ಭಾನುವಾರ, ಜೂನ್ 13, 2021
22 °C

ತೃತೀಯ ರಂಗ ದೇಶಕ್ಕೆ ದುಬಾರಿ: ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ತೃತೀಯ ರಂಗದ ಪ್ರಯೋಗ ದೇಶಕ್ಕೆ ದುಬಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ಮತ್ತು ಜನರ ಆಶೋತ್ತರಗಳನ್ನು ಈಡೇರಿಸುವ ಸರ್ಕಾರ ದೇಶಕ್ಕೆ ಬೇಕಾಗಿದೆ ಎಂದು ಹೇಳಿದ್ದಾರೆ.ಕಾಂಗ್ರೆಸ್ ವಿರೋಧಿ ರಾಜಕಾರಣದ ಹೆಸರಿನಲ್ಲಿ ಹಲವು ಪಕ್ಷಗಳು ಜೊತೆಯಾಗಿವೆ. ರಾಜಕೀಯ ಅವಕಾಶವಾದಿತನದಿಂದಾಗಿ ಒಂದಲ್ಲ ಒಂದು ಸಂದರ್ಭದಲ್ಲಿ ಈ ಪಕ್ಷಗಳು ಕಾಂಗ್ರೆಸ್‌ ಜೊತೆ ಕೈಜೋಡಿಸಿವೆ ಎಂದು ಹಿಂದಿ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮೋದಿ ತೃತೀಯ ರಂಗದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ ವಿರುದ್ಧ ಆಕ್ರೋಶ ಇರುವಂತಹ ಸಂದರ್ಭದಲ್ಲಿ ತೃತೀಯ ರಂಗ ರಚನೆ ಮೂಲಕ ಈ ಪಕ್ಷಗಳು ಕಾಂಗ್ರೆಸ್‌ಗೆ ನೆರವಾಗುತ್ತಿವೆ ಎಂದಿದ್ದಾರೆ.ಭ್ರಷ್ಟಾಚಾರವನ್ನು ಬೇರು ಸಹಿತ ಕಿತ್ತು ಹಾಕುವ ಭರವಸೆಯನ್ನು ಮೋದಿ ನೀಡಿದ್ದಾರೆ. ದೇಶದ ಪ್ರಮುಖ ನಾಯಕರೇ ಭ್ರಷ್ಟಾಚಾರದಲ್ಲಿ ತೊಡಗಿದ್ದರೆ ಅಥವಾ ಅದಕ್ಕೆ ಮೌನ ಸಮ್ಮತಿ ನೀಡಿದರೆ ಭ್ರಷ್ಟಾಚಾರ­ವನ್ನು ತಡೆಯುವವರು ಯಾರು ಎಂದು ಪ್ರಶ್ನಿಸಿದ್ದಾರೆ. ವಿರೋಧಿಗಳ ವಿರುದ್ಧ ವೈಯಕ್ತಿಕ ವಾಗ್ದಾಳಿ ನಡೆಸುತ್ತಿದ್ದಾರೆ ಎಂದು ಅವರ ವಿರುದ್ಧ ಇರುವ ಆರೋಪವನ್ನು ಅಲ್ಲಗಳೆದಿದ್ದಾರೆ. ತಮ್ಮ ವಿರುದ್ಧವೇ ವೈಯ­ಕ್ತಿಕ ದಾಳಿ ನಡೆಸಲಾಗಿದೆ ಎಂದು ಹೇಳಿದ್ದಾರೆ.ಗುಜರಾತ್‌ ಮಾದರಿ ಉತ್ತಮವಾಗಿರುವುದರಿಂದಲೇ ಅಲ್ಲಿನ ಜನ ತಮ್ಮನ್ನು ಮೂರು ಬಾರಿ ಆರಿಸಿದ್ದಾರೆ ಎಂದರು. ತ್ವರಿತ ಪ್ರಗತಿಯ ಈ ಮಾದರಿಯನ್ನು ಇಡೀ ದೇಶಕ್ಕೆ ವಿಸ್ತರಿಸಲಾಗುವುದು ಎಂದೂ ಮೋದಿ ಹೇಳಿದರು.ಎಸ್ಪಿ, ಬಿಎಸ್ಪಿ, ಕಾಂಗ್ರೆಸ್ ದಾರಿತಪ್ಪಿಸುತ್ತಿವೆ’

ಲಖನೌ (ಪಿಟಿಐ): ತ
ಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಎಸ್ಪಿ, ಬಿಎಸ್ಪಿ ಮತ್ತು ಕಾಂಗ್ರೆಸ್ ಪಕ್ಷಗಳು ಜಾತ್ಯತೀತ ಸೋಗಿನಲ್ಲಿ  ಜನರನ್ನು ದಾರಿ ತಪ್ಪಿಸುತ್ತಿವೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.‘ಚುನಾವಣೆ ಕಾವು ಇನ್ನೂ ಏರಿಲ್ಲವಾದರೂ ಬಿಜೆಪಿ ಪರ ಅಲೆಯಿ­ರುವುದರಿಂದ ಎಲ್ಲರ ವಿನಾಶ (ಎಸ್ಪಿ,ಬಿಎಸ್ಪಿ,ಕಾಂಗ್ರೆಸ್) ಖಂಡಿತ. ಇವರೆಲ್ಲ ವೋಟ್ ಬ್ಯಾಂಕಿಗಾಗಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ’ ಎಂದು ಲಖನೌನಲ್ಲಿ  ಭಾನುವಾರ ಆಯೋಜಿಸಲಾಗಿದ್ದ ಬೃಹತ್ ರ್‍ಯಾಲಿಯಲ್ಲಿ ಅವರು ಹೇಳಿದರು.ಕೋಮು ಗಲಭೆ ವಿಷಯದಲ್ಲಿ ಎಸ್ಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಉತ್ತರಪ್ರದೇಶದಲ್ಲಿ ಏಕೆ ಇಷ್ಟೊಂದು ದಂಗೆಗಳು ನಡೆಯುತ್ತಿವೆ ಎಂಬ ಬಗ್ಗೆ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ವಿವರಿಸಲಿ ಎಂದರು. ‘ನಿಮ್ಮ ಮಗನ (ಅಖಿಲೇಶ್) ಆಡಳಿತದಲ್ಲಿ ಉತ್ತರ ಪ್ರದೇಶದಲ್ಲಿ ಕಳೆದ ಒಂದು ವರ್ಷದಲ್ಲಿ 150ಕ್ಕೂ ಅಧಿಕ ದಂಗೆಗಳಾಗಿವೆ, ಅದೇ ಗುಜರಾತಿನಲ್ಲಿ ಕಳೆದ 10 ವರ್ಷಗಳಲ್ಲಿ ಒಂದೇ ಒಂದು ದಂಗೆ ನಡೆದಿಲ್ಲ. ಕರ್ಫ್ಯೂ ಕೂಡ ವಿಧಿಸಿಲ್ಲ. ಅಭಿವೃದ್ಧಿ ವಿಷಯದಲ್ಲಿ ಗುಜರಾತ್ ಜತೆ ಉತ್ತರಪ್ರದೇಶವನ್ನು ಹೋಲಿಸಬೇಡಿ’ ಎಂದು ಅವರು ಹೇಳಿದರು.ಹಣದ ಮೂಲ ಪ್ರಶ್ನಿಸಿದ ಕಾಂಗ್ರೆಸ್‌

ಲಖನೌ (ಪಿಟಿಐ)
: ಉತ್ತರ ಪ್ರದೇಶ ಮತ್ತು ದೇಶದ ಇತರ ಭಾಗಗಳಲ್ಲಿ ಮೋದಿ ಅವರು ನಡೆಸುತ್ತಿರುವ ‘ವಿಜಯ ಶಂಖನಾದ’ ಸಮಾವೇಶಗಳಿಗೆ ಖರ್ಚು ಮಾಡಲಾಗುವ ಹಣದ ಮೂಲ ಯಾವುದು ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.ಲಖನೌ ಸಮಾವೇಶಕ್ಕೆ ಜನರನ್ನು ಕರೆತರಲು 29 ರೈಲು­ಗಳನ್ನು ವ್ಯವಸ್ಥೆ ಮಾಡಲಾಗಿದೆ. ಇದಕ್ಕೇ ₨ ಐದು ಕೋಟಿ ವೆಚ್ಚ­ವಾಗುತ್ತದೆ. ಇದಲ್ಲದೆ ಐದು ಸಾವಿರ ಬಸ್‌ಗಳು, 15 ಸಾವಿರ ಜೀಪ್‌­ಗಳು, ವಸತಿ, ಆಹಾರ ವ್ಯವಸ್ಥೆ, ಅಲಂಕಾರ ಮುಂತಾ­ದವುಗಳ ಒಟ್ಟು ವೆಚ್ಚ ಸುಮಾರು ₨ 40 ಕೋಟಿ ಆಗಬಹುದು ಎಂದು ಕಾಂಗ್ರೆಸ್‌ ಮುಖಂಡ ಅಖಿಲೇಶ್‌ ಪ್ರತಾಪ್‌ ಸಿಂಗ್‌ ಆರೋಪಿಸಿದ್ದಾರೆ.ಉತ್ತರ ಪ್ರದೇಶದಲ್ಲಿ ಎಂಟು ಸಮಾವೇಶ ನಡೆಸಲಾಗಿದೆ. ₨ 320 ಕೋಟಿಗೂ ಅಧಿಕ ವೆಚ್ಚ ಮಾಡಲಾಗಿದೆ. ದೇಶದಾದ್ಯಂತ ಇಂತಹ ಸಮಾವೇಶಗಳಿಗೆ ಎಷ್ಟು ಖರ್ಚು ಮಾಡಲಾಗಿದೆ ಎಂಬುದನ್ನು ಬಿಜೆಪಿ ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇದು ಹಣ ಬಲದ ಪ್ರದರ್ಶನ ಎಂದು ಸಿಂಗ್‌ ಟೀಕಿಸಿದ್ದಾರೆ.  ಇಲ್ಲಿನ ರಮಾಬಾಯಿ ಅಂಬೇಡ್ಕರ್‌ ಮೈದಾನದಲ್ಲಿ ಮೋದಿ ಸಮಾವೇಶಕ್ಕೆ ಬಿಜೆಪಿ ಭಾರಿ ಸಿದ್ಧತೆಗಳನ್ನು ಮಾಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.