ಸೋಮವಾರ, ಮೇ 23, 2022
30 °C

ತುಳುನಾಡ ಗರಡಿಗಳ ಮಹಾ ಸಮ್ಮೇಳನ ಸಮಾಪನನಂಬಿಕೆ ಶಿಥಿಲವಾದರೆ ಸರ್ವನಾಶ: ಬನ್ನಂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿಂಗಳೆ (ಹೆಬ್ರಿ): ನಂಬಿಕೆ ಶಿಥಿಲವಾದಾಗ ನಮ್ಮಲ್ಲಿ ಎಲ್ಲವೂ ನಾಶವಾಗುತ್ತದೆ ಎಂದು ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ಹೇಳಿದರು.ಹೆಬ್ರಿ ಸಮೀಪದ ತಿಂಗಳೆ ಗರಡಿಯಲ್ಲಿ ಮಂಗಳವಾರ ನಡೆದ ತುಳುನಾಡ ಗರಡಿಗಳ ಮಹಾಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.‘ಮನುಷ್ಯ ತಪ್ಪು ಮಾಡಿದಾಗ ದೈವ ಎಚ್ಚರಿಸುತ್ತದೆ. ಆದರೆ ನಂಬಿಕೆ ನಂಬಿಕೆ ಶಿಥಿಲವಾದಾಗ ನಮ್ಮಲ್ಲಿ ಎಲ್ಲವೂ ನಾಶವಾಗುತ್ತದೆ’ ಎಂದು ಮಾರ್ಮಿಕವಾಗಿ ನುಡಿದರು.’ದೇಶದಲ್ಲಿ ಬಹು ಸಂಖ್ಯಾತರೆಂದರೆ ಅಪರಾಧ ಎಂಬಷ್ಟರ ಮಟ್ಟಿಗೆ ದೇಶದಲ್ಲಿ ಅಲ್ಪಸಂಖ್ಯಾತರ ಓಲೈಕೆಯಾಗುತ್ತಿದೆ. ನಮ್ಮ ಮಕ್ಕಳಿಗೆ ವಿಶೇಷ ತರಬೇತಿ ನೀಡಿದಾಗ ಮಾತ್ರ ಕೋಟಿ ಚೆನ್ನಯರಿಗೆ ಖುಷಿಯಾಗುತ್ತದೆ. ಜಾತಿ ಜಾತಿ ಎಂದು ಜಗಳವಾಡುತ್ತಿದ್ದರೆ ಪಾಕಿಸ್ಥಾನದವರು ಭಾರತವನ್ನು ಆಳುತ್ತಾರೆ. ಹಾಗಾಗಿ ನಮ್ಮ ಸಂಸ್ಕೃತಿಯನ್ನು ಉಳಿಸಬೇಕಾಗಿದೆ’ ಎಂದರು.‘ಬ್ರಾಹ್ಮಣರಿಗೆ, ಪುರೋಹಿತರಿಗೆ ಹೆಣ್ಣು ಸಿಗುವುದಿಲ್ಲ, ಸಿನಿಮಾದವರು ಜುಟ್ಟು ಬಿಟ್ಟರೆ ಅದು ಫ್ಯಾಷನ್ ಆಗುತ್ತದೆ. ಆದರೆ ಅವರನ್ನು ಹುಡುಗಿಯರು ಮದುವೆಯಾಗುತ್ತಾರೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು.ಕಡಂದಲೆ ಪಾಲಡ್ಕ ಬ್ರಹ್ಮಬೈದರ್ಕಳ ಗರಡಿ ಆಡಳಿತದಾರ ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಕ್ಷೇತ್ರ ಪಡ್ಯಾರಬೆಟ್ಟು ಆಡಳಿತದಾರ ಜೀವಂದರ್ ಕುಮಾರ್, ಬನ್ನಂಜೆ ಬಾಬು ಅಮೀನ್, ದಾಮೋದರ್ ಕಲ್ಮಾಡಿ, ಗಂಗಯ್ಯ ಪರವ ಮತ್ತು ಪದ್ದ ಶೇರಿಗಾರ ಅವರನ್ನು ಸನ್ಮಾನಿಸಲಾಯಿತು.ಗರಡಿಯ ಇತಿಹಾಸ ಪರಂಪರೆ ಕುರಿತು ಪ್ರೊ. ತುಕಾರಾಮ ಪೂಜಾರಿ, ಗರಡಿ ಸಾಂಸ್ಕೃತಿಕ ಕೊಡುಗೆ ಕುರಿತು ಕೆ.ಎಲ್.ಕುಂಡಂತಾಯ, ಗರಡಿ ವ್ಯಾಯಾಮ ಶಾಲೆ- ಆರಾಧನಾ ಕೇಂದ್ರದ ಬಗ್ಗೆ ಪ್ರೊ. ಮೋಹನ್ ಕೋಟ್ಯಾನ್, ಗರಡಿ ನೀತಿಸಂಹಿತೆ ಬಗ್ಗೆ ಬನ್ನಂಜೆ ಬಾಬು ಅಮೀನ್, ಗರಡಿ ಆಡಳಿತ ವ್ಯವಸ್ಥೆ ಕುರಿತು ಮುದ್ದು ಮೂಡುಬೆಳ್ಳೆ ಹಾಗೂ ಗರಡಿ ಭವಿಷ್ಯತ್ ಚಿಂತನೆ ಕುರಿತು ಪಡುಬಿದ್ರಿ ಡಾ.ವೈ.ಎನ್.ಶೆಟ್ಟಿ ಮಾತನಾಡಿದರು.ಕಂಕನಾಡಿ ಬ್ರಹ್ಮಬೈದರ್ಕಳ ಗರಡಿಯ ಆಡಳಿತದಾರ ಚಿತ್ತರಂಜನ್, ಏರ್ಯ ಲಕ್ಷ್ಮಿನಾರಾಯಣ ಆಳ್ವ, ಸಮ್ಮೇಳನದ ಸಂಚಾಲಕ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಅಧ್ಯಕ್ಷ ಸುನೀಲ್ ಕುಮಾರ್, ಸಲಹೆಗಾರ ಅಂಬಾತನಯ ಮುದ್ರಾಡಿ, ನೀರೆ ಗರಡಿಯ ಮೋಕ್ತೆಸರ ನೀರೆ ಕೃಷ್ಣ ಶೆಟ್ಟಿ, ಸೀತಾನದಿ ವಿಠಲ ಶೆಟ್ಟಿ, ರಾಮಕೃಷ್ಣ ಆಚಾರ್ಯ ಇದ್ದರು. ಸುನೀಲ್ ಕುಮಾರ್, ಅಂಬಾತನಯ ಮುದ್ರಾಡಿ ಮತ್ತು ಬನ್ನಂಜೆ ಗೋವಿಂದಾಚಾರ್ಯ ಅವರನ್ನು ಸನ್ಮಾನಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.