ತೆಂಗು, ಖುಷ್ಕಿ ಬೇಸಾಯವೇ ಬದುಕು

7
ರಾಮನಗರ ಜಿಲ್ಲೆಯಲ್ಲಿ ಕುಡಿಯುವ ನೀರಿಗೂ ಬರ

ತೆಂಗು, ಖುಷ್ಕಿ ಬೇಸಾಯವೇ ಬದುಕು

Published:
Updated:
ತೆಂಗು, ಖುಷ್ಕಿ ಬೇಸಾಯವೇ ಬದುಕು

ರಾಮನಗರ: ಜಿಲ್ಲೆಯನ್ನು ಎರಡು ವರ್ಷ ಕಾಡಿದ ಬರಗಾಲದತೀವ್ರತೆ  ಈ ವರ್ಷ ಅಷ್ಟಾಗಿಲ್ಲ. ಆದರೂ ಸಂಪೂರ್ಣ ಬರ ಮುಕ್ತ ವಾತಾವರಣವೇನೂ ಕಾಣುತ್ತಿಲ್ಲ. ಇಡೀ ಜಿಲ್ಲೆಯಲ್ಲಿ ವಾಡಿಕೆಯಷ್ಟು ಮಳೆಯಾಗದಿದ್ದರೂ ಚದುರಿದಂತೆ ಅಲ್ಲಲ್ಲಿ ಬಿದ್ದ ಸಾಧಾರಣ ಮಳೆಯಿಂದ ರೈತರು ಕೃಷಿ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.ಆರಂಭದಲ್ಲಿ ಅಬ್ಬರಿಸಿದ ಮುಂಗಾರು ನಂತರ ಎರಡು ತಿಂಗಳು ತಣ್ಣಗಾದ ಪರಿಣಾಮ ಕೃಷಿಕರಲ್ಲಿ ಆತಂಕ ಹೆಚ್ಚಾಗಿತ್ತು. ಇದರಿಂದ ಹಲವು ಬೆಳೆಗಳು ಒಣಗಿ ನಿಂತವು. ಈಗ ಸೆಪ್ಟೆಂಬರ್ ಮೊದಲ ವಾರದಲ್ಲಿ ಉತ್ತಮ ಮಳೆಯಾಗಿದ್ದು, ರೈತರಲ್ಲಿ ಒಂದಿಷ್ಟು ಭರವಸೆ  ಮೂಡಿಸಿದೆ. ಹೀಗಾಗಿ ಜಿಲ್ಲೆಯ ಕೃಷಿಕರು ಈ ಋತುಮಾನದ ಎರಡನೇ ಇನ್ನಿಂಗ್ಸ್‌ನ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ವರ್ಷದ ಏಪ್ರಿಲ್, ಮೇ ತಿಂಗಳಲ್ಲಿ ಮುಂಗಾರು ಪೂರ್ವ ಮಳೆ ಸಾಧಾರಣವಾಗಿ ಸುರಿಯಿತು. ಇದು ಮಾಗಡಿಯಲ್ಲಿ ಎಳ್ಳು, ಅಲಸಂದೆ, ಅವರೆ, ನೆಲಗಡಲೆ ಮತ್ತಿತರ ಬೆಳೆಗಳಿಗೆ ಅನುವು ಮಾಡಿಕೊಟ್ಟಿತು. ಜುಲೈ, ಆಗಸ್ಟ್‌ನಲ್ಲಿ ಮಳೆ ಕೊರತೆ: ಜೂನ್ ತಿಂಗಳಿನಲ್ಲಿ ಮುಂಗಾರು ಮಳೆ ಜಿಲ್ಲೆಯಲ್ಲಿ ವಾಡಿಕೆಗಿಂತ (63 ಮಿ.ಮೀ) ಹೆಚ್ಚಿನ (93.8 ಮಿ.ಮೀ) ಪ್ರಮಾಣದಲ್ಲಿ ಸುರಿದ ಕಾರಣ ರೈತರು  ಕೃಷಿ ಕಾರ್ಯದಲ್ಲಿ ಮಗ್ನರಾಗಿದ್ದರು. ಭೂಮಿ ಹದ ಮಾಡಿಕೊಂಡು ಬಿತ್ತನೆ ಮಾಡಿದ್ದರು. ಆದರೆ ಜುಲೈನಲ್ಲಿ ಅಷ್ಟಾಗಿ ಮಳೆಯಾಗದ ಕಾರಣ  ಅವರ ಶ್ರಮ ವ್ಯರ್ಥವಾಗುವ ಲಕ್ಷಣಗಳು ಕಂಡುಬಂದಿದ್ದವು.ಜುಲೈನಲ್ಲಿ  82.8 ಮಿ.ಮೀನಷ್ಟು ವಾಡಿಕೆ ಮಳೆಯಾಗಬೇಕಿತ್ತು. ಆದರೆ ಬಿದ್ದದ್ದು ಕೇವಲ 56.1 ಮಿ.ಮೀ. ಅಸಮರ್ಪಕ ಮಳೆಯಿಂದ ಹಲವೆಡೆ ಚಿಗುರಿದ್ದ ಬೆಳೆ ಒಣಗಿ ಹೋಯಿತು. ಆಗಸ್ಟ್‌ನಲ್ಲಾದರೂ ಉತ್ತಮ ಮಳೆಯಾಗುತ್ತದೆ ಎಂದು ನಿರೀಕ್ಷಿಸಿದ್ದ ರೈತರಿಗೆ ಮತ್ತೆ ನಿರಾಸೆ ಕಾದಿತ್ತು. ರಾಮನಗರ, ಚನ್ನಪಟ್ಟಣ, ಮಾಗಡಿ ತಾಲ್ಲೂಕಿನಲ್ಲಿ ವಾಡಿಕೆಗಿಂತ ಬಹಳ ಕಡಿಮೆ ಮಳೆಯಾದರೆ, ಕನಕಪುರ ತಾಲ್ಲೂಕಿನಲ್ಲಿ ಮಾತ್ರ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಯಿತು. ಮೂರು ತಾಲ್ಲೂಕುಗಳ ರೈತರು ಸಮರ್ಪಕ ಮಳೆಯಿಲ್ಲದೆ ಕಂಗಾಲಾಗಿ, ಗ್ರಾಮಗಳಲ್ಲಿ ದೇವರಿಗೆ ವಿಶೇಷ ಪೂಜೆಗಳನ್ನು ಮಾಡಿ ಮಳೆರಾಯನನ್ನು ಆರಾಧಿಸತೊಡಗಿದರು.ಇದೀಗ ಚೇತರಿಕೆ: ಸೆಪ್ಟೆಂಬರ್ ಮೊದಲ ವಾರದ ಮೂರು ದಿನಗಳಲ್ಲಿ ಜಿಲ್ಲೆಯಾದ್ಯಂತ ಸಾಕಷ್ಟು ಉತ್ತಮ ಮಳೆಯಾಗಿದೆ. ಸೆಪ್ಟೆಂಬರ್‌ನಲ್ಲಿ ಸುರಿಯಬೇಕಾದ ಮಳೆಯಲ್ಲಿ ಶೇ 45ರಷ್ಟು ಈ ಮೂರು ದಿನದಲ್ಲಿಯೇ ಸುರಿದಿದೆ. ಇದೀಗ ಪುನಃ ರೈತರು ಕೃಷಿ ಕೈಗೊಳ್ಳಲು ಮುಂದಾಗಿದ್ದಾರೆ. ಕೆಲವೆಡೆ ಎರಡನೇ ಬಾರಿಗೆ ರಾಗಿ ನಾಟಿ ಮಾಡುವ ಕಾಯಕ ಕೈಗೊಂಡಿದ್ದಾರೆ.ಸಮರ್ಪಕವಾಗಿ ಮಳೆಯಾಗದ ಕಾರಣ ಯಾವುದೇ ಕೆರೆ-ಕುಂಟೆಗಳು ತುಂಬಿಲ್ಲ. ಹಳ್ಳ ಕೊಳ್ಳಗಳಲ್ಲಿ ನೀರು ಹರಿಯುವ ಮಳೆಯೂ ಆಗಿಲ್ಲ. ಇದರಿಂದಾಗಿ  ಅಂತರ್ಜಲ ಮಟ್ಟದಲ್ಲಿ ಏರಿಕೆಯೂ ಕಂಡಿಲ್ಲ. ಸ್ಥಗಿತಗೊಂಡಿದ್ದ ಕೊಳವೆ ಬಾವಿಗಳಿಗೆ ಇನ್ನೂ ನೀರು ಬಂದಿಲ್ಲ. ಇದೆಲ್ಲದರ ಪರಿಣಾಮ ಕುಡಿಯುವ ನೀರಿನ ಅಭಾವ ಇದೆ. ಸಾಧಾರಣ ಮಳೆಯಾಗಿರುವ ಕಾರಣ ಮೇವಿನ ಕೊರತೆ ಅಷ್ಟಾಗಿ ಎದುರಾಗಿಲ್ಲ.ಒಣಗಿರುವ ಮಾವು, ತೆಂಗು: ಎರಡು ವರ್ಷದಿಂದ ಸತತವಾಗಿ ಬರಗಾಲ ಇರುವ ಕಾರಣ ಪ್ರಮುಖ ತೋಟಗಾರಿಕೆ ಬೆಳೆಗಳಾದ ಮಾವು ಮತ್ತು ತೆಂಗು ಸೊರಗಿವೆ. ನೀರಿಲ್ಲದೆ ಒಣಗುತ್ತಿವೆ. ಇಲ್ಲಿಯವರೆಗೆ ಸುರಿದಿರುವ ಮಳೆ ಖುಷ್ಕಿ ಬೇಸಾಯಕ್ಕೆ ಪೂರಕವಾಗಿದೆಯೇ ಹೊರತು, ತೋಟಗಾರಿಕೆ ಹಾಗೂ ನೀರಾವರಿ ಬೇಸಾಯಕ್ಕೆ ಸಹಕಾರಿಯಾಗಿಲ್ಲ. ಹನಿ ನೀರಾವರಿ ಹಾಗೂ ಸೂಕ್ತ ನಿರ್ವಹಣೆ ಹೊಂದಿರುವ ಕೆಲ ತೋಟಗಳನ್ನು ಹೊರತು ಪಡಿಸಿದರೆ ಜಿಲ್ಲೆಯ ಬಹುತೇಕ ಭಾಗದಲ್ಲಿ ಮಾವು ಮತ್ತು ತೆಂಗಿನ ಮರಗಳು ಒಣಗಿರುವ ದೃಶ್ಯಗಳು ಸಾಮಾನ್ಯವಾಗಿ ಕಂಡು ಬರುತ್ತವೆ.ಭತ್ತ ಕುಸಿತ: ಕೆರೆ- ಕುಂಟೆಗಳಲ್ಲಿ ನೀರಿಲ್ಲದ ಕಾರಣ ಭತ್ತ ಬೆಳೆಯುವ ರೈತರು ಬೇರೆ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಈ ಮೊದಲು 6,629 ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗುತ್ತಿತ್ತು. ಆದರೆ ಈ ವರ್ಷ ಕೊಳವೆ ಬಾವಿ ಹೊಂದಿರುವ ಕೆಲ ರೈತರು (2,118 ಹೆಕ್ಟೇರ್) ಮಾತ್ರ ಭತ್ತದ ಸಾಹಸಕ್ಕೆ ಮುಂದಾಗಿದ್ದಾರೆ.

ಮಳೆ ಮಾಹಿತಿ (2013ರ ಜನವರಿ- ಸೆಪ್ಟೆಂಬರ್ 5)

ತಾಲ್ಲೂಕು ವಾಡಿಕೆ ಮಳೆ ವಾಸ್ತವ

  (ಮಿ.ಮೀಗಳಲ್ಲಿ)

ರಾಮನಗರ 647.4 599.6

ಚನ್ನಪಟ್ಟಣ 610 471.1

ಕನಕಪುರ 542 584.5

ಮಾಗಡಿ 668 410.1

ಜಿಲ್ಲೆಯಲ್ಲಿ   616.9 516.3

(ಒಟ್ಟು ಸರಾಸರಿ)

ಜಿಲ್ಲೆಯಲ್ಲಿ ಬಿತ್ತನೆ ಗುರಿ ಮಾಡಿದ್ದ ಒಟ್ಟು ಪ್ರದೇಶ 1,20,260 ಹೆಕ್ಟೇರ್,

ಒಟ್ಟಾರೆ ಬಿತ್ತನೆ ಆಗಿರುವ ಪ್ರದೇಶ 1,15,890 ಹೆಕ್ಟೇರ್, ಬಿತ್ತನೆ ಸಾಧನೆ- ಶೇ 96.3

ರಾಮನಗರ ಜಿಲ್ಲೆಯ ವಿವಿಧ ಬೆಳೆಗಳ ಬಿತ್ತನೆ ವಿವರ (ಹೆಕ್ಟೇರ್‌ಗಳಲ್ಲಿ)

ಬೆಳೆ ಗುರಿ ಸಾಧನೆ

ಭತ್ತ 6629 2118

ರಾಗಿ 75,626 76,883

ಮುಸುಕಿನ ಜೋಳ 2,087 3,397

ತೊಗರಿ 5,822 5,822

ಅಲಸಂದೆ 2979 3675

ಹುರುಳಿ 4695 27

ಅವರೆ 18,375 18,461

ನೆಲಗಡಲೆ 7387 5353

ಎಳ್ಳು 3998 5135

ಕಬ್ಬು 818 0

‘ಮಳೆರಾಯ ಮುನಿಸಿಕೊಳ್ಳಬೇಡ’

ಎರಡು ತಿಂಗಳ ಹಿಂದೆ ಮಳೆ­ಯಾದಾಗ ರಾಗಿ ಬಿತ್ತಿದ್ದೆವು. ನಂತರ ಮಳೆ ಕೈಕೊಟ್ಟಿತು. ಇದರಿಂದ ಚಿಗು­ರಿದ ರಾಗಿ ನೆಲಕಚ್ಚಿತು. ಇದೀಗ ಎರಡನೇ ಬಾರಿ ನಾಟಿ ಮಾಡು­ತ್ತಿದ್ದೇವೆ. ಮಳೆ ಚೆನ್ನಾಗಿ ಬಂದರೆ ಮೂರು ತಿಂಗಳಲ್ಲಿ ರಾಗಿ ಬೆಳೆ ನೋಡಬಹುದು. ಮಳೆ ಮಾಯವಾದರೆ ಬೆಳೆ ಮಣ್ಣು ಪಾಲಾಗುತ್ತದೆ. ಮಳೆರಾಯ ಮುನಿಸಿಕೊಳ್ಳದಿರಲಿ.

- ಪದ್ದಯ್ಯ, ಶಾನುಬೋಗನಹಳ್ಳಿ.‘ಮಳೆ ಬಂದರಷ್ಟೇ ರಾಗಿ’


ಮಳೆ ನಂಬಿಕೊಂಡು ಕೃಷಿ ಮಾಡೋರು ನಾವು. ಮಳೆಗಾಗಿ ದಿನಾ ಮುಗಿಲು ನೋಡುತ್ತೇವೆ. ಮಳೆ ಬಂದರೆ ಮಾತ್ರ ರಾಗಿ ನೋಡೋದು. ಇಲ್ಲದಿದ್ದರೆ ಅದಕ್ಕೂ ಕುತ್ತು ಬರುತ್ತದೆ. ಎರಡು ವರ್ಷದಿಂದ ಸರಿಯಾಗಿ ಮಳೆ­ಯಾಗದ ಕಾರಣ ರಾಗಿ ಬೆಳೆಯಲೂ ಆಗಿಲ್ಲ. ಈ ವರ್ಷ ತಡವಾಗಿಯಾದರೂ ಮಳೆರಾಯ ಬಂದಿದ್ದಾನೆ. ಅದ­ಕ್ಕಾಗಿ ಈಗ ನಾಟಿ ಮಾಡುತ್ತಿದ್ದೇವೆ. 2-3ತಿಂಗಳು ಆಗೊಮ್ಮೆ ಈಗೊಮ್ಮೆ ಮಳೆ ಬಂದರೆ ಈ ರಾಗಿ ಕೈಗೆ ಬರುತ್ತದೆ. ಅದಕ್ಕಾಗಿ ದೇವರನ್ನು ಪ್ರಾರ್ಥಿಸುತ್ತಿದ್ದೇನೆ.

- ಭಾಗ್ಯಮ್ಮ, ಶಾನುಬೋಗನಹಳ್ಳಿ.‘ಈ ವರ್ಷವಾದರೂ ರಾಗಿ ಬರಲಿ’


ನಮ್ಮದು ಮರಳುಹೊಲ. ಎಷ್ಟು ಮಳೆ ಬಿದ್ದರೂ ಸಾಲದು. ಅಂತಹುದರಲ್ಲಿ ಎರಡು ವರ್ಷದಿಂದ ಮಳೆಯೇ ಆಗಿಲ್ಲ. ಎರಡು-ಮೂರು ದಿನದಿಂದ ಸ್ವಲ್ಪ ಮಳೆಯಾಗಿದೆ. ಸ್ವಲ್ಪ ತೇವಾಂಶ ಇರುವ ಕಾರಣಕ್ಕೆ ರಾಗಿ ನಾಟಿ ಮಾಡುತ್ತಿದ್ದೇನೆ. ದೇವರ ಕೃಪೆಯಿಂದ ಈ ಬಾರಿಯಾದರೂ ರಾಗಿ ಬೆಳೆ ಬರಲಿ.

- ಹೇಮಾ, ವಡ್ಡರದೊಡ್ಡಿ.

ಶೇ 96.3ರಷ್ಟು ಗುರಿ ಸಾಧನೆ

2011–-12ರಲ್ಲಿ  ಕನಕಪುರ, ಚನ್ನಪಟ್ಟಣ, ಮಾಗಡಿ­ಯನ್ನು ಸರ್ಕಾರ ಬರಪೀಡಿತ ತಾಲ್ಲೂಕು ಎಂದು ಘೋಷಿ­ಸಿತ್ತು. 2012-–13ರಲ್ಲಿ ಇಡೀ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲಾಯಿತು. ಆದರೆ ಈ ವರ್ಷ ಜಿಲ್ಲೆಯಲ್ಲಿ ವಾಡಿಕೆ ಪ್ರಮಾಣಕ್ಕೆ ಹತ್ತಿರವಾಗುವಷ್ಟು ಮಳೆಯಾಗಿದೆ. ಇನ್ನಷ್ಟು ಮಳೆ ನಿರೀಕ್ಷಿಸಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಬಿತ್ತನೆಯಲ್ಲಿ ಶೇ 96.3ರಷ್ಟು ಗುರಿ ಸಾಧಿಸಲಾಗಿದೆ.

ಕೆರೆ- ಕುಂಟೆಗಳು ತುಂಬುವಂತಹ ಮಳೆ ಆಗದಿದ್ದರೂ ಖುಷ್ಕಿ ಅಥವಾ ಒಣ ಬೇಸಾಯಕ್ಕೆ ಪೂರಕವಾಗುವಷ್ಟು ಮಳೆಯಾಗಿದೆ.  ಶೇ 95ರಷ್ಟು ಖುಷ್ಕಿ ಬೇಸಾಯವನ್ನೇ ಅವಲಂಬಿಸಿದೆ. ಇನ್ನೂ ಮಳೆ ಬಾರದೆ ಶೇ 50ಕ್ಕೂ ಹೆಚ್ಚು ಬೆಳೆ ನಷ್ಟ ಕಂಡುಬಂದರೆ ಮಾತ್ರ ಬರ ಎಂದು ಘೋಷಿಸಬಹುದು. ಆದರೆ ಪ್ರಸ್ತುತ ಆ ಲಕ್ಷಣ ಇಲ್ಲ.

- ಅಣ್ಣಯ್ಯ ,ಜಂಟಿ ಕೃಷಿ ನಿರ್ದೇಶಕ, ರಾಮನಗರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry