ಶುಕ್ರವಾರ, ನವೆಂಬರ್ 15, 2019
21 °C

ತೆಂಗಿನಮರಗಳಿಗೆ ಸುಳಿರೋಗ: ಪರಿಹಾರಕ್ಕೆ ಒತ್ತಾಯ

Published:
Updated:

ಚನ್ನರಾಯಪಟ್ಟಣ: ಮಳೆಯ ಅಭಾವದಿಂದ ತಾಲ್ಲೂಕಿನಲ್ಲಿ ತೆಂಗಿನಮರಗಳು ಸುಳಿರೋಗಕ್ಕೆ ತುತ್ತಾಗಿವೆ. ಕೂಡಲೇ ರೈತರಿಗೆ ಪ್ರತಿ ಮರಕ್ಕೆ 25 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು ತಾಲ್ಲೂಕು ರೈತ ಸಂಘದ (ಕೋಡಿಹಳ್ಳಿ ಚಂದ್ರಶೇಖರ್ ಬಣ) ಸದಸ್ಯರು ಶುಕ್ರವಾರ ಆಗ್ರಹಿಸಿದರು.ಒಣಗಿದ ತೆಂಗಿನ ಮರವನ್ನು ರೈತರು ಮೆರವಣಿಗೆಯಲ್ಲಿ ಕೊಂಡೊಯ್ದರು. ಸರ್ಕಾರ ಕೂಡಲೇ ಪರಿಹಾರ ನೀಡಬೇಕು ಎಂದು ಘೋಷಣೆ ಕೂಗಿದರು.

ಮಳೆ ಕೊರತೆಯಿಂದ ತಾಲ್ಲೂಕಿನಲ್ಲಿ ಶೇ 85ರಷ್ಟು ತೆಂಗಿನಮರಗಳು ಒಣಗಿವೆ. ಕಲ್ಪವೃಕ್ಷವನ್ನು ನಂಬಿದ್ದ ರೈತರು ಬೀದಿಗೆ ಬಿದ್ದಂತಾಗಿದೆ. ಅದರಲ್ಲೂ ದಿಡಗ, ಹಿರೀಸಾವೆ ಸುತ್ತಮುತ್ತ ಹಳ್ಳಿಗಳಲ್ಲಿನ ಮರಗಳ ಸ್ಥಿತಿ ಹೇಳ ತೀರದು. ನೀರಿನ ಅಭಾವದಿಂದ ಜನ, ಜಾನುವಾರುಗಳು ಕುಡಿಯುವ ನೀರಿಗಾಗಿ ಹಾಹಾಕಾರ ಪಡುವಂತಾಗಿದೆ. ಕೂಡಲೇ ಕೆರೆಗಳಿಗೆ ನೀರು ಹರಿಸದಿದ್ದರೆ ಚಳವಳಿ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.ರೈತ ಸಂಘದ ಮುಖಂಡರಾದ ಎ.ಎನ್. ಮಂಜೇಗೌಡ, ನಾಗರತ್ನ, ಸಿ.ಬಿ. ಲಲಿತಾ, ಬಿ.ಎ. ಧರಣೇಶ್, ಜೆ. ಸಿದ್ದರಾಜು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಮಿನಿ ವಿಧಾನಸೌಧದ ಶಿರಸ್ತೇದಾರ್ ಅನಂತಪದ್ಮನಾಭ ಉಡುಪ ಅವರಿಗೆ ಮನವಿ ಸಲ್ಲಿಸಲಾಯಿತು.ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಹಾಸನ:ವೀರಶೈವ ಸಂಘದವರು 2012-13ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಿದ್ದು ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಶೇ 85ಕ್ಕಿಂತ ಹೆಚ್ಚು ಅಂಕ ಪಡೆದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹಾಗೂ ಶೇ 90ಕ್ಕಿಂತ ಹೆಚ್ಚು ಅಂಕ ಪಡೆದ ನಗರ ಪ್ರದೇಶದ ವಿದ್ಯಾರ್ಥಿಗಳು ಮೂಲ ದಾಖಲಾತಿಗಳೊಂದಿಗೆ ಜುಲೈ 25ರೊಳಗೆ, ಅಧ್ಯಕ್ಷರು/ ಕಾರ್ಯದರ್ಶಿ ಜಿಲ್ಲಾ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘ, ಪುಷ್ಪಗಿರಿ ಬಸವರಾಜೇಂದ್ರ ಪ್ರೌಢಶಾಲೆ, ಹೊಸಲೈನ್ ರಸ್ತೆ ಹಾಸನ ಇಲ್ಲಿಗೆ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)