ಶುಕ್ರವಾರ, ಮೇ 7, 2021
26 °C

ತೆಂಗಳಿ ಬಸ್‌ನಿಲ್ದಾಣಕ್ಕೆ ಜಾಲಿ ಮುಳ್ಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಳಗಿ: ಬೆಳೆ ಹಾಳುಮಾಡುವ ದನಗಳ ಕಾಟ ತಪ್ಪಿಸಲು ಹೊಲಗಳ ಬದಿಗೆಲ್ಲ ಮುಳ್ಳು ಊರುವುದನ್ನು ಎಲ್ಲೆಡೆ ಕಾಣುವುದು ಸಾಮಾನ್ಯ. ಅದರಂತೆ ಸತ್ತವರ ಮನೆ ಬಾಗಿಲಿಗೆ ಕೆಲವೊಮ್ಮೆ ಮುಳ್ಳು ಜಡಿದು ಶೋಕಾಚರಣೆ ಮಾಡುತ್ತಿರುವುದನ್ನು ಅಲ್ಲಲ್ಲಿ ಕಾಣಬಹುದು.ಆದರೆ ಪ್ರಯಾಣಿಕರು ಕುಳಿತು ತುಸು ವಿಶ್ರಾಂತಿ ತೆಗೆದುಕೊಳ್ಳುವ ಬಸ್‌ನಿಲ್ದಾಣದಲ್ಲಿ ಯಾರೊಬ್ಬರೂ ಕುಳಿತುಕೊಳ್ಳದಂತೆ ಜಾಲಿ ಮುಳ್ಳು ಜಡಿದಿರುವ ಕೆಟ್ಟ ಚಿತ್ರಣವೊಂದು ಚಿತ್ತಾಪುರ ತಾಲ್ಲೂಕಿನ ತೆಂಗಳಿ ಗ್ರಾಮದಲ್ಲಿ ಇಂದೂ ಸಹ ನೋಡಬಹುದಾಗಿದೆ.ಗ್ರಾಮ ಪಂಚಾಯತಿ ಕೇಂದ್ರವಾಗಿರುವ ತೆಂಗಳಿ ಊರಿನಿಂದ ಸೇಡಂ, ಚಿತ್ತಾಪುರ, ಗುಲ್ಬರ್ಗ ಮತ್ತು ಕಾಳಗಿಗೆ ದಿನವಿಡಿ ಹಲವಾರು ಜನರು ಓಡಾಡುತ್ತಿರುತ್ತಾರೆ. ಹೀಗಾಗಿ ತೆಂಗಳಿಯ ಪ್ರಯಾಣಿಕರು ಯಾವತ್ತೂ ಈ ಬಸ್‌ನಿಲ್ದಾಣದಲ್ಲಿ ಕುಳಿತುಕೊಳ್ಳುವ ಮೂಲಕ ಸಂಚರಿಸುವ ವಾಹನಗಳಿಗಾಗಿ ಕಾಯುತ್ತಿರುತ್ತಾರೆ.ಅಂದಹಾಗೆ ಈ ನಿಲ್ದಾಣ ಎಂದಿಗೂ ಪ್ರಯಾಣಿಕರ ದಟ್ಟಣೆಯಿಂದ ಕೂಡಿರುವುದು ಮರೆಯುವಂತಿಲ್ಲ. ಆದರೆ ಕೆಲವು ತಿಂಗಳಿಂದ ಈ ನಿಲ್ದಾಣ ಸಣ್ಣಪುಟ್ಟ ದುರಸ್ತಿಗಳಿಗಾಗಿ ಕಾಯುತ್ತಿತ್ತು ಎನ್ನಲಾಗಿದೆ. ಈ ಕಾರ್ಯಕ್ಕೆ ಮುಂದಾದ ಇಲ್ಲಿನ ಗ್ರಾಮ ಪಂಚಾಯತಿಯು ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 2009-10ನೇ ಸಾಲಿನಲ್ಲಿ ದುರಸ್ತಿ ಕಾಮಗಾರಿ ಕೈಗೊಂಡಿದೆ ಎಂದು ಹೇಳಲಾಗಿದೆ.ಈ ಸಂದರ್ಭದಲ್ಲಿ ಸ್ಥಳೀಯ ವ್ಯಕ್ತಿ ಜಾವಿದ ಅಕ್ತರ್ ಎಂಬುವನು ಕಾಮಗಾರಿ ಪೂರ್ತಿಗೊಳಿಸಿದನೆಂದು ತಿಳಿದುಬಂದಿದೆ. ಅಂದಾಜು ರೂ.75ಸಾವಿರ ಖರ್ಚಾಗಿದ್ದು ಈ ವೆಚ್ಚದ ಬಿಲ್ಲಿನ ಮೊತ್ತ ಇನ್ನೂ ಬಿಡುಗಡೆಯಾಗದಿರುವುದೇ ಈ ಮುಳ್ಳು ಜಡಿತಕ್ಕೆ ಕಾರಣ ಎನ್ನಲಾಗುತ್ತಿದೆ.ಇದನ್ನು ಗಮನಿಸಿದ ಗ್ರಾಮ ಪಂಚಾಯತಿ ಪ್ರತಿನಿಧಿಗಳು ಮತ್ತು ಊರ ಹಿರಿಯರು ಕೆಲವು ತಿಂಗಳ ಹಿಂದೆ `ಪಂಚಾಯತಿ~ (ಸಭೆ) ಹಾಕಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಸುಮಾರು 22ಕಾಮಗಾರಿಗಳಾಗಿ 70ಲಕ್ಷ ರೂಪಾಯಿ ಹೊರಬರಬೇಕಾಗಿದೆ. ಕೇವಲ ಬಸ್‌ನಿಲ್ದಾಣದ ದುರಸ್ತಿ ಹಣ ಮಾತ್ರವೇ ಅಲ್ಲ. ಹಣ ಬಿಡುಗಡೆಗೊಳ್ಳದ ಸಿಟ್ಟಿನಲ್ಲಿ ನಿಲ್ದಾಣಕ್ಕೆ ಮುಳ್ಳು ಜಡಿದಿರುವ ಸಂಗತಿ ಊರಿಗಷ್ಟೇ ಅಲ್ಲ ನೋಡುಗರಿಗೂ ಶೋಭೆ ತರುವಂತದ್ಲ್ಲಲ. ದಯಾಮಾಡಿ ಈ ಕ್ರಮ ಹಿಂದಕ್ಕೆ ತೆಗೆದುಕೊಂಡು ತಾಳ್ಮೆ ಅನುಸರಿಸಿ ಎಂದು ಜಾವಿದ್‌ಗೆ ಕಿವಿಮಾತು ಹೇಳಿದ್ದಾರೆ ಎಂದು ಗೊತ್ತಾಗಿದೆ.ಅಷ್ಟಾದರೂ ಈ ನಿಲ್ದಾಣದಲ್ಲಿ ಮುಳ್ಳಿನ ರಾಶಿ ಎದ್ದು ಕಾಣುತ್ತಿರುವುದು ನೋಡುಗರಲ್ಲಿ ಅಪಹಾಸ್ಯ ಸೃಷ್ಟಿಸಿದೆ.

ಅಲ್ಲದೇ ಏನಿದು ಗ್ರಾಮಾಡಳಿತದ ವ್ಯವಸ್ಥೆ ಎಂದುಕೊಳ್ಳುವಂತಾಗಿದೆ. ಇದರಿಂದ ಪ್ರಯಾಣಿಕರು ಹೋಟೆಲ್, ಪಾನಶಾಪ್, ಅಂಬಿಗರ ಚೌಡಯ್ಯ ಗುಡಿ ಬಳಿಯ ಗಿಡಮರಗಳ ಆಶ್ರಯ ಪಡೆಯಬೇಕಾಗಿದ್ದು ಪಡಬಾರದ ಕಷ್ಟ ಪಡುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಒಬ್ಬ ದೊಡ್ಡ ಜನಪ್ರತಿನಿಧಿ ಅಥವಾ ಅಧಿಕಾರಿ ಈಕಡೆ ಇಣುಕಿ ನೋಡದಿರುವುದು ನಾಗರಿಕರ ಆಕ್ರೋಶಕ್ಕೆ ಗುರಿಯಾಗಿದೆ.ಇನ್ನು ಮೇಲಾದರೂ ಈ ಬಗ್ಗೆ ಯಾರಾದರು ತಲೆ ಕೆಡೆಸಿಕೊಂಡು ಮುಳ್ಳು ತೆಗೆಸುವ ಮೂಲಕ ಪ್ರಯಾಣಿಕರ ತಂಗುವಿಕೆಗೆ ಸಹಕಾರಿ ಆಗಬಲ್ಲರೇ ಎಂದು ನೋಡಬೇಕಾಗಿದೆ.

                         

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.