ಮಂಗಳವಾರ, ಮೇ 24, 2022
27 °C

ತೆರವು ವಿರುದ್ಧ ನ್ಯಾಯಾಲಯಕ್ಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೆರವು ವಿರುದ್ಧ ನ್ಯಾಯಾಲಯಕ್ಕೆ?

ಚಿಂಚೋಳಿ: ಬರುವ ಭಾನುವಾರ ನಿಗದಿಯಾದ ಬಹುನಿರೀಕ್ಷಿತ ರಾಜ್ಯ ಹೆದ್ದಾರಿ ಒತ್ತುವರಿ ತೆರವಿಗಾಗಿ ಪಟ್ಟಣದಲ್ಲಿ ಬುಧವಾರ ಪ.ಪಂ. ಎಂಜಿನಿಯರ್ ಅಶೋಕ ಪುಟಪಾಕ್ ನೇತೃತ್ವದಲ್ಲಿ ಸಿಬ್ಬಂದಿ ರಸ್ತೆಯ ಸಮೀಕ್ಷೆ ನಡೆಸಿ ಕಟ್ಟಡಗಳ ತೆರವಿನ ಭಾಗಕ್ಕೆ ಕೆಂಪು ಪೇಂಟನಿಂದ ಗುರುತು ಹಾಕಲಾಯಿತು.ಮಂಗಳವಾರ ತಾಲ್ಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿಪಲ್ಲವಿ ಅಕುರಾತಿ ಅಧ್ಯಕ್ಷತೆಯಲ್ಲಿ ಪಟ್ಟಣ ಪಂಚಾಯಿತಿ ಚುನಾಯಿತ ಸದಸ್ಯರ ಹಾಗೂ ಅಧಿಕಾರಿಗಳ ಸಭೆಯಲ್ಲಿ ನಿಗದಿಯಾದಂತೆ ಬುಧವಾರ ಒತ್ತುವರಿಯಾದ ಕಟ್ಟಡಗಳ ತೆರವುಗೊಳಿಸುವ ಭಾಗವನ್ನು ಗುರುತಿಸಿದರು.ದಕ್ಷಿಣೋತ್ತರ ಮಾರ್ಗದ ರಸ್ತೆಯಲ್ಲಿ ಪೂರ್ವಾಭಿಮುಖವಾಗಿ ನಿರ್ಮಾಣಗೊಂಡ ವಾಣಿಜ್ಯ ಮಳಿಗೆಗಳನ್ನು ರಸ್ತೆಯ ಮಧ್ಯದಿಂದ ಎರಡು ಬದಿಗೆ ತಲಾ 21 ಮೀಟರ್ ಅಳೆದು ಕೊನೆಗೆ ಗುರುತು ಹಾಕಲಾಯಿತು.ಮಂಗಳವಾರ ಸಮೀಕ್ಷೆಯ ಪ್ರಕಾರ ಇಲ್ಲಿನ ಅಂಬೇಡ್ಕರ್ ಕ್ರಾಸ್‌ನಲ್ಲಿ ಐಡಿಎಸ್‌ಎಂಟಿ ಯೋಜನೆಯ ಅಡಿಯಲ್ಲಿ ನಿರ್ಮಿಸಿದ ಪಟ್ಟಣ ಪಂಚಾಯಿತಿಯ ಮಳಿಗೆಗಳ ಭಾಗಶ: ಹಾಗೂ ಹಳೆ ಪ್ರವಾಸಿ ಮಂದಿರ, ಜೆಎಂಎಫ್‌ಸಿ ನ್ಯಾಯಾಲಯ ಮತ್ತು ಬಸ್ ನಿಲ್ದಾಣಗಳ ಆವರಣ ಗೋಡೆ ನೆಲ ಸಮವಾಗಲಿದ್ದು, ಉಳಿದಂತೆ ಪೂರ್ವಾಭಿಮುಖವಾಗಿ ನಿರ್ಮಾಣಗೊಂಡ ನೂರಾರು ಕಟ್ಟಡಗಳು 3 ಅಡಿಯಿಂದ ಆರಂಭವಾಗಿ 20 ಅಡಿಗಳವರೆಗೆ ನೆಲಸಮವಾಗಲಿವೆ. ಪಟ್ಟಣ ಪಂಚಾಯಿತಿಯ ವೆಂಕಟೇಶ ಹಾಗೂ ಹಾಫೀಜ್ ಮುಂತಾದವರು ಇದ್ದರು.ಡಿಸಿ ಬಳಿಗೆ ನಿಯೋಗ: ಕಟ್ಟಡಗಳ ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಶಾಸಕ ಸುನೀಲ ವಲ್ಯ್‌ಪುರ ನೇತೃತ್ವದಲ್ಲಿ ವರ್ತಕರ ನಿಯೋಗ ಜಿಲ್ಲಾಧಿಕಾರಿ ಡಾ. ಆರ್ ವಿಶಾಲ್ ಅವರನ್ನು ಬುಧವಾರ ಗುಲ್ಬರ್ಗದಲ್ಲಿ ಭೇಟಿ ಮಾಡಿ ಒತ್ತುವರಿ ತೆರವು ಕಾರ್ಯಾಚರಣೆ 21 ಅಡಿ ಕೈಬಿಟ್ಟು 15 ಅಡಿವರೆಗೆ ಮಾಡಬೇಕೆಂದು ಮನವಿ ಸಲ್ಲಿಸಿದೆ. ನಿಯೋಗದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ರೇವಣಸಿದ್ದಪ್ಪ ಮಜ್ಜಗಿ, ವರ್ತಕರ ಸಂಘದ ಅಧ್ಯಕ್ಷ ನಾರಾಯಣ ಕೊಟ್ರಕಿ, ಪ.ಪಂ. ಅಧ್ಯಕ್ಷ ಅಬ್ದುಲ್ ಬಾಷೀತ್, ಸದಸ್ಯ ಸತ್ತಾರ ಖುರೇಷಿ, ಶಿವಪುತ್ರಪ್ಪ ಸುಂಕದ್, ಗೌತಮ ಪಾಟೀಲ್, ಹರ್ಷಾ ಹಸರಗುಂಡಗಿ, ಗೋಪಾಲರೆಡ್ಡಿ ಚಂದ್ರಪಳ್ಳಿ, ಭೀಮಶೆಟ್ಟಿ ಜಾಬಶೆಟ್ಟಿ, ಶಶಿಧರ ಸೂಗೂರು ಮುಂತಾದವರು ಇದ್ದರು.ನ್ಯಾಯಾಲಯಕ್ಕೆ ಮೊರೆ?: ರಾಜ್ಯ ಹೆದ್ದಾರಿ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಕಾರ್ಯಾಚರಣೆ ಕಾನೂನು ಬಾಹಿರ ಎಂದು ವಾದಿಸಿ ವರ್ತಕರು ಉಚ್ಚ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಅಧಿಕವಾಗಿದೆ. ಜಿಲ್ಲಾಧಿಕಾರಿ ಆರ್. ವಿಶಾಲ ಅವರಿಗೆ ಮನವಿ ಸಲ್ಲಿಸಿದರು ಸಕಾರಾತ್ಮಕವಾಗಿ ಅವರಿಂದ ಭರವಸೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ವರ್ತಕರು ಈ ಬಗ್ಗೆ ಯೋಚಿಸುತ್ತಿದ್ದಾರೆ ಎನ್ನಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.