ತೆಗ್ಗೆಳ್ಳಿ ಜನರಿಗೆ ಹಳ್ಳದ ನೀರೇ ಗತಿ!

7

ತೆಗ್ಗೆಳ್ಳಿ ಜನರಿಗೆ ಹಳ್ಳದ ನೀರೇ ಗತಿ!

Published:
Updated:

ಕೆಂಭಾವಿ: ರಾಜ್ಯದ ಪ್ರತಿ ಗ್ರಾಮಗಳಿಗೂ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸಿದ್ದೇವೆ ಎಂದು ಹೇಳುವ ರಾಜ್ಯ ಸರ್ಕಾರಕ್ಕೆ ಸವಾಲು ಎಂಬಂತಿವೆ ಸಮೀಪದ ತೆಗ್ಗೆಳ್ಳಿ ಹಾಗೂ ಶಾಖಾಪುರ ಅವಳಿ ಗ್ರಾಮಗಳು.ಇಂದಿಗೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲಿನ ಜನರಿಗೆ ಇಲ್ಲ. ಹಳ್ಳದ ನೀರೇ ಇವರಿಗೆ ಎಲ್ಲದಕ್ಕೂ ಆಧಾರ. ಇಲ್ಲಿನ ಜನರು ದಶಕಗಳಿಂದ ಅನಿವಾರ್ಯವಾಗಿ ಹಳ್ಳದ ನೀರನ್ನೇ ಕುಡಿಯುತ್ತಾ ಬಂದಿದ್ದಾರೆ. ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಹಾಕಿದ ಯೋಜನೆಗಳು ಸಫಲವಾಗದೆ, ಕೇವಲ ಗುತ್ತಿಗೆದಾರರ ಜೇಬು ತುಂಬಿವೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.ಕುಡಿಯುವ ನೀರು ಒದಗಿಸಲು ಜಿಲ್ಲಾ ಪಂಚಾಯಿತಿ ಹಾಗೂ ವಿವಿಧ ಯೋಜನೆಗಳಡಿ ಮುದನೂರಿನಿಂದ -ತೆಗ್ಗೆಳ್ಳಿಗೆ, ಯಡಿಯಾಪುರದಿಂದ- ಶಾಖಾಪುರಕ್ಕೆ ಮತ್ತು ಮಾವಿನಮಟ್ಟಿ ಗ್ರಾಮದಿಂದಲೂ ಪೈಪ್‌ಲೈನ್ ಹಾಕಲಾಗಿದೆ. ಆದರೆ ನೀರು ಮಾತ್ರ ಗ್ರಾಮದವರೆಗೆ ಬರಲೇ ಇಲ್ಲ ಎಂಬುದು ಗ್ರಾಮಸ್ಥರ ದೂರು.“ಏನ್ ಮಾಡೊದ್ರಿ ಸಾಹೇಬರಾ ನಮ್ಮುರಾಗ ಕುಡಿಲಿಕ್ಕಿ ನೀರ ಬರಂಗಿಲ್ರಿ. ಪೈಪ್ ಹಾಕ್ಯರ್ರಿ, ಆದ್ರ ಮೊದಲ ಅದರಾಗ ಕಣ್ಣಿರ ಬಂದ್ಹಂಗ್ ನೀರ ಬರತಿತ್ರಿ. ಆದ್ರ ಈಗ ಅದೂ ಬರಲಾಕತ್ತಿಲ್ಲ ನೋಡ್ರಿ. ಎಲೆಕ್ಷನ್ ಬಂದಾಗ ಎಲ್ಲಾರೂ ಬಂದು ನಿಮ್ಮೂರಿಗಿ ಕುಡೋ ನೀರಿಂದು ಭಾಳ ತೊಂದ್ರಿ ಐತಿ ಅದನ್ನ ನಾವು ಮಾಡಸ್ತಿವಿ. ನಮಗ ವೋಟ್ ಹಾಕ್ರಿ ಅಂತ ಹೇಳಿ ಹೋದವ್ರ, ಆಮ್ಯಾಕ ಇಕಡಿ ಮಾರಿನೂ ಮಾಡಂಗಿಲ್ಲ ನೋಡ್ರಿ” ಎಂದು ಗ್ರಾಮದ ನಾಗಪ್ಪ ತಮ್ಮ ಅಳನ್ನು ತೋಡಿಕೊಂಡರು.ಇದು ಕೃಷ್ಣಾ ಭಾಗ್ಯ ಜಲ ನಿಗಮದ ನಾರಾಯಣಪುರ ಎಡದಂಡೆ ಕಾಲುವೆಯ ಪ್ರದೇಶವಾಗಿದ್ದು, ಇಲ್ಲಿ ಬತ್ತದ ಗದ್ದೆಗಳೆ ಹೆಚ್ಚು. ಗದ್ದೆಗಳಲ್ಲಿ ಬತ್ತ ಚೆನ್ನಾಗಿ ಬೆಳೆಯಲಿಯೆಂದು ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಸಿಂಪಡಿಸುತ್ತಾರೆ. ಕ್ರೀಮಿನಾಶಕ, ರಸಗೊಬ್ಬರದ ಅಂಶವನ್ನು ಹೊಂದಿದ ಗದ್ದೆಯ ನೀರು ನೇರವಾಗಿ ಹಳ್ಳಕ್ಕೆ ಸೇರುತ್ತಿದೆ. ಇದರಿಂದಾಗಿ ಹಳ್ಳದ ನೀರಿನಲ್ಲಿ ರಾಸಾಯನಿಕಗಳ ಮಿಶ್ರಣ ಆಗುತ್ತಿದೆ. ಆದರೆ ಬೇರೆ ದಾರಿಯಿಲ್ಲದೇ ಅದೇ ನೀರನ್ನು ಇಲ್ಲಿನ ಜನರು ಕುಡಿಯಬೇಕಾಗಿದೆ. ಇದರಿಂದಾಗಿ ನಿತ್ಯವೂ ಮಾರಕ ರೋಗಗಳ ಭಯ ಇಲ್ಲಿನ ಜನರನ್ನು ಆವರಿಸುತ್ತಲೇ ಇದೆ.ಇಷ್ಟೆಲ್ಲ ನಡೆಯುತ್ತಿದ್ದರೂ, ಆಡಳಿತ ವ್ಯವಸ್ಥೆ ಮಾತ್ರ ಯಾವುದೇ ಪರಿಹಾರಕ್ಕೆ ಮುಂದಾಗದಿರುವುದು ವಿಪರ್ಯಾಸದ ಸಂಗತಿ. ಕಲುಷಿತ ನೀರೇ ಇಲ್ಲಿನ ಜನರಿಗೆ ಗತಿ.

ಅದೇ ರೀತಿ ಶೌಚಾಲಯಗಳಿಲ್ಲ. ಊರಿಗೆ ಸಂಪರ್ಕಿಸುವ ರಸ್ತೆ ದುರಸ್ತಿ ನಡೆಯುತ್ತಿದ್ದು, ಜನರು ಹಳ್ಳದ ನೀರಿನಲ್ಲಿಯೇ ಹಾದು ಹೋಗಬೇಕಾಗಿದೆ.ಕುಡಿಯುವ ನೀರಿನ ವ್ಯವಸ್ಥೆಗಾಗಿ ಸರ್ಕಾರ ಪ್ರತಿವರ್ಷ ವಿವಿಧ ಯೋಜನೆಗಳಡಿ ನೂರಾರು ಕೋಟಿ ರೂಪಾಯಿ ಖರ್ಚು ಮಾಡುತ್ತದೆ. ಆದರೆ ಯೋಜನೆಗಳು ಗ್ರಾಮೀಣ ಪ್ರದೇಶದ ಜನರಿಗೆ ಎಷ್ಟರ ಮಟ್ಟಿಗೆ ತಲುಪುತ್ತವೆ ಎಂಬುದರ ಬಗ್ಗೆ ಯಾರೋಬ್ಬರು ಕೂಡಾ ಯೋಚಿಸುತ್ತಿಲ್ಲ. ಯೋಜನೆಗಳಿಗಾಗಿ ಬರುವ ಸರ್ಕಾರದ ಹಣ ಗ್ರಾಮಗಳಿಗೆ ತಲುಪುವುದೇ ಇಲ್ಲ ಎಂಬುದಕ್ಕೆ ತೆಗ್ಗಳ್ಳಿ-ಶಾಖಾಪುರ ಗ್ರಾಮಗಳೇ ಸಾಕ್ಷಿ ಎನ್ನಬಹುದಾಗಿದೆ.ಕ್ಷೇತ್ರದ ಶಾಸಕರು ಯುವಕರಾಗಿದ್ದು, ಗ್ರಾಮಗಳಿಗೆ ಮೂಲಸೌಲಭ್ಯ ಕಲ್ಪಿಸಲು ಪಣ ತೊಟ್ಟಿದ್ದು, ಅವರ ಅಭಿವೃದ್ಧಿ ಕಾರ್ಯ ತೆಗ್ಗೆಳ್ಳಿ-ಶಾಕಾಪುರದಿಂದಲೇ ಪ್ರಾರಂಭವಾಗಲಿ ಎಂಬುವುದು ಇಲ್ಲಿನ ಜನರ ಬೇಡಿಕೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry