ಶುಕ್ರವಾರ, ನವೆಂಬರ್ 22, 2019
27 °C

ತೆಂಗಿನ ತೋಟ ಅವಸಾನ: ಸಂಕಷ್ಟದಲ್ಲಿ ರೈತ

Published:
Updated:

ಹೊಸದುರ್ಗ: ಮೂರು ವರ್ಷಗಳಿಂದ ಸಕಾಲದಲ್ಲಿ ಮಳೆಯಾಗದೇ ಇರುವುದರಿಂದ ತಾಲ್ಲೂಕಿನ ಮಾರಬಗಟ್ಟ ಬಳಿ ಅನೇಕ ತೆಂಗಿನ ತೋಟಗಳು ಒಣಗುತ್ತಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಈಗಾಗಲೇ ತಾಲ್ಲೂಕಿನ ಹಲವು ಗ್ರಾಮಗಳ ಕೃಷಿಕರ ಬೋರ್‌ವೆಲ್‌ಗಳು ಸಹ ಬತ್ತಿ ಹೋಗಿವೆ. ಜನತೆ ನೀರಿಗಾಗಿ ಹಾಹಾಕಾರ ಪಡುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿ ಉಂಟಾಗಿದ್ದರೂ ಸಹ ತಾಲ್ಲೂಕಿನ ಬಹುತೇಕ ರೈತರು ದಾಳಿಂಬೆ ಬೆಳೆಗೆ ಮಾರು ಹೋಗಿ ಕೊಳವೆ ಬಾವಿಗಳನ್ನು ಹೆಚ್ಚು ಹೆಚ್ಚು ಕೊರೆಸುತ್ತಿದ್ದಾರೆ. ಇದರಿಂದ ಅನೇಕ ಹಳ್ಳಿಗಳ ಬಾವಿಗಳಲ್ಲಿ ಜಲದ ಮೂಲವೇ ಇಲ್ಲವಾಗಿದೆ.ತಾಲ್ಲೂಕು ವರುಣನ ಅವಕೃಪೆಯಿಂದ ಎರಡು ವರ್ಷ ಭೀಕರ ಬರಗಾಲವನ್ನು ಎದುರಿಸಿದೆ. ಅಂತರ್ಜಲ ಕುಸಿತದಿಂದ ರೈತರ ತೆಂಗಿನ ತೋಟಗಳು ಅವಸಾನದ ಹಂಚನ್ನು ತಲುಪುತ್ತಿವೆ. ಬ್ಯಾಂಕ್‌ನಿಂದ ಮಾಡಿರುವ ಸಾಲವನ್ನು ಹೇಗೆ ತೀರಿಸುವುದು ಎಂದು ಯೋಚಿಸುವ ಪರಿಸ್ಥಿತಿಯಲ್ಲಿ ರೈತನ ಬದುಕು ಸಾಗುತ್ತಿದೆ. ನೀರಿನ ಸೆಲೆ ಇರುವ ಭೂಮಿಯಲ್ಲಿ 400ರಿಂದ 450 ಅಡಿ ಆಳಕ್ಕೆ ಬೋರ್‌ವೆಲ್ ಕೊರೆಸಿದರೂ ನೀರಿನ ಲಭ್ಯತೆ ಅಪರೂಪದ ಸಂಗತಿಯಾಗಿದೆ.ತೆಂಗಿನ ಕಾಯಿಗೂ ಕೆಲವೊಮ್ಮೆ ಸರಿಯಾದ ಬೆಲೆ ಸಿಗುತ್ತಿಲ್ಲ. ಈ ಹಿಂದೆ ಸುತ್ತಮುತ್ತಲ ತಾಲ್ಲೂಕುಗಳಿಗಿಂತಲೂ ಹೊಸದುರ್ಗ ತೆಂಗಿನ ಬೆಳೆಯಲ್ಲಿ ವಿಶೇಷ ಛಾಪು ಮೂಡಿಸಿತ್ತು. ಆದರೆ ಈಗ ನೀರಿನ ಅಭಾವದಿಂದ ತೆಂಗಿನ ಮರದಲ್ಲಿ ಸರಿಯಾಗಿ ಹೊಂಬಾಳೆ ಬಿಡುತ್ತಿಲ್ಲ. ಇಳುವರಿ ಕಡಿಮೆಯಾಗಿದೆ.ಹತ್ತಾರು ವರ್ಷಗಳ ಕಾಲ ಸಾಕಿ ಬೆಳೆಸಿದ ತೆಂಗಿನ ಮರ ಒಣಗುತ್ತಿರುವುದು ರೈತನ ಮನಸ್ಸಿಗೆ ನೋವುಂಟು ಮಾಡಿದೆ. ಒಂದೆರಡು ವಾರದಲ್ಲಿ ಮಳೆ ಬರದಿದಲ್ಲಿ ಅಲ್ಪಸ್ವಲ್ಪ ನೀರು ಬರುತ್ತಿರುವ ಕೊಳವೆ ಬಾವಿಗಳು ಸಹ ಸಂಪೂರ್ಣ ಬತ್ತಿ ಹೋಗುತ್ತವೆ. ಇದರಿಂದ ಜನ-ಜಾನುವಾರುಗಳು ಕುಡಿಯುವ ನೀರಿನ ಸಮಸ್ಯೆಯಿಂದಾಗಿ ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎನ್ನುತ್ತಾರೆ ತಾಲ್ಲೂಕಿನ ರೈತರು.

 

ಪ್ರತಿಕ್ರಿಯಿಸಿ (+)