ಭಾನುವಾರ, ಮೇ 22, 2022
21 °C

ತೃಣಮೂಲ ಏಕಪಕ್ಷೀಯ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪಶ್ಚಿಮ ಬಂಗಾಳ ವಿಧಾನಸಭೆಗೆ ನಡೆಯಲಿರುವ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿ ಏಕಪಕ್ಷೀಯ ನಿರ್ಧಾರ ಕೈಗೊಂಡಿರುವ ಮಿತ್ರಪಕ್ಷ ತೃಣಮೂಲ ಕಾಂಗ್ರೆಸ್‌ನೊಂದಿಗಿನ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಲು ಕಾಂಗ್ರೆಸ್ ಶನಿವಾರ ಹೆಚ್ಚಿನ ಕಾಲಾವಕಾಶ ಕೋರಿದೆ. ಇದೊಂದು ಹೊಸ ಬೆಳವಣಿಗೆಯಾಗಿದ್ದು, ಈ ಬಗ್ಗೆ ಪಕ್ಷದ ಹೈಕಮಾಂಡ್ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ಶಕೀಲ್ ಅಹಮದ್ ಪ್ರತಿಕ್ರಿಯಿಸಿದ್ದಾರೆ.ಸಿಪಿಎಂ- ಎಐಎಡಿಎಂಕೆ ಹೊಂದಾಣಿಕೆ

ಚೆನ್ನೈ (ಐಎಎನ್‌ಎಸ್):  ತಮಿಳುನಾಡು ವಿಧಾನಸಭೆಗೆ 12 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಸಿಪಿಎಂಗೆ ಎಐಎಡಿಎಂಕೆ ಒಪ್ಪಿಗೆ ನೀಡಿದೆ. ಶುಕ್ರವಾರ ತಡರಾತ್ರಿವರೆಗೆ ಸಮಾಲೋಚನೆ ನಡೆಸಿದ ಬಳಿಕ ಅದು ಈ ನಿರ್ಧಾರಕ್ಕೆ ಬಂದಿದೆ. ಆಡಳಿತಾರೂಢ ಡಿಎಂಕೆಯನ್ನು ಸೋಲಿಸುವುದೇ ನಮ್ಮ ಮುಖ್ಯ ಉದ್ದೇಶ ಎಂದು ಸಿಪಿಎಂ ಮುಖಂಡ ಟಿ.ಕೆ.ರಂಗರಾಜನ್ ತಿಳಿಸಿದ್ದಾರೆ.ಡಿಎಂಡಿಕೆ ಜೊತೆ ಚರ್ಚೆ

160 ಕ್ಷೇತ್ರಗಳಿಗೆ ಏಕಪಕ್ಷೀಯವಾಗಿ ತನ್ನ ಪಕ್ಷದ ಅಭ್ಯರ್ಥಿಗಳನ್ನು ಘೋಷಿಸಿರುವುದರಿಂದ ಅಸಮಾಧಾನಗೊಂಡಿರುವ ಮಿತ್ರಪಕ್ಷಗಳನ್ನು ಸಮಾಧಾನಗೊಳಿಸಲು ಎಐಎಡಿಎಂಕೆ ಮುಂದಾಗಿದೆ. 234 ವಿಧಾನಸಭಾ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಶನಿವಾರ ಆರಂಭಗೊಂಡಿದ್ದರೂ ಡಿಎಂಡಿಕೆ ಜೊತೆ ಎಐಎಡಿಎಂಕೆ ಸ್ಥಾನ ಹೊಂದಾಣಿಕೆಗೆ ಸಂಬಂಧಿಸಿದಂತೆ ಮಾತುಕತೆ ಮುಂದುವರಿಸಿದೆ. ಡಿಎಂಡಿಕೆ 41 ಕ್ಷೇತ್ರಗಳಲ್ಲಿ ಸ್ಪರ್ಧಿಸ ಬಯಸಿದೆ.ಮಾರ್ಚ್ 23ರಿಂದ ಡಿಎಂಕೆ ಪ್ರಚಾರ

ಡಿಎಂಕೆ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಎಂ.ಕರುಣಾನಿಧಿ ಇದೇ 23ರಂದು ಸ್ವಕ್ಷೇತ್ರ ತಿರುವರೂರ್‌ನಿಂದ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ. ಅದೇ ಕ್ಷೇತ್ರದಿಂದ ಪುನರಾಯ್ಕೆ ಬಯಸಿ ಮರುದಿನ ನಾಮಪತ್ರ ಸಲ್ಲಿಸಲಿದ್ದಾರೆ.ಕರುಣಾನಿಧಿ ಅವರಿಗೆ ಇದು ಕೊನೆಯ ಚುನಾವಣೆ ಎಂದು ಹೇಳಲಾಗುತ್ತಿದೆ. ಸದ್ಯ ಅವರು ಚೆಪಾಕ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಒಟ್ಟು 234 ವಿಧಾನಸಭಾ ಕ್ಷೇತ್ರಗಳ ಪೈಕಿ 119ರಲ್ಲಿ ಡಿಎಂಕೆ ಸ್ಪರ್ಧಿಸುತ್ತಿದ್ದು, ಕಾಂಗ್ರೆಸ್‌ಗೆ 63 ಹಾಗೂ ಇತರ ಮಿತ್ರಪಕ್ಷಗಳಿಗೆ ಮಿಕ್ಕ ಸ್ಥಾನಗಳನ್ನು ಬಿಟ್ಟುಕೊಟ್ಟಿದೆ.ಸಿಪಿಎಂ ಹೊಸ ಪಟ್ಟಿ

ತಿರುವನಂತಪುರ: ಕೇರಳ ವಿಧಾನಸಭಾ ಚುನಾವಣೆಗೆ ಸಿಪಿಎಂ ನೇತೃತ್ವದ ಎಡಪಂಥೀಯ ಪ್ರಜಾಸತ್ತಾತ್ಮಕ ಒಕ್ಕೂಟ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ಸೇರಿದಂತೆ 54 ಹಾಲಿ ಶಾಸಕರ ಹೆಸರನ್ನು ಶನಿವಾರ ಬಿಡುಗಡೆಗೊಳಿಸಿರುವ ನೂತನ ಪಟ್ಟಿಯಲ್ಲಿ ಸೇರಿಸಿದೆ. ಇದರಲ್ಲಿ 8 ಸಚಿವರು ಮತ್ತು 30 ಹೊಸ ಮುಖಗಳು ಸೇರಿವೆ. 87 ವರ್ಷದ ಅಚ್ಯುತಾನಂದನ್ ಅವರಿಗೆ ಆರೋಗ್ಯ ಸರಿಯಿಲ್ಲದ ಕಾರಣ ಪಕ್ಷದ ರಾಜ್ಯ ಸಮಿತಿ ಅವರಿಗೆ ಟಿಕೆಟ್ ನೀಡಲು ನಿರಾಕರಿಸಿತ್ತು. ಕೇಂದ್ರ ನಾಯಕತ್ವ ಮಧ್ಯಪ್ರವೇಶಿಸಿದ ನಂತರ ಅವರಿಗೆ ಮತ್ತೆ ಟಿಕೆಟ್ ನೀಡಲಾಗಿದೆ.ಅಳಗಿರಿಗೆ ಚುನಾವಣಾ ಆಯೋಗದ ಎಚ್ಚರಿಕೆ

ನವದೆಹಲಿ (ಪಿಟಿಐ): ತಮಿಳುನಾಡಿನ ವಿಧಾನಸಭಾ ಚುನಾವಣೆ ನಡೆಯಲಿರುವ ಸ್ಥಳಗಳಿಗೆ ಇತ್ತೀಚೆಗೆ ಭೇಟಿ ನೀಡುವ ಮೂಲಕ ನೀತಿಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರವಾಸದ ವೆಚ್ಚವನ್ನು ಸರ್ಕಾರಕ್ಕೆ ಮರಳಿಸುವಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವ ಎಂ.ಕೆ.ಅಳಗಿರಿ ಅವರಿಗೆ ಚುನಾವಣಾ ಆಯೋಗ ಸೂಚಿಸಿದೆ.ಇನ್ನು ಮುಂದೆ ಜಾಗ್ರತೆಯಿಂದ ಇರಬೇಕು ಎಂದು ಎಚ್ಚರಿಕೆ ನೀಡಿರುವ ಆಯೋಗವು, ವಿಮಾನಯಾನ ಮತ್ತು ಇತರ ಬಾಬ್ತಿಗೆ ವೆಚ್ಚ ಮಾಡಿರುವ ಹಣವನ್ನು ಕೇಂದ್ರ ಸರ್ಕಾರಕ್ಕೆ ಮರಳಿಸಬೇಕು ಎಂದು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.