ತೆಂಗಿನ ಮರ ಬಿದ್ದು ಕಾರ್ಮಿಕನ ಸಾವು

ಶನಿವಾರ, ಜೂಲೈ 20, 2019
27 °C

ತೆಂಗಿನ ಮರ ಬಿದ್ದು ಕಾರ್ಮಿಕನ ಸಾವು

Published:
Updated:

ಬೆಂಗಳೂರು: ಖಾಲಿ ನಿವೇಶನದಲ್ಲಿದ್ದ ತೆಂಗಿನ ಮರವನ್ನು ಕೆಡವುತ್ತಿದ್ದ ಕಾರ್ಮಿಕನ ಮೇಲೆಯೇ ಮರ ಬಿದ್ದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಂಪಿಗೆಹಳ್ಳಿ ಬಳಿಯ ಟೆಲಿಕಾಂ ಲೇಔಟ್‌ನಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.

ತಮಿಳುನಾಡು ಮೂಲದ ವೀರಣ್ಣ ಉರುಫ್ ಬಾಷಾ (50) ಮೃತಪಟ್ಟ ಕಾರ್ಮಿಕ. ಘಟನೆಯಲ್ಲಿ ಅವರ ಪುತ್ರ ವೆಂಕಟೇಶ್ (25) ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮರ ಕೊಯ್ಯುವ ಕೆಲಸ ಮಾಡುತ್ತಿದ್ದ ವೀರಣ್ಣ, ಕುಟುಂಬ ಸದಸ್ಯರೊಂದಿಗೆ ಕೊಡಿಗೇಹಳ್ಳಿಯಲ್ಲಿ ವಾಸವಾಗಿದ್ದರು.

ಟೆಲಿಕಾಂ ಲೇಔಟ್ 12ನೇ ಅಡ್ಡರಸ್ತೆಯಲ್ಲಿ ರಘುನಾಥ್ ಎಂಬುವರಿಗೆ ಸೇರಿದ ನಿವೇಶನವಿದೆ. ಅಮೃತಹಳ್ಳಿ ನಿವಾಸಿಯಾದ ರಘುನಾಥ್, ಆ ನಿವೇಶನದಲ್ಲಿ ಮನೆ ಕಟ್ಟಿಸಲು ಉದ್ದೇಶಿಸಿದ್ದರು. ಈ ಕಾರಣಕ್ಕಾಗಿ ನಿವೇಶನದಲ್ಲಿನ ತೆಂಗಿನ ಮರವನ್ನು ಕತ್ತರಿಸಿ ಹಾಕುವಂತೆ ಅವರು, ವೀರಣ್ಣನಿಗೆ ಹೇಳಿದ್ದರು. ವೀರಣ್ಣ ಅವರು ಮಗ ವೆಂಕಟೇಶ್, ಕಾರ್ಮಿಕರಾದ ಗುಂಡ ಮತ್ತು ಮುರುಗೇಶ್ ಎಂಬುವರ ಜತೆ ಸೇರಿಕೊಂಡು ಮರವನ್ನು ಕತ್ತರಿಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಮರದ ಗರಿಗಳನ್ನೆಲ್ಲ ಕತ್ತರಿಸಿದ ನಂತರ ಅದರ ಬುಡವನ್ನು ಅರ್ಧಕ್ಕೆ ಕೊಯ್ದ ಕಾರ್ಮಿಕರು, ಮರಕ್ಕೆ ಹಗ್ಗ ಕಟ್ಟಿ ಎಳೆಯುತ್ತಿದ್ದರು. ಈ ವೇಳೆ ಮರ ಕಾರ್ಮಿಕರ ಕಡೆಗೆ ವಾಲಿ ಬೀಳಲಾರಂಭಿಸಿತು. ಇದರಿಂದ ಗಾಬರಿಯಾದ ಗುಂಡ ಮತ್ತು ಮುರುಗೇಶ್ ದೂರ ಓಡಿ ಹೋಗಿ ಪ್ರಾಣಾಪಾಯದಿಂದ ಪಾರಾದರು. ಆದರೆ, ವೀರಣ್ಣ ಮತ್ತು ವೆಂಕಟೇಶ್ ಅವರು ದೂರ ಓಡಿ ಹೋಗುವ ವೇಳೆಗೆ ಮರ ಅವರ ಮೇಲೆ ಬಿದ್ದಿತು. ಪರಿಣಾಮ ವೀರಣ್ಣನ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟರು ಎಂದು ಸಂಪಿಗೆಹಳ್ಳಿ ಪೊಲೀಸರು ಹೇಳಿದ್ದಾರೆ.

ವೆಂಕಟೇಶ್ ಅವರ ಕೈ ಮತ್ತು ಕಾಲು ಮುರಿದಿದೆ. ಘಟನೆ ಸಂಬಂಧ ರಘುನಾಥ್ ಅವರ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧನ: ಕನ್ನಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮೂಲದ ಗುಣ ಅಲಿಯಾಸ್ ಗುಣಶೇಖರ್ (32) ಎಂಬಾತನನ್ನು ಬಂಧಿಸಿರುವ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು 35 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಆತ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ರಾತ್ರಿ ವೇಳೆ ಒಳ ನುಗ್ಗಿ ಕಳವು ಮಾಡುತ್ತಿದ್ದ. ಹೀಗೆ ಕಳವು ಮಾಡಿದ ವಸ್ತುಗಳನ್ನು ತಮಿಳುನಾಡು ಮತ್ತು ಪುದುಚೇರಿಗೆ ತೆಗೆದುಕೊಂಡು ಹೋಗಿ ಮಾರುತ್ತಿದ್ದ. ಅದರಿಂದ ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಗುಣಶೇಖರ್ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ 15ಕ್ಕೂ ಹೆಚ್ಚು ಕನ್ನಕಳವು ಪ್ರಕರಣಗಳಿವೆ. ಮಡಿವಾಳ, ಜೆ.ಪಿ.ನಗರ, ಸಿಟಿ ಮಾರುಕಟ್ಟೆ, ಸಿಸಿಬಿ ಹಾಗೂ ಹುಳಿಮಾವು ಪೊಲೀಸರು ಆತನನ್ನು ಈ ಹಿಂದೆಯೇ ಹಲವು ಬಾರಿ ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆದರೆ, ಪ್ರತಿ ಬಾರಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಅಪರಾಧ ಕೃತ್ಯಗಳನ್ನು ಮುಂದುವರಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಕಲಿ ಸಿ.ಡಿ ಮಾರಾಟ; ಸೆರೆ: ನಕಲಿ ಸಿ.ಡಿ ಮತ್ತು ಡಿವಿಡಿ ಮಾರುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಹುಳಿಮಾವು ಸಮೀಪದ ಪೈಲೇಔಟ್‌ನ ಮುರುಗೇಶ್ (33) ಮತ್ತು ವೆಂಕಟೇಶ್ (25) ಬಂಧಿತರು. ಆರೋಪಿಗಳಿಂದ ಸುಮಾರು ನಾಲ್ಕು ಲಕ್ಷ ರೂಪಾಯಿ ಮೌಲ್ಯದ 3,895 ನಕಲಿ ಡಿವಿಡಿ ಹಾಗೂ ಅಶ್ಲೀಲ ಸಿ.ಡಿಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳು ಬನ್ನೇರುಘಟ್ಟ ರಸ್ತೆಯಲ್ಲಿ ಸಪ್ತಗಿರಿ ಎಲೆಕ್ಟ್ರಿಕಲ್ಸ್ ಹೆಸರಿನ ಅಂಗಡಿ ಇಟ್ಟುಕೊಂಡು ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯ ಹೊಸ ಚಲನಚಿತ್ರಗಳ ನಕಲಿ ಡಿವಿಡಿ ಮಾರುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿ ಅವರನ್ನು ಬಂಧಿಸಲಾಯಿತು. ಬಂಧಿತರ ವಿರುದ್ಧ ಮೈಕೊಲೇಔಟ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry