ಶುಕ್ರವಾರ, ಜೂನ್ 25, 2021
23 °C
ಶಿವಲಿಂಗ ಶ್ರೀಗಳ 97ನೇ ಜಯಂತ್ಯುತ್ಸವ: ರಕ್ತದಾನ ಶಿಬಿರ

ತೃಪ್ತಿಕರ ಜೀವನಕ್ಕೆ ಪರೋಪಕಾರ ಅವಶ್ಯ: ಸದಾಶಿವಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಮನುಷ್ಯ ಜೀವನವನ್ನು ಸ್ವಾರ್ಥಕ್ಕಾಗಿ ಬಳಕೆ ಮಾಡಿಕೊಳ್ಳದೇ ಪರೋಪಕಾರಕ್ಕಾಗಿ ಬಳಸಿದಾಗ ಮಾತ್ರ ಜೀವನದಲ್ಲಿ ತೃಪ್ತಿಯಿಂದ ಇರಲು ಸಾಧ್ಯ ಎಂದು ಹುಕ್ಕೇರಿಮಠದ ಸದಾಶಿವ ಶ್ರೀಗಳು ಹೇಳಿದರು.ಇಲ್ಲಿನ ಹುಕ್ಕೇರಿಮಠದ ಲಿಂ.ಶಿವಲಿಂಗ ಶಿವಯೋಗಿಗಳ ೯೭ನೇ ಜಯಂತಿ ಅಂಗವಾಗಿ ಹುಕ್ಕೇರಿಮಠದ ಆವರಣದಲ್ಲಿ ಸೋಮವಾರ ನಡೆದ ರಕ್ತದಾನ ಶಿಬಿರ ಹಾಗೂ ಅಕ್ಷರ ದಾಸೋಹ ಅಡುಗೆ ಕೊಠಡಿ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಸಮಾಜದಲ್ಲಿ ಹುಟ್ಟಿದ ಮನುಷ್ಯ ಸಮಾಜಮುಖಿ ಚಿಂತನೆ ನಡೆಸುವುದನ್ನು ಮರೆತಿದ್ದಾನೆ. ಕೇವಲ ತನ್ನ ಕುಟುಂಬ ಇಲ್ಲವೇ ವೈಯಕ್ತಿಕ ಸ್ವಾರ್ಥಕ್ಕಾಗಿ ಜೀವನ ಬಹುಪಾಲು ಸಮಯ ಮೀಸಲಿಟ್ಟು ಅಂತರ್ಮುಖಿಯಾಗಿ ತನ್ನ ಜೀವನದ ಸಂತೋಷವನ್ನು ಕಳೆದುಕೊಳ್ಳುತ್ತಿದ್ದಾನೆ ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ರುದ್ರಪ್ಪ ಲಮಾಣಿ ಮಾತನಾಡಿ, ಲಿಂ. ಶಿವಲಿಂಗ ಶ್ರೀಗಳು ಜಾತಿ ಮತ ಭೇದ ಮಾಡದೆ ಎಲ್ಲರನ್ನೂ ಸಮಾನ ರೀತಿಯಿಂದ ನೋಡುತ್ತಿದ್ದರು. ಇಂದಿನ ಶ್ರೀಗಳು ಕೂಡಾ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದಾರೆ. ಅವರ ಸಮಾಜಮುಖಿ ಚಿಂತನೆ ಹಾಗೂ ಕಾರ್ಯಗಳೇ ಸಾಕ್ಷಿ ಎಂದು ಹೇಳಿದರು.ಅಕ್ಷರ ದಾಸೋಹದ ಅಧಿಕಾರಿ ಝಡ್.ಎಂ. ಖಾಜಿ ಮಾತನಾಡಿ, ಮಠಗಳಿಂದ ಮಾತ್ರ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಶಿಕ್ಷಣ ಕ್ಷೇತ್ರಕ್ಕೆ ಮಠಗಳ ಕೊಡುಗೆ ಅಪಾರವಾಗಿದೆ. ಅದೇ ಕಾರಣಕ್ಕಾಗಿಯೇ ಶ್ರೀಮಠದಲ್ಲಿ ಪ್ರಾಯೋಗಿಕವಾಗಿ ನೂತನ ಅಡುಗೆ ಕೋಣೆಗಳನ್ನು ನಿರ್ಮಿಸುವುದರ ಜತೆಗೆ ಸ್ಟೀಮ್ ಬಾಯ್ಲರ್‌ಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಅಂಬಿಗೇರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಬಿ.ಎಸ್.ಅಂಗಡಿ, ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ತಜ್ಞ ಡಾ.ಎನ್.ಮುರಳೀಧರ ಮಾತನಾಡಿದರು. ಇದೇ ಸಂದರ್ಭದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಬಿ.ಬಿ.ಅಪ್ಪಣ್ಣನವರನ್ನು ಸನ್ಮಾನಿಸಲಾಯಿತು.ಇದೇ ಸಂದರ್ಭದಲ್ಲಿ ಲಿಂ. ಶಿವಲಿಂಗ ಶಿವಯೋಗಿಗಳ ೯೭ ನೇ ಜಯಂತಿ ನಿಮಿತ್ಯ ನಡೆದ ರಕ್ತದಾನ ಶಿಬಿರದಲ್ಲಿ ೫೦ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು.ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಸ್.ಎಸ್.ಅಡಿಗ, ಪತ್ರಿಕೋದ್ಯಮಿ ಕೆ.ಮಂಜಪ್ಪ, ಜೆಸಿಐ ಅಧ್ಯಕ್ಷ ಡಾ.ಶಿವಾನಂದ ಕೆಂಬಾವಿ, ಜಿಲ್ಲಾ ರೆಡ್‌ಕ್ರಾಸ್‌ ಸಂಸ್ಥೆಯ ಸಿದ್ದು ಕಬ್ಬೂರ, ಬಿ.ಬಸವರಾಜ ಸೇರಿದಂತೆ ಅನೇಕರು ಹಾಜರಿದ್ದರು.ಸಿ.ಎಸ್. ಮರಳಿಹಳ್ಳಿ ನಿರೂಪಿಸಿದರು. ಶಿವಬಸಪ್ಪ ಹತ್ತಿ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.