ಗುರುವಾರ , ಮೇ 13, 2021
34 °C

ತುಳುವರ ಸಂಜೀವಿನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬದುಕು ಕಟ್ಟಿಕೊಳ್ಳುವ ಹವಣಿಕೆಯಲ್ಲಿ ಹಳ್ಳಿ ಬಿಟ್ಟು ನಗರ ಸೇರುವ ಬಹುತೇಕ ಮಂದಿ ನಗರದಲ್ಲೇ ನೆಲೆಯೂರುತ್ತಾರೆ, ಊರು ಮರೆಯುತ್ತಾರೆ. ಇದಕ್ಕೆ ಬೆಂಗಳೂರು ಹೊರತೇನಲ್ಲ. ಬೆಂಗಳೂರೀಕರಣದ ಮೋಹನ ಮುರಲಿಯ ಸೆಳೆತಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದಕ್ಕೆ ಅಪವಾದ `ಸಂಜೀವಿನಿ~ ಹುಡುಗರು.ಉದ್ಯೋಗ ಅರಸಿ ಬೆಂಗಳೂರಿಗೆ ಬಂದ ಕಾರ್ಕಳ, ಉಡುಪಿ, ಮಂಗಳೂರಿನ ತುಳುನಾಡ ಹುಡುಗರಿಗೆ ತಮ್ಮ ನೆಲದ ನೆನಪುಗಳು ಮಾತ್ರ ಮಾಸಲಿಲ್ಲ. ಕಾಡಿನ ಹಾದಿಯಲ್ಲಿ ನಾಲ್ಕಾರು ಕಿಲೋಮೀಟರ್ ನಡೆದು ಶಾಲೆಗೆ ಹೋಗಿದ್ದ ದಿನಗಳು, ತುಸು ಜ್ವರವೇರಿದರೂ ಅಮ್ಮ ಪರಿತಪಿಸುತ್ತಿದ್ದುದು ಮನದಲ್ಲಿ ಅಚ್ಚಳಿಯದೆ ಉಳಿದಿತ್ತು. ಆ ಕಷ್ಟದ ದಿನಗಳ ನೆನಪುಗಳೇ ಬೆಂಗಳೂರಿನಲ್ಲಿ `ಸಂಜೀವಿನಿ ಸೋಶಿಯಲ್ ವೆಲ್‌ಫೇರ್ ಟ್ರಸ್ಟ್~ ಹುಟ್ಟಿಗೆ ಕಾರಣವಾಗಿದೆ.ಕಾರ್ಕಳದ ಭುವನೇಂದ್ರ ಕಾಲೇಜು `ಸಂಜೀವಿನಿ~ಯ ಹುಟ್ಟಿನ ಮೂಲ. ಭುವನೇಂದ್ರ ಕಾಲೇಜಿನಲ್ಲಿ ಓದು ಮುಗಿಸಿ, ಬೆಂಗಳೂರಿನ ಹಾದಿ ಹಿಡಿದವರು ಕಾರ್ಕಳ ತಾಲ್ಲೂಕಿನ ಯೋಗೇಶ್ ಹೆಗ್ಡೆ, ಅರವಿಂದ್, ಸುಮಿತ್, ವಿಕಾಸ್‌ಹೆಗ್ಡೆ, ವಿವೇಕ್, ಸಂದೀಪ್, ಶಶಿಧರ್, ಪವಿತ್ರೇಶ್ ಮತ್ತು ವೀರೇಂದ್ರ. ಇವರೆಲ್ಲ ಭುವನೇಂದ್ರ ಮೂಲದವರೇ. ರಾಜಧಾನಿಯಲ್ಲಿ ಉದ್ಯೋಗ ಸಿಕ್ಕಮೇಲೆ ಈ ಗೆಳೆಯರಿಗೆ ಕಾಡಿದ್ದು ತಮ್ಮೂರಿನ ನೆನಪುಗಳು. ತಮ್ಮ ಭಾಗದ ಹಳ್ಳಿಗಾಡಿನ ಬಡಮಕ್ಕಳ ಶಿಕ್ಷಣ ಮತ್ತು ಆರೋಗ್ಯಕ್ಕೆ ಏನನ್ನಾದರೂ ಮಾಡಬೇಕು ಎಂಬ ಯೋಚನೆ ಹುಟ್ಟಿತು.ತಮ್ಮ ಹಂಬಲಕ್ಕೆ ಮುನ್ನುಡಿಯಾಗಿ ಈ ಗೆಳೆಯರು ಆದಷ್ಟೂ ಕಾಸು ಕೂಡಿಸಿದರು. ನಂತರ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಪರಿಚಿತ ತುಳುನಾಡ ಹುಡುಗರನ್ನು ಸಂಪರ್ಕಿಸಿದರು. ತಮ್ಮ ಆಲೋಚನೆ ಹರಿಬಿಟ್ಟರು. ಮೂರ‌್ನಾಲ್ಕು ತಿಂಗಳ ನಂತರ ತಂಡದ ಸಂಖ್ಯೆ 40 ದಾಟಿತು. `ಸಂಜೀವಿನಿ~ಯ ವಲಯ ವಿಸ್ತಾರವಾಗಿ ಕಾರ್ಕಳ ದಾಟಿತು. ಉಡುಪಿ, ಮಂಗಳೂರಿನಿಂದ ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದವರನ್ನೂ ಒಗ್ಗೂಡಿಸಿತು. ಬದುಕು ಅರಸಿ ಮುಂಬೈಗೆ ತೆರಳಿದ್ದ ತುಳುನಾಡಿನ ಮಂದಿಯೂ ಸಾಥ್ ನೀಡಿದರು.ಪ್ರಸ್ತುತ `ಸಂಜೀವಿನಿ~ ಸಂಸ್ಥೆಯಲ್ಲಿ ನೂರಕ್ಕೂ ಹೆಚ್ಚಿನ ಸದಸ್ಯರಿದ್ದಾರೆ. ಪ್ರತಿಯೊಬ್ಬರು 100 ರೂ. ಮೂಲಧನ ಕೊಟ್ಟಿದ್ದು, ಅದೇ ಸಾಮಾಜಿಕ ಕೆಲಸಕ್ಕೆ ಮೂಲ ಬಂಡವಾಳ. ಬೆಂಗಳೂರಿನ ಐಟಿ ಕಂಪೆನಿ, ಬ್ಯಾಂಕ್, ವ್ಯಾಪಾರ, ಹೋಟೆಲ್ ಹೀಗೆ ವಿವಿಧ ವಲಯಗಳಲ್ಲಿ ಕೆಲಸ ಮಡುತ್ತಿರುವ ಅನೇಕ ತುಳು ಹುಡುಗರು ಸಂಜೀವಿನಿಯ ಸದಸ್ಯರು. ಎಲ್ಲರೂ 25ರಿಂದ 30 ವರ್ಷ ವಯೋಮಾನದವರು. ಬಡ ಪ್ರತಿಭಾವಂತ ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕೆ ನೆರವು, ಅಂಗವಿಕಲರಿಗೆ ಮತ್ತು ಗ್ರಾಮೀಣ ಬಡ ಕ್ರೀಡಾಪಟುಗಳಿಗೆ ಸಹಾಯ ಮಾಡುವುದು ಇವರ ಮೂಲ ಉದ್ದೇಶ. ಕಾರ್ಕಳದ ಎಳ್ಳಾರೆಯ ರಮೇಶ್‌ನಾಯ್ಕ ಎಂಬುವವರ ಕ್ಯಾನ್ಸರ್ ಪೀಡಿತ ಮಗುವಿನ ಚಿಕಿತ್ಸೆಗೆ ಸಂಜೀವಿನಿ ನೆರವಾಗಿದೆ.ಕ್ಯಾನ್ಸರ್‌ಗೆ ತುತ್ತಾಗಿ ಚಿಕಿತ್ಸೆಗೆಂದು ಬೆಂಗಳೂರಿಗೆ ಬಂದಿದ್ದ ಮುನಿಯಾಲ್‌ನ ನಿಶಿತಾ ಶೆಟ್ಟಿಯ ರಕ್ಷಣೆಯ ಜವಾಬ್ದಾರಿ ಹೊತ್ತು, ದಿನಕ್ಕೊಬ್ಬರಂತೆ ಟ್ರಸ್ಟ್‌ನ ಸದಸ್ಯರು ಕಿದ್ವಾಯಿ ಆಸ್ಪತ್ರೆಯಲ್ಲಿ ಉಳಿದು ಆಕೆಯ ಆರೋಗ್ಯವನ್ನು ವಿಚಾರಿಸಿಕೊಂಡು, ಚಿಕಿತ್ಸೆಗೆ ನೆರವು ನೀಡಿದರು.ಉದ್ಯೋಗ ಹುಡುಕಿಕೊಂಡು ಬೆಂಗಳೂರಿಗೆ ಬರುವ ತುಳುನಾಡ ಬಡ ಹುಡುಗರನ್ನು ತಮ್ಮಲ್ಲಿ ಉಳಿಸಿಕೊಂಡು ಉದ್ಯೋಗ ದೊರೆಯುವರೆಗೂ ಅವರ ಊಟ ಮತ್ತು ವಸತಿ ವ್ಯವಸ್ಥೆಯನ್ನು `ಸಂಜೀವಿಸಿ~ ನಿಭಾಯಿಸಿದ ನಿದರ್ಶನಗಳಿವೆ. ಪ್ರತಿ ತಿಂಗಳು ಸದಸ್ಯರು ಸಭೆ ಸೇರಿ ನೆರವಿನ ಕುರಿತು ತೀರ್ಮಾನಿಸುತ್ತಾರೆ.ನಾವು ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕಗಳಿಸಿದ ಬಡ ಮಕ್ಕಳಿಗೆ ನೆರವು ನೀಡುತ್ತಿದ್ದೇವೆ. ಪ್ರಸಕ್ತ ವರ್ಷ ಕಾರ್ಕಳದಲ್ಲಿ ಬಡ ಮಕ್ಕಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣ ನೀಡುವ ಗುರಿ ಇದೆ. ಮುಂದಿನ ದಿನಗಳಲ್ಲಿ ಸಂಜೀವಿನಿ ಕಲಾತಂಡವನ್ನು ಕಟ್ಟಿ ಆ ಮೂಲಕ, ಸಂಗ್ರಹವಾಗುವ ಹಣವನ್ನು ಸಮಾಜಮುಖಿ ಕೆಲಸಕ್ಕೆ ಬಳಸುವುದು ತಮ್ಮ  ಉದ್ದೇಶ ಎನ್ನುತ್ತಾರೆ ಸಂಸ್ಥೆಯ ಕಾರ್ಯದರ್ಶಿ ಶಶಿಧರ್ ಕುಂಟೇಬೆಟ್ಟು.ಕಳೆದ ಮಾರ್ಚ್‌ನಲ್ಲಿ ನಗರದಲ್ಲಿ ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಂಬೈನ ಪೊಲೀಸ್ ಅಧಿಕಾರಿ ದಯಾನಾಯಕ್ ಸೇರಿದಂತೆ ನಗರದಲ್ಲಿ ನೆಲೆಸಿರುವ ತುಳುನಾಡಿಗರು ಬಂದಿದ್ದರು. ಅವರೂ ಸಂಜೀವಿನಿಯೊಂದಿಗೆ ಕೈ ಜೋಡಿಸಲು ಮುಂದಾಗಿದ್ದಾರೆ.ಹಳ್ಳಿಯಲ್ಲಿರುವವರು ತಿಂಗಳ ಸಭೆಗೆ ಹಾಜರಾಗುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಕೇವಲ ಬೆಂಗಳೂರಿನಲ್ಲಿ ವೃತ್ತಿಯಲ್ಲಿರುವವರನ್ನು ಮಾತ್ರ ಇದಕ್ಕೆ ಸದಸ್ಯರನ್ನಾಗಿ ಮಾಡಿಕೊಳ್ಳಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.