ಶುಕ್ರವಾರ, ಜೂನ್ 25, 2021
27 °C

ತೃತೀಯ ರಂಗ ರಚನೆ ಅಪ್ರಸ್ತುತ: ಕೆ.ಸುರೇಂದ್ರನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಸರಗೋಡು: ಬರುವ ಲೋಕಸಭಾ ಚುನಾವಣೆ­ಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರ ದೂಳೀಪಟವಾಗಲಿದ್ದು, ತೃತೀಯ ರಂಗ ರಚನೆ ಅಪ್ರಸ್ತುತ­ವಾ­ಗಿದೆ ಎಂದು  ಕಾಸರಗೋಡು ಲೋಕ­ಸಭಾ ಕ್ಷೇತ್ರದ ಅಭ್ಯರ್ಥಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಸುರೇಂದ್ರನ್ ಅಭಿಪ್ರಾಯ ಪಟ್ಟರು.ಕಾಸರಗೋಡು ಪ್ರೆಸ್‌ಕ್ಲಬ್ ಇತ್ತೀ­ಚೆಗೆ ಏರ್ಪ­ಡಿಸಿದ ಚುನಾವಣಾ ಸಂವಾ­ದ ಕಾರ್ಯಕ್ರಮದಲ್ಲಿ ಅವರು ಮಾತ­ನಾಡಿದರು.

ಕಾಂಗ್ರೆಸ್‌ನಲ್ಲಿ ಕಾಸರಗೋಡು ಲೋಕ­-­ಸಭೆ ಅಭ್ಯ­ರ್ಥಿ­ಯನ್ನು ಮುಸ್ಲಿಂ ಲೀಗ್ ನಿರ್ಧರಿಸುತ್ತದೆ. ಅದರಂತೆ ಟಿ. ಸಿದ್ದಿಕ್ ಆಯ್ಕೆಯಾಗಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆ ವಿಭಿನ್ನವಾಗಿದ್ದು, ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬರು­ವುದು ಖಚಿತ. ಆದ್ದರಿಂದ ಇಲ್ಲಿನ ಅಭಿವೃದ್ಧಿಗೆ  ಬಿಜೆಪಿ ಅಭ್ಯರ್ಥಿಯ ಆಯ್ಕೆ ಅಗತ್ಯವಾಗಿದೆ ಎಂದರು.ಹಲವು ವರ್ಷಗಳಿಂದ ಎಡರಂಗ ಅಭ್ಯರ್ಥಿ ಲೋಕಸಭೆಗೆ ಆಯ್ಕೆಯಾಗಿ­ರುವುದೇ ಕಾಸರಗೋಡು ಜಿಲ್ಲೆ ಹಿಂದು­ಳಿಯಲು ಪ್ರಧಾನ ಕಾರಣ. ಪ್ರತಿಪಕ್ಷ ಸಂಸದರನ್ನು ಆಯ್ಕೆ ಮಾಡುವ ಬದಲು ಬಿಜೆಪಿಗೆ ಅವಕಾಶ ನೀಡಿ ಜಿಲ್ಲೆಯ ಸರ್ವತೋಮುಖ ಅಭಿ­ವೃದ್ಧಿಗೆ ಮತದಾರರು ಸಹಕರಿಸಬೇಕು ಎಂದರು. ಭ್ರಷ್ಟಾಚಾರ, ಬೆಲೆಯೇರಿಕೆಯ ಕೇಂದ್ರ ಯುಪಿಎ ಸರ್ಕಾರದ ನೀತಿ­ಯಿಂದ ಜನರು ಕಂಗಾಲಾಗಿದ್ದಾರೆ ಎಂದರು.ಬಿಜೆಪಿ ಲೋಕಸಭೆ ಚುನಾವಣೆ­ಯಲ್ಲಿ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಎಲ್ಲ ಪಂಚಾಯಿತಿಗಳಲ್ಲಿ ಪರ್ಯಟನೆ ನಡೆಸಿ ಅಭಿವೃದ್ಧಿ ಪ್ಯಾಕೇಜ್‌ನ್ನು ರೂಪಿಸಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃ­ತ್ವದ ಸರ್ಕಾರ ಬಂದರೆ ಜಿಲ್ಲೆಯ ಅಭಿ­ವೃದ್ಧಿಯನ್ನು ಕೈಗೊಳ್ಳ­ಲಾ­ಗುವುದು ಎಂದರು.

ಜಿಲ್ಲೆಯಲ್ಲಿ ಅಭಿವೃದ್ಧಿಗಾಗಿ ಪ್ರಭಾ­ಕರನ್ ಆಯೋ­ಗದ ವರದಿ ಅನು­ಷ್ಠಾನದ ಬಗ್ಗೆ ಮಾತನಾಡುವ ಐಕ್ಯ­ರಂಗ ಇದು ವರೆಗೆ ಅಭಿವೃದ್ಧಿ ಕಾರ್ಯ­ಗಳಿಗೆ ಚಾಲನೆ ನೀಡಿಲ್ಲ. ಅಡಿಕೆ ಕೃಷಿ­ಕರಿಗೆ ಪರಿಹಾರ ನೀಡಲು ಮೀನಮೇಷ ಎಣಿಸುತ್ತಿದೆ ಎಂದು ಟೀಕಿಸಿದರು.ಜಿಲ್ಲೆಯ ಭಾಷಾ ಅಲ್ಪಸಂಖ್ಯಾತರ ಸಮಸ್ಯೆಗೆ ಬಿಜೆಪಿ ಸ್ಪಂದಿಸಿದೆ. ಐಕ್ಯ­ರಂಗ–ಎಡರಂಗಗಳು ಭಾಷಾ ಅಲ್ಪ­ಸಂಖ್ಯಾತರನ್ನು ಕಡೆಗಣಿಸಿವೆ. ಕೇರಳ ತುಳು ಅಕಾಡೆಮಿ ನಿರ್ವೀರ್ಯವಾಗಿದೆ. ರಾಷ್ಟ್ರಕವಿ ಗೋವಿಂದ ಪೈಗಳ ಸ್ಮಾರಕ ಕಾಮಗಾರಿ ಸ್ಥಗಿತ­ಗೊಂಡಿದೆ. ಬಿಜೆಪಿಗೆ ಜಿಲ್ಲೆಯ ಅಲ್ಪಸಂಖ್ಯಾತರ ಸಂಪೂರ್ಣ ಬೆಂಬಲ ಇದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದು ಅಭಿವೃದ್ಧಿ­ಯಾಗ­ಬೇಕೆಂಬ ಉದ್ದೇಶದಿಂದ ಅಲ್ಪಸಂಖ್ಯಾತರು ಬೆಂಬಲ ನೀಡುತ್ತಿದ್ದಾರೆ. ಕೃಷಿಕರ ಸಮಸ್ಯೆಗಳಿಗೆ ಸ್ಪಂದಿಸಿ ಅವರ ಕೃಷಿಯನ್ನು ಪ್ರೋತ್ಸಾಹಿಸಲು ಬಿಜೆಪಿ ಆದ್ಯತೆ ನೀಡ­ಲಿದೆ ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಇದ್ದರು. ಪ್ರೆಸ್‌ಕ್ಲಬ್ ಅಧ್ಯಕ್ಷ ಎಂ. ಒ. ವರ್ಗೀಸ್ ಅಧ್ಯಕ್ಷತೆ ವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.