ತೆರಿಗೆ ಸಂಗ್ರಹಕ್ಕೆ ಸಿದ್ಧ, ಅಭಿವೃದ್ಧಿಗೆ ಬದ್ಧ
ಗುಲ್ಬರ್ಗ: ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟ ಎಲ್ಲ ತೆರಿಗೆ ಬಾಕಿದಾರರಿಂದ ತೆರಿಗೆ ವಸೂಲಿ ಮಾಡಲು ಆಡಳಿತವು ಸಿದ್ಧವಾಗಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಬದ್ಧವಾಗಿದೆ ಎಂದು ಮೇಯರ್ ಸೋಮಶೇಖರ್ ಮೇಲಿನಮನಿ ಹೇಳಿದರು.
`ಕೆಜಿ ತರಕಾರಿಗಿಂತಲೂ ಅಂಗಡಿಯೇ ಅಗ್ಗ~ ಆಗಿದ್ದ ನಗರದ ಸೂಪರ್ಮಾರ್ಕೆಟ್ನ ಮುಖ್ಯ ತರಕಾರಿ ಮಾರುಕಟ್ಟೆಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
ಮೇಯರ್ ನೇತೃತ್ವದಲ್ಲಿ ಯೋಜನಾ ಮತ್ತು ನಗರ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಸಯ್ಯದ್ ಅಹ್ಮದ್, ಕರ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಭೀಮರೆಡ್ಡಿ ಪಾಟೀಲ್ ಹಾಗೂ ಸದಸ್ಯರಾದ ಶಿವಾನಂದ ಬಂಡಕ, ಫಯಾಜ್ ಹುಸೇನ್, ಶೇಕ್ ಹುಸೇನ್, ಕಾರ್ಯನಿರ್ವಾಹಕ ಎಂಜಿನಿಯರ್ ವಿಜಯಕುಮಾರ್, ವಲಯ ಆಯುಕ್ತ ಮಹ್ಮದ್ ಹಾಜಿ, ಕಿರಿಯ ಎಂಜಿನಿಯರ್ ಅಶೋಕ ಚಂದನ ಮತ್ತಿತರರು ನಗರದ ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತರಕಾರಿ ಮಾರುಕಟ್ಟೆಯ 70 ಬಾಕಿದಾರರ ಪೈಕಿ ಸುಮಾರು 40 ಮಂದಿ ಈಗಾಗಲೇ ತೆರಿಗೆ ಪಾವತಿಸಿದ್ದಾರೆ. ಉಳಿದ ತೆರಿಗೆ ಬಾಕಿದಾರರಿಗೆ ಅಂತಿಮ ನೋಟಿಸ್ ನೀಡಲಾಗುವುದು. ಆ ಬಳಿಕವೂ ತೆರಿಗೆ ಪಾವತಿಸದಿದ್ದರೆ ತೆರವುಗೊಳಿಸಲಾಗುವುದು. ಈ ಬಗ್ಗೆ ಕರ ಮತ್ತು ಹಣಕಾಸು ಹಾಗೂ ಮೇಲ್ಮನವಿ ಸ್ಥಾಯಿ ಸಮಿತಿಯಲ್ಲಿ ಚರ್ಚಿಸಲಾಗುವುದು. ಅಲ್ಲದೇ ಯೋಜನಾ ಮತ್ತು ನಗರ ಅಭಿವೃದ್ಧಿ ಸ್ಥಾಯಿ ಸಮಿತಿಯು ಸಭೆ ನಡೆಸಿ ಮೂಲ ಸೌಕರ್ಯ ಅಭಿವೃದ್ಧಿ, ಚರಂಡಿ, ನೀರು, ಸ್ವಚ್ಛತೆ, ರಸ್ತೆಗಳ ಬಗ್ಗೆ ಕಾರ್ಯ ಯೋಜನೆ ಸಿದ್ಧಗೊಳಿಸಲಿದೆ. ಆ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ತಿಳಿಸಿದರು.
ರಾಜ್ಯ ಹಣಕಾಸು ನಿಗಮ ನಿಧಿ (ಎಸ್ಎಫ್ಸಿ)ಯಿಂದ ಈ ಬಾರಿ 15.20 ಕೋಟಿ ರೂಪಾಯಿ ಪಡೆಯಲಿದ್ದೇವೆ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.