ಮಂಗಳವಾರ, ಜೂನ್ 22, 2021
29 °C
ಮಾಹಿತಿ ಕಾರ್ಯಾಗಾರದಲ್ಲಿ ಕಿಮ್ಮನೆ ರತ್ನಾಕರ ವಿಷಾದ

ತುಳಿತಕ್ಕೆ ಒಳಗಾದವರಿಗೆ ಮಾಹಿತಿ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೀರ್ಥಹಳ್ಳಿ: ಸಾಕ್ಷರತೆ ಇದ್ದರೂ ಕೂಡ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಸಾಮಾನ್ಯ ಜನರನ್ನು ತಲುಪುತ್ತಿಲ್ಲ. ಯಾರು ತುಳಿತಕ್ಕೆ ಒಳಗಾಗಿದ್ದಾರೋ ಅಂಥವರಿಗೆ ಸರ್ಕಾರದ ಯೋಜನೆಗಳ ಮಾಹಿತಿ ತಲುಪಬೇಕು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.ಶುಕ್ರವಾರ ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ತಾಲ್ಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿ ಸಹಯೋಗದಲ್ಲಿ ನಡೆದ ಸರ್ಕಾರದ ವಿವಿಧ ಕಾರ್ಯಕ್ರಮಗಳ ಕುರಿತ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ದೇಶದಲ್ಲಿ ಅನೇಕ ಇಲಾಖೆಗಳಲ್ಲಿ ಹಣದ ಕೊರತೆ ಇದೆ. ಆದರೆ, ರಾಷ್ಟ್ರೀಯ ಉದ್ಯೋಗ ಖಾತ್ರಿಯ ಗ್ರಾಮೀಣ ಅಭಿವೃದ್ಧಿಯ ನರೇಗಾ ಯೋಜನೆಗೆ ಹಣದ ಕೊರತೆ ಇಲ್ಲ. ಅದಕ್ಕೆ ಪೂರಕವಾಗಿ ನಡೆದುಕೊಳ್ಳುವ ಪ್ರಯತ್ನ ಮಾಡಬೇಕು. ಈ ಯೋಜನೆ ಸರ್ಕಾರದ ಕಾಯ್ದೆ. ಇದು ಸುತ್ತೋಲೆ ಅಲ್ಲ. ಯೋಜನೆಯಲ್ಲಿ ಲೋಪ ಎಸಗುವವರನ್ನು ಶಿಕ್ಷೆಗೆ ಗುರಿಪಡಿಸಬಹುದು ಎಂದರು.ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಉದ್ಯೋಗ ಖಾತ್ರಿ ಸಮಾಜವಾದಿ ಚಿಂತನೆಯಿಂದ ಮೂಡಿಬಂದ ಯೋಜನೆ. ಉದ್ಯೋಗ ನೀಡಿಕೆಯಲ್ಲಿ ಶೋಷಣೆ ಮಾಡುತ್ತಿದ್ದ ಶ್ರೀಮಂತರ ದೌರ್ಜನ್ಯ ತೊಡೆದು ಹಾಕಲು ಯೋಜನೆಯನ್ನು ರೂಪಿಸಲಾಗಿದೆ. ಇದನ್ನು ಜನಪ್ರತಿನಿಧಿಗಳು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.ರಾಷ್ಟ್ರೀಯ ಶಿಕ್ಷಣ ಕಾಯ್ದೆ ಉದ್ದೇಶ, ಗುರಿ ಯಾರೂ ಶಿಕ್ಷಣದಿಂದ ಹೊರಗೆ ಉಳಿಯ ಬಾರದು ಎಂಬುದೇ ಆಗಿದೆ. ಈ ಕಾಯ್ದೆಯಲ್ಲಿನ ಸಣ್ಣ ಪುಟ್ಟ ಲೋಪಗಳನ್ನು ವೈಭವೀಕರಿಸುವುದು ಸರಿಯಲ್ಲ. ರಾಜಕಾರಣಿಗಳು ಮೌಲ್ಯಗಳನ್ನು ಕಳೆದುಕೊಂಡಿದ್ದಾರೆ. ಸೇವಾ ಮನೋಭಾವನೆಯಿಂದ ನೌಕರರು ಕರ್ತವ್ಯ, ಜವಾಬ್ದಾರಿಯನ್ನು ನಿರ್ವಹಿಸಬೇಕು. ಶೇ  48ರಷ್ಟು ಸರ್ಕಾರಿ ಶಾಲೆಗೆ ಬರುವ ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆ ಇದೆ. ಅದನ್ನು ನೀಗಿಸಲು ₨400 ಕೋಟಿ ವೆಚ್ಚದಲ್ಲಿ ಹಾಲು ಒದಗಿಸಲಾಗುತ್ತಿದೆ. 24 ಜಿಲ್ಲೆಗಳಲ್ಲಿ ಮಕ್ಕಳ ಆರೋಗ್ಯದಲ್ಲಿ ಪ್ರಗತಿ ಕಂಡಿದೆ ಎಂದರು.ಅರಣ್ಯ ಪಾರಂಪರಿಕ ಹಕ್ಕನ್ನು ಸರಿಯಾಗಿ ಸರ್ಕಾರ ಬಳಕೆ ಮಾಡಿಲ್ಲ. ನಮ್ಮ ಅಧಿಕಾರಿಗಳು ಪುಸ್ತಕವನ್ನೇ ಓದುವುದಿಲ್ಲ. ಮೇಲೆ ಕುಳಿತವರೂ ಕೂಡ ಕಾಯ್ದೆ ಉದ್ದೇಶ, ಗುರಿ ಅರ್ಥಮಾಡಿಕೊಳ್ಳುವುದಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪಾಠ ಕಲಿಸದಿದ್ದರೆ ಸಾಧ್ಯವೇ ಇಲ್ಲ  ಎಂದು ಹರಿಹಾಯ್ದರು.ಕಾರ್ಯಾಗಾರದಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ರೇಣುಕಾ ನಾಗರಾಜ್, ಜಿಲ್ಲಾ ಪಂಚಾಯ್ತಿ ಸಹಾಯಕ ಕಾರ್ಯದರ್ಶಿ ಗಣಪತಿ, ತಾಲ್ಲೂಕು ಪಂಚಾಯ್ತಿ ಇ.ಒ.ಪುಟ್ಟಸ್ವಾಮಿ ವಿವಿಧ ಯೋಜನೆಗಳ ಮಾಹಿತಿ ನೀಡಿದರು. ಸಭೆಯಲ್ಲಿ ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಕೆಸ್ತೂರ್‌ ಮಂಜುನಾಥ್‌, ಬಾಳೇಹಳ್ಳಿ ಪ್ರಭಾಕರ್‌, ಭಾರತಿ ಸುರೇಶ್‌, ಜೀನಾವಿಕ್ಟರ್‌ ಡಿಸೋಜ, ಹೊಸಳ್ಳಿ ಸುಧಾಕರ್‌, ಪ್ರೇಮಾ ಗಣೇಶ್‌, ತಹಶೀಲ್ದಾರ್‌ ಗಣೇಶಮೂರ್ತಿ ಮಾತನಾಡಿದರು.ಕಾರ್ಯಾಗಾರದಲ್ಲಿ ವಿವಿಧ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು, ಫಲಾನುಭವಿಗಳು, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.