ಶುಕ್ರವಾರ, ಜೂನ್ 18, 2021
24 °C

ತೆರವು ಕಾರ್ಯಾಚರಣೆಗೆ ತೀವ್ರ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಾಳಕೊಪ್ಪ: ಕೆರೆಯ ಜಾಗದಲ್ಲಿ ಅಕ್ರಮವಾಗಿ ಸಾಗುವಳಿ ಮಾಡುವ ಜತೆಗೆ, ಮನೆ ಸಹ ಕಟ್ಟಿಕೊಂಡು ವಾಸಿಸುತ್ತಿದ್ದಾರೆ ಎಂದು ಆರೋಪಿಸಿ ತಹಶೀಲ್ದಾರ್ ನೇತೃತ್ವದ ತಂಡ ಆ ಸ್ಥಳವನ್ನು ತೆರೆಗೊಳಿಸಲು ಬಂದಾಗ ಗ್ರಾಮಸ್ಥರಿಂದ ತೀವ್ರ ಪ್ರತಿರೋಧವೊಡ್ಡಿದ ಘಟನೆ ಮಂಗಳವಾರ ಶಿರಾಳಕೊಪ್ಪ ಪಟ್ಟಣದ ಕುಸ್ಕೂರು ಗ್ರಾಮದಲ್ಲಿ ನಡೆದಿದೆ.ಸುಮಾರು 50 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ಈ ಜಾಗದಲ್ಲಿ  ಬ್ಯಾಡದ ಕಟ್ಟೆ ಇತ್ತು ಎಂದು ಹೇಳಲಾಗುತ್ತಿದೆ. ಸರ್ವೇನಂ. 84ರಲ್ಲಿ ನಮೂದಾಗಿರುವಂತೆ 1974ರಲ್ಲಿ ಅಧಿಕಾರಿಗಳು ನೀಡಿದ ಕೈಬರಹದ ಪಹಣಿಯಲ್ಲಿ ಈ ಸ್ಥಳವನ್ನು ತುಳಚಾ ನಾಯ್ಕರಿಗೆ ಸೇರುತ್ತದೆ ಎಂದು ನಮೂದಿಸಲಾಗಿದೆ. ಈ ಜಾಗದಲ್ಲಿ ಬಂಜಾರ ಸಮುದಾಯದ 50ಕ್ಕೂ ಹೆಚ್ಚು ಮನೆಗಳಿದ್ದು, ಕೆಲವರು ಉಳುಮೆ ಸಹ ಮಾಡುತ್ತಿದ್ದಾರೆ.

ಈ ಕೆರೆಯ ಅಭಿವೃದ್ಧಿಗೆ ಎನ್‌ಆರ್‌ಇಜಿಯಲ್ಲಿ ಕಿಯಾ ಯೋಜನೆ ಸಹ ರೂಪಿಸಲಾಗಿತ್ತು.

 

ಆದರೆ, ಈ ಸ್ಥಳದಲ್ಲಿ ಕೆರೆ ಇರುವ ಯಾವುದೇ ಲಕ್ಷಣಗಳಿಲ್ಲ. ಕೆರೆಯನ್ನು ಪುನಃ ನಿರ್ಮಾಣ ಮಾಡಬೇಕು. 1906-1907ರ ದಾಖಲಾತಿ ಪ್ರಕಾರ ಅಧಿಕೃತವಾಗಿ ಯಾವುದೇ ಅಚ್ಚುಕಟ್ಟುದಾರರು ಇಲ್ಲವಾದ್ದರಿಂದ ಕೆರೆ ನಿರ್ಮಾಣ ಆದರೆ ಪ್ರಯೋಜನವಾಗದು ಎಂದು 1996ರಲ್ಲಿ ಜಿ.ಪಂ. ಎಂಜಿನಿಯರ್ ಸರ್ಕಾರಕ್ಕೆ ವರದಿಯನ್ನು ಕೂಡ ನೀಡಿದ್ದಾರೆ.

 

ಹಾಗಾಗಿ, ಸರ್ಕಾರದ ಹಣ ಪೋಲಾಗುತ್ತದೆಯೇ ವಿನಃ ಉಪಯೋಗವಾಗುವುದಿಲ್ಲ. ಆದ್ದರಿಂದ, ತೆರವು ಕಾರ್ಯಾಚರಣೆ ಕೈಬಿಡಬೇಕು ಎಂದು ಅರಣ್ಯ ಹಕ್ಕು ಸಮಿತಿಯ ಹನುಮನಾಯ್ಕ ಆಗ್ರಹಿಸಿದರು.ಗ್ರಾಮದ ವಿ. ಸೋಮಶೇಖರಪ್ಪ ಸರ್ವೇ ನಂ. 84ರ ಪಕ್ಕದಲ್ಲಿಯೇ 3.15 ಜಮೀನು ಹೊಂದಿದ್ದು, ಅಕ್ರಮವಾಗಿ ಹಲವಾರು ಎಕರೆ ಜಮೀನನ್ನು ಒತ್ತುವರಿ  ಮಾಡಿದ್ದಾರೆ. ಆ ಜಾಗವನ್ನು ತೆರವುಗೊಳಿಸಿ, ಊರಿನ ಜನರಿಗೆ ಉಪಯೋಗ ಆಗುವ ಕಾರ್ಯಕ್ಕೆ ಬಳಸಬೇಕು ಎಂದು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಬಡವರು, ಪರಿಶಿಷ್ಟ ಜಾತಿಗೆ ಸೇರಿದ ನಮ್ಮವರು ಸಾಗುವಳಿ ಮಾಡಿರುವ ಜಮೀನು ತೆರವುಗೊಳಿಸಲು ಬಂದಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಲಕ್ಷ್ಮಣ ನಾಯ್ಕ ಎಚ್ಚರಿಸಿದರು.ತಹಶೀಲ್ದಾರ್ ಶಿವಕುಮಾರ  ಮಾತನಾಡಿ, ಗ್ರಾಮದ ಸೋಮಶೇಖರಪ್ಪ ಉಪ ಲೋಕಾಯಕ್ತ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದು, ಸಮನ್ಸ್ ಜಾರಿ ಆಗಿರುವುದರಿಂದ ಕಾನೂನು ಕ್ರಮ  ಜರುಗಿಸ ಬೇಕಾದ್ದು ಆದ್ಯ ಕರ್ತವ್ಯವಾಗಿದೆ. ಕೆರೆ-ಕಟ್ಟೆಗಳು ಬಿ ಖರಾಬ ಆಗಿರುವುದರಿಂದ ಸಕ್ರಮ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಸೋಮಶೇಖರಪ್ಪ ಒತ್ತುವರಿ ಮಾಡಿದ್ದಾರೆ ಎನ್ನಲಾದ ಜಮೀನಿಗೆ ಬಗರ್‌ಹುಕುಂ ಅರ್ಜಿ ಸಲ್ಲಿಸಿದ್ದರು, ತಿರಸ್ಕರಿಸಲಾಗಿದೆ.ಈ ಬಗ್ಗೆ ಸಿವಿಲ್ ಕೋರ್ಟ್‌ನಲ್ಲಿ ಪ್ರಕರಣ ನಡೆಯುತ್ತಿದೆ. ತೀರ್ಪಿನ ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.