ತೆರಿಗೆಗಳ್ಳರ ಪತ್ತೆಗೆ ಕ್ರಮ: ಚಿಂತನೆ

ಸೋಮವಾರ, ಜೂಲೈ 22, 2019
27 °C

ತೆರಿಗೆಗಳ್ಳರ ಪತ್ತೆಗೆ ಕ್ರಮ: ಚಿಂತನೆ

Published:
Updated:

ನವದೆಹಲಿ (ಐಎಎನ್‌ಎಸ್):  ತೆರಿಗೆಗಳ್ಳರು ಹಾಗೂ ಅವರ ಆಸ್ತಿ ಪತ್ತೆಗಾಗಿ ಖಾಸಗಿ ಸಂಸ್ಥೆಗಳನ್ನು ನಿಯೋಜಿಸಲು ಸರ್ಕಾರ ಆಲೋಚಿಸುತ್ತಿದೆ. ಸತತ ತೆರಿಗೆ ವಂಚನೆ ಮಾಡುತ್ತಿರುವವರ ಹೆಸರನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸುವ ಸಾಧ್ಯತೆಗಳನ್ನೂ ಪರಿಶೀಲಿಸುತ್ತಿದೆ.ಈ ನಿಟ್ಟಿನಲ್ಲಿ ನಿಯಮಾವಳಿ ರೂಪಿಸಲು ಹಾಗೂ ದೇಶದಲ್ಲಿನ ಕಪ್ಪುಹಣದ ಉಪಟಳ ಕಡಿಮೆ ಮಾಡುವ ದಿಸೆಯಲ್ಲಿ ತೆರಿಗೆಗಳ್ಳರ ಪತ್ತೆಗೆ ಯಾವ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಅಧ್ಯಯನ ನಡೆಸಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗಿದೆ.ಹಣಕಾಸು ಸಚಿವಾಲಯದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲಿರುವ ಈ ಸಮಿತಿಯು ಸಾರ್ವಜನಿಕ ವಲಯದಲ್ಲಿನ ತೆರಿಗೆ ಸೋರಿಕೆ ಪತ್ತೆ ಮಾಡುತ್ತದೆ ಎಂದು ಆರ್ಥಿಕ ಸಚಿವಾಲಯ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ.ಆದಾಯ ತೆರಿಗೆ ವಿಭಾಗದ ಪ್ರಧಾನ ನಿರ್ದೇಶಕಿ ಅನಿತಾ ಕಪೂರ್ ಸಮಿತಿಯ ಅಧ್ಯಕ್ಷತೆ ವಹಿಸಲಿದ್ದಾರೆ. ನಾಪತ್ತೆಯಾಗಿರುವ ತೆರಿಗೆದಾರರು ಹಾಗೂ ಅವರ ಆಸ್ತಿ, ಬೇನಾಮಿ ಆಸ್ತಿಗಳ ಪತ್ತೆಗೆ ಖಾಸಗಿ ಸಂಸ್ಥೆಗಳ ಸಹಾಯ ಪಡೆಯುವ ಸಾಧ್ಯತೆಯನ್ನು ಪರಿಶೀಲಿಸಲಿರುವ ಸಮಿತಿ, ಎರಡು ತಿಂಗಳಲ್ಲಿ ವರದಿ ಸಲ್ಲಿಸಲಿದೆ.ತೆರಿಗೆ ಸಂಗ್ರಹ ಹೆಚ್ಚಿಸುವ ನಿಟ್ಟಿನಲ್ಲಿ ತೆರಿಗೆಗಳ್ಳರ ಮಾಹಿತಿ ನೀಡುವವರಿಗೆ ಬಹುಮಾನ ನೀಡುವ ಯೋಜನೆ ರೂಪಿಸುವ ಕುರಿತೂ ಮಂಡಳಿ ಆಲೋಚಿಸುತ್ತಿದೆ ಎನ್ನಲಾಗಿದೆ.ಹಿಂದಿನ ತಿಂಗಳಷ್ಟೇ ಕೇಂದ್ರ ಸರ್ಕಾರವು ದೇಶದಲ್ಲಿನ ಕಪ್ಪುಹಣ ಪತ್ತೆಹಚ್ಚಲು ಮತ್ತು ಇದರ ಉಪಟಳ ತಡೆಗಟ್ಟಲು ಸೂಕ್ತ ಕಾನೂನು ಚೌಕಟ್ಟು ರಚನೆಗಾಗಿ ಉನ್ನತ ಮಟ್ಟದ ಸಮಿತಿಯೊಂದನ್ನು ನೇಮಕ ಮಾಡಿದೆ. ಕಪ್ಪು ಹಣ ರಾಷ್ಟ್ರೀಯ ಹಣವೆಂದು ಘೋಷಿಸಲು ತೀರ್ಮಾನಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry