ಭಾನುವಾರ, ಡಿಸೆಂಬರ್ 8, 2019
19 °C
ಪಂಚರಂಗಿ

ತುಳುನಾಡಿನ ಭಲೇ ಬಸವ...

Published:
Updated:
ತುಳುನಾಡಿನ ಭಲೇ ಬಸವ...

ಶೋಭ್‌ರಾಜ್‌ ಇದೀಗ ನಗುತ್ತಿದ್ದಾರೆ. ಜೀ ಕನ್ನಡ ವಾಹಿನಿಯ ‘ಭಲೇ ಬಸವ’ ಮಿನಿ ಧಾರಾವಾಹಿಯ ಮುಖ್ಯ ಪಾತ್ರಧಾರಿ ಈ ಶೋಭ್‌ರಾಜ್‌. ಮಿನಿ ಧಾರಾವಾಹಿ ಹೊಸ ಪರಿಕಲ್ಪನೆ. ಅದರ ಸರಣಿಯ ಮೊದಲ ಭಾಗವಾಗಿ ‘ಭಲೇ ಬಸವ’ ಪ್ರಸಾರವಾಗಿ, ಯಶಸ್ವಿಯೂ ಆಯಿತು.ಈಗ ‘ಭಲೇ ಬಸವ’ನ ಪಾತ್ರಧಾರಿ ಶೋಭ್‌ರಾಜ್‌ ಮೊಗದಲ್ಲಿ ನಗು ಮೂಡಿದೆ. ಕಿರುತೆರೆಯಲ್ಲಿ ತಳವೂರಬೇಕು ಎಂದುಕೊಂಡು ಮಂಗಳೂರಿನಿಂದ ಬೆಂಗಳೂರು ಹಾದಿ ಹಿಡಿದ ಅವರು ಆರಂಭದಲ್ಲಿ ಇಲ್ಲಿ ಅವಕಾಶಕ್ಕಾಗಿ ಸಾಕಷ್ಟು ಸೈಕಲ್‌ ತುಳಿದರು. ರಂಗಭೂಮಿಯ ನಂಟನ್ನು ಬೆನ್ನಿಗಿಟ್ಟುಕೊಂಡಿದ್ದರೂ ಉತ್ತಮ ಅವಕಾಶಗಳು ದೊರೆಯಲಿಲ್ಲ. ಆದರೆ ನಿರ್ದೇಶಕ ಪವನ್‌ ಮತ್ತು ಸಿಹಿಕಹಿ ಚಂದ್ರು ಅವರ ಗರಡಿ ಸೇರಿದ್ದೇ ಅದೃಷ್ಟ ಕೈ ಖುಲಾಯಿಸಿತು. ಹೊಸ ಸರಣಿಯಲ್ಲಿ ಮೊದಲ ಅವಕಾಶ ಗಿಟ್ಟಿಸಿದರು. ಶೋಭ್ರಾಜ್‌ ತುಳು ರಂಗಭೂಮಿಯ ಪ್ರಮುಖ ನಟ. ಊರು ಮಂಗಳೂರು. ಬಾಲ್ಯದಿಂದಲೇ ರಂಗಭೂಮಿಯತ್ತ ಆಕರ್ಷಿತರಾದವರು.ಶಾಲೆಯ ವರಾಂಡದಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಿವಿಗೊಟ್ಟು ಕೇಳುತ್ತಲೇ ಪಾತ್ರಗಳ ಆಂತರ್ಯ ಅರಿತವರು. ಶಾಲೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ತಾಲೀಮು ನಡೆಯುತ್ತಿದ್ದರೆ ಅತ್ತಲೇ ಧ್ಯಾನ. ನಂತರ ಮನಸ್ಸು ಹೊರಳಿದ್ದು ತುಳು ವೃತ್ತಿ ರಂಗಭೂಮಿ ತಂಡಗಳತ್ತ. ಮಂಗಳೂರಿನ ದೇವದಾಸ್‌ ಕಾಪಿಕಾಡ್‌ರ ‘ಚಾಪರಕಾ’ ವೃತ್ತಿ ರಂಗಭೂಮಿ ತಂಡದ ವಿದ್ಯಾರ್ಥಿಯಾಗಿ ಅವರು ಗಳಿಸಿದ ಕೌಶಲ ಅಪಾರ.

ರಂಗಭೂಮಿಯಲ್ಲೂ ಗಳಿಕೆ ಇದೆ ಎನ್ನುವುದು ಅವರಿಗೆ ಗೊತ್ತಾದದ್ದು ‘ಚಾಪರ್‌ಕಾ’ ತಂಡದಲ್ಲಿ ತೊಡಗಿಕೊಂಡ ಮೇಲೆ. ಗುಜರಾತ್‌, ಮಹಾರಾಷ್ಟ್ರ, ದುಬೈ, ಕತಾರ್‌ ಸೇರಿದಂತೆ ದೇಶ ವಿದೇಶಗಳಲ್ಲಿ ನಾಟಕ ಪ್ರದರ್ಶನ ನೀಡಿದರು. ‘ಬದುಕದ್‌ ಉರಿಂಡಾ’, ‘ಕಿವೆ ಕಿತ್ತಲ್‌’, ‘ಮೊಬೈಲ್‌ ಮಾಧವೆ’ ಸೇರಿದಂತೆ 35ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿರುವ ಅವರು ಸಾವಿರಾರು ಪ್ರದರ್ಶನಗಳನ್ನು ನೀಡಿದ್ದಾರೆ.ತುಳು ರಂಗಭೂಮಿಯಲ್ಲಿ ಗಟ್ಟಿಯಾಗಿ ಬೇರುಬಿಡುತ್ತಿರುವಾಗಲೇ ಆಕರ್ಷಿಸಿದ್ದು ಕಿರುತೆರೆ. ಕಂಡಿದ್ದು ಬೆಂಗಳೂರಿನ ಹಾದಿ. ಒಂಬತ್ತು  ವರ್ಷ ತುಳು ರಂಗಭೂಮಿಯಲ್ಲಿ ವಿಹರಿಸಿದವರು ಧಾರಾವಾಹಿಗಳಲ್ಲೂ ಅವಕಾಶ ಅರಸಿ ರಾಜಧಾನಿಯತ್ತ ಮುಖಮಾಡಿದರು. ಮೊದಲ ಬಾರಿ ಕ್ಯಾಮೆರಾಕ್ಕೆ ಮುಖ ಮಾಡಿದ್ದು ಬಿ. ಸುರೇಶ್‌ ನಿರ್ಮಾಣದ, ‘ಪ್ರೀತಿ ಪ್ರೇಮ’ ಬಿಡಿಬಿಡಿ ಪ್ರೇಮಕತೆಗಳ ಸರಣಿಯ ಒಂದು ಕಂತಿನಲ್ಲಿ. 

ನಂತರ ವಿನು ಬಳಂಜ ನಿರ್ದೇಶನದ ‘ನಿನ್ನೊಲುಮೆಯಿಂದಲೇ’ ಧಾರಾವಾಹಿಯಲ್ಲಿ ಕಾಣಿಸಿಕೊಂಡರೂ ಅದು ಮುಖ್ಯ ಪಾತ್ರ ಆಗಿರಲಿಲ್ಲ. ‘ನೂರೆಂಟು ಸುಳ್ಳು’ ಧಾರಾವಾಹಿಯ ಸಜ್ಜನ್‌ ಪಾತ್ರ ಅವರಿಗೆ ಕಿರುತೆರೆಯಲ್ಲಿ ಸ್ಥಾನ ಗಟ್ಟಿಮಾಡಿಕೊಳ್ಳಲು ನೆರವಾಯಿತು. ಮಂಗಳೂರು ಶೈಲಿಯ ಮಾತಿನಲ್ಲಿ ಹಾಸ್ಯವನ್ನು ಹರಿಸುವ ಪಾತ್ರ ಅದು.‘ಆರಂಭದಿಂದಲೂ ತುಳು ರಂಗಭೂಮಿಯಲ್ಲಿ ತೊಡಗಿದ್ದರಿಂದ ಮತ್ತು ಮಾತೃಭಾಷೆಯೂ ಅದೇ ಆಗಿದ್ದ ಕಾರಣ ಕಿರುತೆರೆಯಲ್ಲಿ ನಟನೆಗೆ ಭಾಷೆ ತೊಡಕಾಗಿತ್ತು. ತುಳು ರಂಗಭೂಮಿಯು ಬಹುತೇಕ ಹಾಸ್ಯ ನಾಟಕಗಳ ಮೇಲೆ ಕೇಂದ್ರೀಕೃತವಾಗಿದೆ. ಅದೃಷ್ಟ ಎನ್ನುವಂತೆ ಕಿರುತೆರೆಯಲ್ಲಿ ನನಗೆ ಸಿಕ್ಕ ಪೂರ್ಣ ಪ್ರಮಾಣದ ಅವಕಾಶವೂ ಹಾಸ್ಯ ಧಾರಾವಾಹಿಯದ್ದೇ. ಹಾಗಾಗಿ ನನಗೆ ಅನುಕೂಲವಾಯಿತು.ಫೈನಲ್‌ ಕಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ತೊಡಗಿರುವುದರಿಂದ ಬೇರೊಬ್ಬರು ಧಾರಾವಾಹಿಗಳಲ್ಲಿ ಕರೆಯುವುದು ಅಪರೂಪ. ತುಳು ಚಲನಚಿತ್ರಗಳಲ್ಲಿ ನಟಿಸುವ ಆಕಾಂಕ್ಷೆ ಇರುವ ಶೋಭ್ರಾಜ್ ಕನ್ನಡ ಚಿತ್ರರಂಗದತ್ತ ಮುಖ ಮಾಡದಿರಲು ನಿರ್ಧರಿಸಿದ್ದಾರೆ.  ಚಿತ್ರರಂಗವನ್ನು ಹಚ್ಚಿಕೊಂಡರೆ ಕಿರುತೆರೆಯಿಂದ ದೂರವಾಗಬೇಕಾಗುತ್ತದೆ ಎನ್ನುವ ಆತಂಕ ಅವರದ್ದು.

  -ಡಿ.ಎಂ.ಕುರ್ಕೆ ಪ್ರಶಾಂತ . ಚಿತ್ರ ಕೆ.ಎನ್‌. ನಾಗೇಶ್‌ ಕುಮಾರ್.

ಪ್ರತಿಕ್ರಿಯಿಸಿ (+)