ತೆಂಗಿಗೆ ಮಾರಕವಾದ ಬಡ್‌ರಾಟ್: ಆತಂಕ

7

ತೆಂಗಿಗೆ ಮಾರಕವಾದ ಬಡ್‌ರಾಟ್: ಆತಂಕ

Published:
Updated:
ತೆಂಗಿಗೆ ಮಾರಕವಾದ ಬಡ್‌ರಾಟ್: ಆತಂಕ

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಹರಡಿರುವ ಬಡ್‌ರಾಟ್ ರೋಗದಿಂದಾಗಿ ರೈತರು ತಮ್ಮ ತೋಟಗಳಲ್ಲಿ ಕಷ್ಟಪಟ್ಟು ಬೆಳೆಸಿರುವ ತೆಂಗಿನ ಮರಗಳು ಒಣಗಿಹೋಗುತ್ತಿವೆ. ಇದರಿಂದ ಬೆಳೆಗಾರರಿಗೆ ನಷ್ಟ ಉಂಟಾಗುತ್ತಿದೆ.ಗೊಬ್ಬರ ಕೊಟ್ಟು ನೀರುಣಿಸುತ್ತಿರುವ ತೆಂಗಿನ ಮರಗಳೂ ಕಾಯಿ ಗೊಂಚಲು ಸಮೇತ ಸುಳಿ ಒಣಗಿ ಸಾಯುತ್ತಿವೆ. ಹಲವು ವರ್ಷಗಳಿಂದ ಶ್ರಮವಹಿಸಿ ಬೆಳೆಸಿದ ಮರಗಳು ಒಣಗಿ ಹೋಗುತ್ತಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ತಾಲ್ಲೂಕಿನಲ್ಲಿ ತೆಂಗಿನ ಮರಗಳನ್ನು ಕೆಲವು ಕಡೆ ಪ್ರತ್ಯೇಕವಾಗಿ ಹಾಗೂ ತೋಟಗಳ ಅಂಚಿನಲ್ಲಿ ಬೆಳೆಸಲಾಗಿದೆ. ಬಲಿತ ಕಾಯಿ ಅಥವಾ ಎಳನೀರನ್ನು ಮಾರಿ ನಾಲ್ಕು ಕಾಸು ಮಾಡಿಕೊಳ್ಳುತ್ತಿದ್ದ ರೈತರು ಸುಳಿ ರೋಗದಿಂದ ಸುಸ್ತಾಗಿದ್ದಾರೆ. ಎಲ್ಲ ಮರಗಳಿಗೂ ಈ ರೋಗ ಬಂದರೆ ಗತಿಯೇನು ಎಂಬ ಪ್ರಶ್ನೆ ಅವರನ್ನು ಕಾಡುತ್ತಿದೆ.ಇತ್ತೀಚಿನ ದಿನಗಳಲ್ಲಿ ನುಸಿ ರೋಗದ ಪ್ರಮಾಣವೂ ಹೆಚ್ಚಿದೆ. ಬಹುತೇಕ ಮರಗಳಲ್ಲಿ ಕಾಯಿ ಕಟ್ಟುತ್ತಿಲ್ಲ. ಹೀಚು ಉದುರಿ ನೆಲಕಚ್ಚುತ್ತಿದೆ. ಅಳಿದುಳಿದ ಕಾಯಿಗಳೂ ಸರಿಯಾಗಿ ಬೆಳೆಯುತ್ತಿಲ್ಲ. ಸಣ್ಣ ಗಾತ್ರದ ಕಾಯಿಗಳಿಗೆ ಮಾರುಕಟ್ಟೆಯಲ್ಲಿ ಒಳ್ಳೆ ಬೆಲೆಯೂ ಸಿಗುತ್ತಿಲ್ಲ. ಇದರಿಂದ ವಿಚಲಿತರಾದ ಕೆಲವು ರೈತರು ತಮ್ಮ ತೋಟಗಳಲ್ಲಿನ ತೆಂಗಿನ ಮರಗಳನ್ನು ಕಡಿದುಹಾಕಿ ಪರ್ಯಾಯ ಬೆಳೆ ಇಡುತ್ತಿದ್ದಾರೆ.ಈ ಮಧ್ಯೆ ತೆಂಗಿನ ಕಾಯಿಗೆ ಒಳ್ಳೆ ಬೆಲೆ ಬಂದಿದೆ. ಎಳನೀರಿಗೂ ಬೇಡಿಕೆ ಹೆಚ್ಚಿದೆ. ಆದರೆ ಮರಗಳು ರೋಗಪೀಡಿತವಾಗಿ ಸಾಯುತ್ತಿವೆ. ಇಷ್ಟಾದರೂ ಬೆಳೆಗಾರರು ಪರಿತಪಿಸುವುದು ಬಿಟ್ಟರೆ ರಕ್ಷಣೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅಂತರ್ಜಲದ ಕೊರತೆ ಹೆಚ್ಚಿದಂತೆ ಕೊಳವೆ ಬಾವಿಗಳಲ್ಲಿ ದೊರೆಯುವ ನೀರಿನ ಲಭ್ಯತೆ ಪ್ರಮಾಣ ಕಡಿಮೆಯಾಗಿದೆ. ಸಿಗುವ ಅಲ್ಪ ಪ್ರಮಾಣದ ನೀರನ್ನು ಟೊಮೆಟೊ ಮತ್ತಿತರ ಬೆಳೆಗೆ ಬಳಸಲಾಗುತ್ತಿದೆ. ನುಸಿ ಪೀಡೆ ಕಾಯಿಯನ್ನು ಬೆಳೆಯಲು ಬಿಡುತ್ತಿಲ್ಲವಾದ್ದರಿಂದ ತೆಂಗಿನ ಮರಗಳ ಬಗ್ಗೆ ನಿರ್ಲಕ್ಷ್ಯ ಹೆಚ್ಚಿದೆ.ಒಂದು ರೀತಿಯ ಶಿಲೀಂದ್ರ ರೋಗದಿಂದಾಗಿ ತೆಂಗಿನ ಮರದ ಸುಳಿ ಒಣಗುತ್ತದೆ. ಅದನ್ನು `ಬಡ್‌ರಾಟ್~ ಎನ್ನುತ್ತಾರೆ. ಅದನ್ನು ನಿಯಂತ್ರಿಸಬೇಕಾದರೆ, ಒಣಗಿದ ಸುಳಿಯನ್ನು ತೆಗೆದು ಆ ಭಾಗವನ್ನು ಚನ್ನಾಗಿ ಸ್ವಚ್ಛ ಮಾಡಬೇಕು. ಹಾನಿಗೊಂಡ ಭಾಗಕ್ಕೆ ಬೋಡೋ ಪೇಸ್ಟ್ ಅನ್ನು ಹಚ್ಚಿ ಪ್ಲಾಸ್ಟಿಕ್ ಹಾಳೆಯಿಂದ ಮುಚ್ಚಬೇಕು ಎಂಬುದು ತಾಲ್ಲೂಕು ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಎಂ.ಮಲ್ಲಿಕಾರ್ಜುನ ಬಾಬು ಅವರ ಸಲಹೆ.ತಲಾ 50 ಗ್ರಾಂ ಮೈಲುತುತ್ತ, ಸುಣ್ಣ ಮತ್ತು ಉಪ್ಪನ್ನು ಒಂದು ತೆಳುವಾದ ಬಟ್ಟೆಯಲ್ಲಿ ಕಟ್ಟಿ, ಆ ಗಂಟನ್ನು ತೆಂಗಿನ ಮರದ ಸುಳಿಯ ಮೇಲಿನ ಗರಿಗೆ ಕಟ್ಟಬೇಕು. ಮಳೆ ಸುರಿದಾಗ ಅದು ಕರಗಿ ಸುಳಿಯ ಮೇಲೆ ಬೀಳುವುದರಿಂದ ಬಡ್‌ರಾಟ್ ನಿಯಂತ್ರಣಕ್ಕೆ ಬರುತ್ತದೆ. ಆದರೆ ಈ ರೋಗ ಹರಡದಿರಲು ಆರೋಗ್ಯವಂತ ಮರಗಳಿಗೂ ಈ ಗಂಟುಗಳನ್ನು ಕಟ್ಟಬೇಕು ಎಂದು `ಪ್ರಜಾವಾಣಿ~ಗೆ ತಿಳಿಸಿದರು.ನುಸಿ ಪೀಡೆ ನಿವಾರಣೆಗೆ ಪ್ರತಿ ತೆಂಗಿನ ಗಿಡಕ್ಕೆ ಎರಡರಿಂದ ಮೂರು ಕೆ.ಜಿ ಬೇವಿನ ಹಿಂಡಿ ಕೊಡಬೇಕು. 10 ಮಿ.ಲೀ ನುವೋಕ್ರಾನ್ ಔಷಧಿಯನ್ನು ಮರದ ಬೇರಿಗೆ ಕಟ್ಟಿ ತರಗೆಲೆಗಳನ್ನು ಮುಚ್ಚಬೇಕು. ಕೋಳಿ, ಜನ, ಜಾನುವಾರು ಅದರಿಂದ ದೂರ ಉಳಿಯುವಂತೆ ಎಚ್ಚರ ವಹಿಸಬೇಕು.

 

ಔಷಧಿ ಕಟ್ಟಿದ ನಂತರ 45 ರಿಂದ 50 ದಿನಗಳ ಕಾಲ ಕಾಯಿ ಕೀಳಬಾರದು. ಗೋಲಿ ಗಾತ್ರದ ಹೀಚುಳ್ಳ ಗೊನೆಗಳ ಮೇಲೆ 1 ಲೀಟರ್ ನೀರಿಗೆ 2 ಗ್ರಾಂ ನೀರಿನಲ್ಲಿ ಕರಗುವ ಗಂಧಕವನ್ನು ಬೆರೆಸಿ ಸಿಂಪರಣೆ ಮಾಡಬೇಕು ಎಂದು ಸಲಹೆ ನೀಡಿದರು.ರೋಗ ಬಾಧೆಗೆ ಬೇಸತ್ತು ಕಷ್ಟಪಟ್ಟು ಬೆಳೆಸಿದ ತೆಂಗಿನ ಮರಗಳನ್ನು ಕಡಿದುಹಾಕುವುದು ಸರಿಯಲ್ಲ. ರೈತ ಸಮುದಾಯ ಸಾಂಘಿಕವಾಗಿ ಪರಿಹಾರ ಕ್ರಮ ಕೈಗೊಂಡಲ್ಲಿ ಉತ್ತಮ ಫಲಿತಾಂಶ ನಿರೀಕ್ಷಿಸಬಹುದೆಂದು ತೋಟಗಾರಿಕಾ ತಜ್ಞರು ಅಭಿಪ್ರಾಯಪಡುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry