ಮಂಗಳವಾರ, ನವೆಂಬರ್ 19, 2019
24 °C

`ತೃತೀಯ ರಂಗ ರಚನೆ ಖಚಿತ'

Published:
Updated:

ಚೆನ್ನೈ (ಪಿಟಿಐ): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತೃತೀಯ ರಂಗದ ರಚನೆಯಾಗುವುದು ಖಚಿತ ಎಂದಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಕೇಂದ್ರದ ಯುಪಿಎ ಸರ್ಕಾರ ತಮ್ಮ ಸರ್ಕಾರಕ್ಕೆ ಸಹಕಾರ ನೀಡುತ್ತಿಲ್ಲ ಎಂದು ದೂರಿದ್ದಾರೆ.ಮುಖ್ಯಮಂತ್ರಿಯಾದ ನಂತರ ಇದೇ ಮೊದಲ ಬಾರಿಗೆ ಇಲ್ಲಿಗೆ ಭೇಟಿ ನೀಡಿದ ಅಖಿಲೇಶ್ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, `ತೃತೀಯ ರಂಗ ರಚನೆಯಾಗುವುದು ನಿಶ್ಚಿತ, ಕೇಂದ್ರದಲ್ಲಿ ತೃತೀಯ ರಂಗ ರಚನೆಯಾಗುವದೆಂಬ ವಿಶ್ವಾಸ ಸಮಾಜವಾದಿ ಪಕ್ಷಕ್ಕೆ ಇದೆ' ಎಂದರು.ತೃತೀಯ ರಂಗ ರಚನೆಯ ಹಿನ್ನೆಲೆಯಲ್ಲಿ ಪಿಎಂಕೆ, ಎಐಎಡಿಎಂಕೆಯಂತಹ ಪಕ್ಷಗಳ ಬೆಂಬಲ ಗಿಟ್ಟಿಸುವ ದಿಸೆಯಲ್ಲಿ ಅಖಿಲೇಶ್ ಚೆನ್ನೈಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.`ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ತಾವು ನೀಡಿರುವ ಭರವಸೆಗಳನ್ನು ಈಡೇರಿಸಿಲ್ಲ, ಅವರ ನೀತಿಗಳು ಬಡವರ ಪರ ಇಲ್ಲ, ಹಲವಾರು ಕ್ಷೇತ್ರಗಳಲ್ಲಿ ಬಿಜೆಪಿ ಇಲ್ಲವೆ ಕಾಂಗ್ರೆಸ್ ಹಾಗೂ ಅವುಗಳ ಮಿತ್ರಪಕ್ಷಗಳು ವಿಫಲವಾಗಿವೆ ಹಾಗಾಗಿ ತೃತೀಯ ರಂಗದ ರಚನೆಗೆ ಇದು ಉತ್ತಮ ಅವಕಾಶ ನೀಡಿದಂತಾಗಿದೆ' ಎಂದರು.ಯುಪಿಎ ಸರ್ಕಾರಕ್ಕೆ ನೀಡಿರುವ ಬಾಹ್ಯ ಬೆಂಬಲವನ್ನು ಹಿಂದಕ್ಕೆ ಪಡೆಯಲಾಗುವುದೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅಖಿಲೇಶ್, `ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳ ನಡುವಿನ ಸಂಬಂಧಗಳಲ್ಲಿ ಕೆಲವು ಒಳ್ಳೆಯವು ಇನ್ನೂ ಕೆಲವು ಕೆಟ್ಟವು ಎನಿಸಿಕೊಂಡಿವೆ, ನಾವು ಸರ್ಕಾರದೊಂದಿಗೆ ಇದ್ದು ಸಹಕಾರ ನೀಡುತ್ತಿದ್ದೇವೆ. ಆದರೆ ಸರ್ಕಾರ ಮಾತ್ರ ನಮಗೆ ಸಹಕಾರ ನೀಡುತ್ತಿಲ್ಲ, ಬೆಂಬಲ ಹಿಂದಕ್ಕೆ ಪಡೆಯುವ ನಿರ್ಧಾರವನ್ನು ನಮ್ಮ ತಂದೆಯೇ ತೆಗೆದುಕೊಳ್ಳುತ್ತಾರೆ' ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)