ತೆರಿಗೆ ನೀಡಲು ಸಾಫ್ಟ್‌ವೇರ್ ಕಂಪೆನಿಗಳಿಗೆ ಆದೇಶ

7

ತೆರಿಗೆ ನೀಡಲು ಸಾಫ್ಟ್‌ವೇರ್ ಕಂಪೆನಿಗಳಿಗೆ ಆದೇಶ

Published:
Updated:

ಬೆಂಗಳೂರು: ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾಹಿತಿ ತಂತ್ರಜ್ಞಾನ ಕಂಪೆನಿಗಳು ವಿದೇಶಿ ಕಂಪೆನಿಗಳಿಂದ ಸಾಫ್ಟ್‌ವೇರ್ ಖರೀದಿ ಮಾಡುವಾಗ ನೀಡುವ ಶುಲ್ಕಕ್ಕೆ ಅನುಗುಣವಾಗಿ ಆದಾಯ ತೆರಿಗೆ ನೀಡುವುದು ಕಡ್ಡಾಯ ಎಂದು ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.ಈ ಶುಲ್ಕವು `ರಾಯಧನ~ಕ್ಕೆ ಸಮನಾಗಿರುವ ಕಾರಣ, ಶುಲ್ಕ ಕಟ್ಟಲೇಬೇಕು ಎಂದು ನ್ಯಾಯಮೂರ್ತಿಗಳಾದ ವಿ.ಜಿ.ಸಭಾಹಿತ ಹಾಗೂ ರವಿ ಮಳೀಮಠ ಅವರನ್ನು ಒಳಗೊಂಡ ವಿಭಾಗೀಯ ಪೀಠ ಆದೇಶಿಸಿದೆ.ಈ ಆದೇಶದಿಂದಾಗಿ, ಹೈಕೋರ್ಟ್‌ನಲ್ಲಿ ಪ್ರತಿವಾದಿಗಳಾಗಿರುವ ಇನ್‌ಫೋಸಿಸ್, ಎಚ್.ಪಿ, ವಿಪ್ರೊ, ಸ್ಯಾಮ್‌ಸಂಗ್ ಸೇರಿದಂತೆ ಹಲವಾರು ಸಾಫ್ಟ್‌ವೇರ್ ಕಂಪೆನಿಗಳಿಗೆ ಹಿನ್ನಡೆಯುಂಟಾಗಿದೆ. ಈ ಎಲ್ಲ ಕಂಪೆನಿಗಳು 2000ನೇ ಸಾಲಿನಿಂದ ಬಾಕಿ ಉಳಿಸಿಕೊಂಡಿರುವ ತೆರಿಗೆಯನ್ನು ವಸೂಲಿ ಮಾಡಲು ಆದಾಯ ತೆರಿಗೆ ಇಲಾಖೆಗೆ ಹಸಿರು ನಿಶಾನೆ ದೊರೆತಂತಾಗಿದೆ. ಇವುಗಳು ಬಾಕಿ ಉಳಿಸಿಕೊಂಡಿರುವ ಕೋಟ್ಯಂತರ ರೂಪಾಯಿ ತೆರಿಗೆಯ ಹಣವನ್ನು ಈಗ ಪಾವತಿ ಮಾಡಬೇಕಿದೆ.ತೆರಿಗೆ ನೀಡುವ ಅಗತ್ಯ ಇಲ್ಲ ಎಂದು 2005ರಲ್ಲಿ ಕಂಪೆನಿಗಳ ಪರವಾಗಿ ಆದೇಶ ಹೊರಡಿಸಿದ್ದ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ ಆದೇಶ ಪ್ರಶ್ನಿಸಿ ಇಲಾಖೆ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಪೀಠ ನಡೆಸಿತು.ಭಾರತದಲ್ಲಿರುವ ಕಂಪೆನಿಗಳಿಂದ ಈ ರೀತಿಯ ಸಾಫ್ಟ್‌ವೇರ್ ಖರೀದಿ ಮಾಡಿದಾಗ ತೆರಿಗೆ ಕಟ್ಟುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿದೇಶಿ ಕಂಪೆನಿಗಳಿಂದ ಖರೀದಿ ಮಾಡಿದ ಮಾತ್ರಕ್ಕೆ ತೆರಿಗೆ ನೀಡಬೇಕು ಎನ್ನುವುದು ಸರಿಯಲ್ಲ ಎನ್ನುವುದು ಕಂಪೆನಿಗಳ ವಾದವಾಗಿತ್ತು. ಆದರೆ ಈ ವಾದವನ್ನು ಕೋರ್ಟ್ ಮಾನ್ಯ ಮಾಡಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry