಶಕುಮಾರ್, ಸಿ.ಎಂ.ಉದಾಸಿ, ಸಿ.ಸಿ.ಪಾಟೀಲ, ಶೋಭಾ ಕರ‌್ಲಂದಾಜೆ, ಬಸವರಾಜ ಬೊಮ್ಮಾಯಿ, ಲಕ್ಷ್ಮಣ ಸವದಿ, ವಿ.ಸೋಮಣ್ಣ, ಎ.ನಾರಾಯಣಸ್ವಾಮಿ, ಶಾಸಕ ಡಿ.ಎನ್.ಜೀವರಾಜ್ ಮೊದಲಾದವರೊಂದಿಗೆ ಸಮಾಲೋಚನೆ ನಡೆಸಿದರು.ಇದು ಯಡಿಯೂರಪ್ಪ ಅವರ ವೈಯಕ್ತಿಕ ವಿಷಯವಾಗಿದೆ. ಅಲ್ಲದೆ ನ್ಯಾಯಾಲಯದ ಆದೇಶದಂತೆ ಬಂಧನವಾಗಿರುವುದರಿಂದ ಪಕ್ಷ ಮತ್ತು ಸರ್ಕಾರದ ಕಡೆಯಿಂದ ಬಹಿರಂಗವಾಗಿ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂಬ ತೀರ್ಮಾನಕ್ಕೆ ಬರಲಾಯಿತು ಎಂದು ತಿಳಿದುಬಂದಿದೆ.ನಗರ ಪೊಲೀಸ್ ಕಮೀಷನರ್ ಜ್ಯೋತಿ ಪ್ರಕಾಶ್ ಮಿರ್ಜಿ, ಗುಪ್ತಚರ ವಿಭಾಗದ ಐಜಿಪಿ ಗೋಪಾಲ ಹೊಸೂರು ಅವರೊಂದಿಗೂ ಸದಾನಂದ ಗೌಡ ಸ್ವಲ್ಪ ಹೊತ್ತು ಸಮಾಲೋಚನೆ ನಡೆಸಿದರು. ಯಡಿಯೂರಪ್ಪ ಅವರ ಬಂಧನದಿಂದ ಉಂಟಾಗಬಹುದಾದ ಕಾನೂನು ಸುವ್ಯವಸ್ಥೆ, ಮುಂಜಾಗ್ರತಾ ಕ್ರಮವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು ಎನ್ನಲಾಗಿದೆ.ಯಡಿಯೂರಪ್ಪ ಅವರ ಜಾಮೀನು ಅರ್ಜಿ ವಜಾಗೊಳಿಸಿ ವಾರೆಂಟ್ ಜಾರಿ ಮಾಡಿದ ಬೆನ್ನಲೇ ವಸತಿ ಸಚಿವ ವಿ.ಸೋಮಣ್ಣ, ಶಾಸಕ ಡಿ.ಎನ್.ಜೀವರಾಜ್ ರೇಸ್‌ಕೋರ್ಸ್ ರಸ್ತೆಯ ಯಡಿಯೂರಪ್ಪ ನಿವಾಸಕ್ಕೆ ತೆರಳಿ ಸಮಾಲೋಚನೆ ನಡೆಸಿದರು.ನ್ಯಾಯಾಲಯ ವಾರೆಂಟ್ ಆದೇಶ ಹೊರಡಿಸಿದಾಗ ಯಡಿಯೂರಪ್ಪ ಅವರ ನಿವಾಸ ಬಿಕೊ ಎನ್ನುತ್ತಿತ್ತು. ಆದರೆ ಅವರನ್ನು ಬಂಧಿಸಲು ಲೋಕಾಯುಕ್ತ ಪೊಲೀಸರು ರೇಸ್‌ಕೋರ್ಸ್ ರಸ್ತೆಯ ನಿವಾಸಕ್ಕೆ ಬರುವ ವಿಷಯ ಗೊತ್ತಾಗುತ್ತಿದ್ದಂತೆಯೇ ಮನೆಯ ಸುತ್ತ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಒಂದು ರೀತಿಯಲ್ಲಿ ಬಿಗುವಿನ ವಾತಾವರಣವಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry