ಗುರುವಾರ , ನವೆಂಬರ್ 21, 2019
21 °C
ಪ್ರಮುಖ ಕಟ್ಟಡಗಳ ಅಳತೆಗೆ ವಿಟಿಯು ಜತೆ ಒಪ್ಪಂದ

ತೆರಿಗೆಗಳ್ಳರ ಪತ್ತೆಗೆ ಬಿಬಿಎಂಪಿ ಯತ್ನ

Published:
Updated:

ಬೆಂಗಳೂರು: ನಗರದ ದೊಡ್ಡ ತೆರಿಗೆಗಳ್ಳರನ್ನು ಪತ್ತೆ ಹಚ್ಚಲು ನಿರ್ಧರಿಸುವ ಬಿಬಿಎಂಪಿ, ಈ ಸಂಬಂಧ ಎಲ್ಲ ವಲಯಗಳ ಪ್ರಮುಖ ಆಸ್ತಿಗಳ ನಿಖರ ವಿಸ್ತೀರ್ಣ ಅಳತೆ ಮಾಡಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಜೊತೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ. ಬಿಬಿಎಂಪಿ ಆಯುಕ್ತ ಸಿದ್ದಯ್ಯ ಮಾಧ್ಯಮ ಪ್ರತಿನಿಧಿಗಳಿಗೆ ಬುಧವಾರ ಈ ವಿಷಯ ತಿಳಿಸಿದರು.`ವಿಟಿಯು ಕುಲಪತಿಗಳು ಇದೇ 6ರಂದು ಬೆಂಗಳೂರಿಗೆ ಆಗಮಿಸಲಿದ್ದು, ಒಡಂಬಡಿಕೆಗೆ ಸಹಿ ಹಾಕಲಿದ್ದಾರೆ. ವಾಣಿಜ್ಯ ಸಂಕೀರ್ಣಗಳು, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಹೋಟೆಲ್‌ಗಳು, ಟೆಕ್ ಪಾರ್ಕ್‌ಗಳು, ಮಾಲ್‌ಗಳು ಮತ್ತು ಕ್ಲಬ್‌ಗಳ ಕಟ್ಟಡಗಳನ್ನು ಅಳತೆ ಮಾಡಲಾಗುವುದು' ಎಂದು ಮಾಹಿತಿನೀಡಿದರು.`ಬಹುತೇಕ ಪ್ರತಿಷ್ಠಿತ ಕಟ್ಟಡಗಳ ಮಾಲೀಕರು ಸ್ವಯಂಘೋಷಿತ ಆಸ್ತಿ ತೆರಿಗೆಯಲ್ಲಿ ತಪ್ಪು ಮಾಹಿತಿ ನೀಡಿ, ದೊಡ್ಡ ಪ್ರಮಾಣದಲ್ಲಿ ತೆರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಈ ಆಂದೋಲನ ನಡೆಸುವುದು ಅನಿವಾರ್ಯವಾಗಿದೆ' ಎಂದು ಹೇಳಿದರು.

`ಬೆಸ್ಕಾಂನಿಂದ ವಾಣಿಜ್ಯ ಉದ್ದೇಶಕ್ಕೆ ವಿದ್ಯುತ್ ಸಂಪರ್ಕ ಪಡೆದ ಎಲ್ಲ ಕಟ್ಟಡಗಳನ್ನು ತಪಾಸಣೆ ಮಾಡಲಾಗುವುದು. ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂತಹ 7.20 ಲಕ್ಷ ಕಟ್ಟಡಗಳಿವೆ' ಎಂದು ಅವರು ತಿಳಿಸಿದರು.`ಕಟ್ಟಡಗಳ ಸಮೀಕ್ಷಾ ಕಾರ್ಯ ಮುಗಿದ ಮೇಲೆ ಪ್ರತಿ ವಲಯದಲ್ಲಿ ಕನಿಷ್ಠ ರೂ 500 ಕೋಟಿಯಷ್ಟು ಹೆಚ್ಚುವರಿ ಆದಾಯ ಸಿಗುವ ನಿರೀಕ್ಷೆ ಇದೆ. ರೂ 3000 ಕೋಟಿಯಷ್ಟು ವರಮಾನ ನಮಗೆ ಲಭ್ಯವಾಗಲಿದೆ' ಎಂದು ಹೇಳಿದರು. `ಚುನಾವಣಾ ಕಾರ್ಯಭಾರದ ನಡುವೆಯೂ ನಮ್ಮ ಸಿಬ್ಬಂದಿ ನಿತ್ಯ ಕನಿಷ್ಠ 20 ಪ್ರತಿಷ್ಠಿತ ಕಟ್ಟಡಗಳ ಅಳತೆ ಮಾಡುತ್ತಿದ್ದಾರೆ' ಎಂದು ಮಾಹಿತಿ ನೀಡಿದರು.ಸಂಖ್ಯೆ ನಮೂದು ಕಡ್ಡಾಯ: `ಇನ್ನುಮುಂದೆ ಆಸ್ತಿ ತೆರಿಗೆ ತುಂಬುವಾಗ ಆರ್.ಆರ್. ಸಂಖ್ಯೆ ಮತ್ತು ಜಲಮಂಡಳಿ ಸಂಪರ್ಕ ಸಂಖ್ಯೆ ನಮೂದಿಸುವುದನ್ನು ಕಡ್ಡಾಯ ಮಾಡಲಾಗುವುದು' ಎಂದು ಹೇಳಿದರು. `ನಗರದ ಎಲ್ಲ ವಾಣಿಜ್ಯ ಕಟ್ಟಡಗಳನ್ನು ಪತ್ತೆ ಹಚ್ಚುವುದು ಇದರಿಂದ ಸುಲಭವಾಗಲಿದೆ' ಎಂದು ಅವರು ಅಭಿಪ್ರಾಯಪಟ್ಟರು.

ಪ್ರತಿಕ್ರಿಯಿಸಿ (+)