ಸೋಮವಾರ, ನವೆಂಬರ್ 18, 2019
23 °C

ತೆರಿಗೆ ವಂಚಕರ `ಜಾತಕ' ಶೀಘ್ರ ಬಯಲು

Published:
Updated:

ವಾಷಿಂಗ್ಟನ್ (ಐಎಎನ್‌ಎಸ್): ಭಾರತವೂ ಸೇರಿದಂತೆ ವಿಶ್ವದ 170 ರಾಷ್ಟ್ರಗಳ ರಾಜಕಾರಣಿಗಳು, ನಟರು, ಆಗರ್ಭ ಶ್ರೀಮಂತರ ತೆರಿಗೆ ವಂಚನೆ, ರಹಸ್ಯ ಒಪ್ಪಂದ, ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಸ್ಫೋಟಕ ಹಾಗೂ ಬೆಚ್ಚಿಬೀಳಿಸುವ ರಹಸ್ಯ ಮಾಹಿತಿಗಳನ್ನು ತನಿಖಾ ವರದಿಗಾರರ ಅಂತರರಾಷ್ಟ್ರೀಯ ಒಕ್ಕೂಟ ಬಹಿರಂಗಗೊಳಿಸಿದೆ.ದೇಶ, ವಿದೇಶಗಳ ಒಟ್ಟು 120,000 ಸಾಗರೋತ್ತರ ಕಂಪೆನಿಗಳು, ಟ್ರಸ್ಟ್ ಹಾಗೂ 1.30 ಲಕ್ಷ ಗಣ್ಯಾತಿಗಣ್ಯರು, ಏಜೆಂಟರ ರಹಸ್ಯಗಳನ್ನು ಒಳಗೊಂಡ ಸುಮಾರು 25 ಲಕ್ಷ ಗೋಪ್ಯ ಕಡತಗಳನ್ನು ಸಂಗ್ರಹಿಸಿರುವುದಾಗಿ ಒಕ್ಕೂಟ ಹೇಳಿಕೊಂಡಿದೆ.  `ತೆರಿಗೆ ವಂಚಕರ ರಹಸ್ಯ ತಾಣಗಳ ಮೇಲೆ ಪಾರದರ್ಶಕ ನೋಟ' ಎಂಬ ವರದಿಯನ್ನು ಸಿದ್ಧಪಡಿಸಿರುವ ವರದಿಗಾರರ ಒಕ್ಕೂಟ, ಮುಂಬರುವ ದಿನಗಳಲ್ಲಿ `ಸಾಗರೋತ್ತರ ಜಗತ್ತಿನ ಹಣಕಾಸು ವಹಿವಾಟಿನ ರಹಸ್ಯಗಳು ಮಾರಾಟಕ್ಕಿವೆ' ಎಂಬ ಹೆಸರಿನ ಅಡಿ  ಪ್ರತಿ ದೇಶಗಳಿಗೆ ಸಂಬಂಧಿಸಿದ ವರದಿಯನ್ನು ಬಹಿರಂಗಗೊಳಿಸುವುದಾಗಿ ಹೇಳಿದೆ. ಇದರಿಂದಾಗಿ ಅನೇಕ ರಾಷ್ಟ್ರಗಳ ಗಣ್ಯರಿಗೆ ನಡುಕ ಶುರುವಾಗಿದೆ.ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆದ ಅತಿ ದೊಡ್ಡ ತನಿಖಾ ವರದಿ ಇದಾಗಿದ್ದು, ತನ್ನ 15 ವರ್ಷಗಳ ಇತಿಹಾಸದಲ್ಲಿಯ ಭರ್ಜರಿ ಬೇಟೆ ಇದಾಗಿದೆ ಎಂದು ಒಕ್ಕೂಟ ಹೇಳಿಕೊಂಡಿದೆ. 1997ರಲ್ಲಿ  ವಾಷಿಂಗ್ಟನ್‌ದಲ್ಲಿ ಅಸ್ತಿತ್ವಕ್ಕೆ ಬಂದ ಈ ಒಕ್ಕೂಟದಲ್ಲಿ ಭಾರತವೂ ಸೇರಿ 46 ವಿವಿಧ ರಾಷ್ಟ್ರಗಳ 86 ತನಿಖಾ ವರದಿಗಾರರು ಕೆಲಸ ಮಾಡುತ್ತಿದ್ದಾರೆ.ಈ ಕಡತಗಳಲ್ಲಿ ಬ್ರಿಟನ್‌ನ ವರ್ಜಿನ್, ಕುಕ್ ದ್ವೀಪ ಹಾಗೂ ಸಿಂಗಪುರ ಮತ್ತು ಇತರ ತೆರಿಗೆ ವಂಚಕರ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿಗಳಿವೆ.

ಅಮೆರಿಕದ ಪ್ರಖ್ಯಾತ ವೈದ್ಯರು, ದಂತ ವೈದ್ಯರು ಮತ್ತು ಗ್ರೀಕ್‌ನ ಮಧ್ಯಮ ವರ್ಗದ ಗ್ರಾಮಸ್ಥರು, ರಷ್ಯಾದ ಕಾರ್ಪೊರೇಟ್ ಜಗತ್ತಿನ ಅಧಿಕಾರಿಗಳು, ಪೂರ್ವ ಐರೋಪ್ಯ ಒಕ್ಕೂಟ ಮತ್ತು ಇಂಡೊನೇಷ್ಯಾದ ಆಗರ್ಭ ಶ್ರೀಮಂತರು, ವಾಲ್‌ಸ್ಟ್ರೀಟ್‌ನ ವಂಚಕರು, ಅಂತರರಾಷ್ಟ್ರೀಯ ಶಸ್ತ್ರಾಸ್ತ್ರ ಮಾರಾಟಗಾರರು, ಸರ್ವಾಧಿಕಾರಿಗಳು ಮತ್ತು ನಿರಂಕುಶಾಧಿಕಾರಿಗಳ ಸಂಬಂಧಿಕರ ಜಾತಕ ತಮ್ಮ ಬಳಿ ಇವೆ ಎಂದು ಮಾಧ್ಯಮ ಪ್ರತಿನಿಧಿಗಳ ತಂಡ ಸುಳಿವು ನೀಡಿದೆ.

ಪ್ರತಿಕ್ರಿಯಿಸಿ (+)