ತೆಂಗಿನಕಾಯಿ ಖರೀದಿ ಕೇಂದ್ರ ಆರಂಭ

ದಾವಣಗೆರೆ: ಸರ್ಕಾರದ ನಿರ್ದೇಶನದಂತೆ ದಾವಣಗೆರೆ, ಹರಿಹರ, ಚನ್ನಗಿರಿ ಹಾಗೂ ಹೊನ್ನಾಳಿ ತಾಲ್ಲೂಕುಗಳಲ್ಲಿ ಸುಲಿದ ತೆಂಗಿನಕಾಯಿ ಖರೀದಿ ಕೇಂದ್ರ ತೆರೆಯಲಾಗಿದ್ದು, ಬೆಳೆಗಾರರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಎಂದು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ತಿಳಿಸಿದರು.
ಎಂಪಿಎಂಸಿ ಮಾರುಕಟ್ಟೆ ಪ್ರದೇಶದಲ್ಲಿ ಬುಧವಾರ ತೆಂಗಿನಕಾಯಿ ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಕ್ವಿಂಟಲ್ ತೆಂಗಿನಕಾಯಿಗೆ ₹ 1,600 ದರ ನಿಗದಿಪಡಿಸಿದೆ. ಬೆಳೆಗಾರರು ಜಮೀನಿನ ಪಹಣಿಯ ಬೆಳೆ ದೃಢೀಕರಣ ಪತ್ರ, ಆಧಾರ್ ಅಥವಾ ಚುನಾವಣಾ ಗುರುತಿನ ಝೆರಾಕ್ಸ್ ಪ್ರತಿಯನ್ನು ಸಂಬಂಧಪಟ್ಟ ತಾಲ್ಲೂಕಿನ ತೋಟಗಾರಿಕಾ ಇಲಾಖೆಗೆ ಸಲ್ಲಿಸಿ, ಗುರುತಿನ ಪತ್ರ ಪಡೆದುಕೊಳ್ಳಬೇಕು. ಖರೀದಿ ಕೇಂದ್ರದಲ್ಲಿ ಮಾಲು ಮಾರಾಟ ಮಾಡುವಾಗ ಅದನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು ಎಂದು ತಿಳಿಸಿದರು.
ತೆಂಗಿನಕಾಯಿ ಮಾರಾಟ ಮಾಡಲಿಚ್ಚಿಸುವ ಬೆಳೆಗಾರರು ಕಡ್ಡಾಯವಾಗಿ ಬ್ಯಾಂಕ್ ಖಾತೆ ಹೊಂದಿರಬೇಕು. ಐಎಫ್ಎಸ್ಸಿ ಕೋಡ್, ಬ್ಯಾಂಕ್ ಖಾತೆಯ ವಿವರಗಳನ್ನು ಸಲ್ಲಿಸಿದರೆ ಒಂದೇ ದಿನದಲ್ಲಿ ಆರ್ಟಿಜಿಎಸ್ ಮೂಲಕ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಪಾವತಿ ಮಾಡಲಾಗುವುದು. ಹೆಚ್ಚಿನ ಮಾಹಿತಿಗೆ ಆಯಾ ಖರೀದಿ ಕೇಂದ್ರದಲ್ಲಿ ಮಾಹಿತಿ ಪಡೆಯಬಹುದು ಎಂದರು.
ಸರ್ಕಾರಿ ರಜಾದಿನಗಳನ್ನು ಹೊರತುಪಡಿಸಿ ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 3ರವರಗೆ ಖರೀದಿ ಕೇಂದ್ರ ತೆರೆದಿರುತ್ತದೆ. ಪ್ರತಿ ರೈತರಿಂದ ತೆಂಗಿನ ಮರಗಳಿಗೆ ಅನುಗುಣವಾಗಿ ಗರಿಷ್ಠ 30 ಕ್ವಿಂಟಲ್ ಸುಲಿದ ತೆಂಗಿನಕಾಯಿ ಖರೀದಿಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಇದೇವೇಳೆ ಖರೀದಿ ಪ್ರಕ್ರಿಯೆಯಲ್ಲಿ ಕಠಿಣ ನಿಯಮಗಳನ್ನು ಅನುಸರಿದಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕಿವಿಮಾತು ಹೇಳಿದರು.
ಈ ಸಂದರ್ಭ ಎಪಿಎಂಸಿ ಜಂಟಿ ನಿರ್ದೇಶಕರಾದ ಆನಂದ್, ಎಪಿಎಂಸಿ ಸಹಾಯಕ ನಿರ್ದೇಶಕರಾದ ಮಂಜುಳಾದೇವಿ, ಜಿಲ್ಲಾ ಹಾಪ್ಕಾಮ್ಸ್ ಎಂಡಿ ಕುಮಾರ್, ಅಧಿಕಾರಿಗಳಾದ ಯತಿರಾಜ್, ಅಮಿತ್, ಅರುಣ್, ಶಿವಮೂರ್ತಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಖರೀದಿಗೆ ಮಾನದಂಡ ನಿಗದಿ
ತೆಂಗಿನ ಕಾಯಿ ಖರೀದಿಗೆ ಸರ್ಕಾರ ಕೆಲವು ಮಾನದಂಡಗಳನ್ನು ನಿಗದಿಗೊಳಿಸಿದೆ. ತೆಂಗಿನಕಾಯಿ ಹೂ ಬಿಟ್ಟ 11ರಿಂದ 12 ತಿಂಗಳಲ್ಲಿ ಕೊಯ್ಲು ಮಾಡಿರಬೇಕು. ಸುಲಿದ ತೆಂಗಿನಕಾಯಿಗಳು ಕಡುಕಂದು ಬಣ್ಣದ್ದಾಗಿರಬೇಕು. ಕಪ್ಪು ಕವಚದೊಂದಿಗೆ ಮೂರು ಉದ್ದನೆಯ ಗೆರೆಗಳನ್ನು ಹೊಂದಿದ್ದು, ಮೂರು ಕಣ್ಣುಗಳು ಗಟ್ಟಿಯಾಗಿರಬೇಕು. ನೀರಿದ್ದು ಸುಲಭವಾಗಿ ಅಲುಗಾಡುವಂತಿರಬೇಕು. ಜುಟ್ಟು ಹೊಂದಿದ್ದು, ಪ್ರತಿ ತೆಂಗಿನಕಾಯಿ ಕನಿಷ್ಠ 400 ಗ್ರಾಂ ತೂಕ ಹೊಂದಿರಬೇಕು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.